ನೂರಾರು ಯೋಜನೆ ಇದ್ದರೂ ತೊಲಗದ ಅಸ್ಪೃಶ್ಯತೆ
ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ನ. 23
ಸ್ವಾತಂತ್ರ್ಯೋತ್ತರ ಭಾರತದ ಆಶಯಗಳ ಜತೆ ಜತೆಗೆ ಸಾಹಿತ್ಯವು ಬೆಳೆಯಿತು. ಬಂಡಾಯ ಸಾಹಿತ್ಯ ಜನರ ಬದುಕು, ಜಾತಿ ಶೋಷಣೆ, ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿತು. ನೂರಾರು ಯೋಜನೆಗಳು ಭಾರತದಲ್ಲಿದ್ದಾಗ್ಯೂ ಅಸ್ಪೃಶ್ಯತೆ ತೊಡೆದು ಹಾಕಲಿಲ್ಲ ಎಂದು ಉಪನ್ಯಾಸಕ ನಾರಾಯಣ ಬೆಳಗುರ್ಕಿ ತಿಳಿಸಿದರು.
ತಾಲೂಕಿನ ಬಿಸಿಎಂ ಬಾಲಕರ ವಿದ್ಯಾರ್ಥಿ ನಿಲಯದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ 'ಕನ್ನಡ ಪೌರ್ಣಿಮೆ' ಕಾರ್ಯಕ್ರಮದಡಿ ದೇವನೂರು ಮಹಾದೇವರ ಸಾಹಿತ್ಯ ಚಿಂತನೆ ಸಾಹಿತ್ಯ ಸಂವಾದ ಕಾರ್ಯಕ್ರಮ ಜರುಗಿತು.
ದೇವನೂರು ಮಹಾದೇವರ ಕುಸುಮಬಾಲೆ, ಒಡಲಾಳ, ಅಮಾಸ ಮತ್ತು ಎದೆಗೆಬಿದ್ದ ಅಕ್ಷರ ಇನ್ನಿತರ ಕೃತಿಗಳ ರಚನೆ ಮೂಲಕ ಭಾರತೀಯ ಸಾಮಾಜಿಕ ಮನಸ್ಥಿತಿಯನ್ನು ಎಳೆಎಳೆಯಾಗಿ ಚಿತ್ರಿಸಿದ್ದಾರೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಎಂ. ಪಂಪಾಪತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇವನೂರು ಮಹಾದೇವ ದಲಿತರ ಪ್ರತೀಕ. ದಲಿತ ದಿವ್ಯವಾಣಿ, ಶೋಷಿತರ ಪರವಾಗಿ ಸದಾ ಧ್ವನಿಯೆತ್ತಿ ಸಮಾಜದ ಓರೆ-ಕೋರೆಗಳನ್ನು ತಿದ್ದುವ, ಸಮ ಸಮಾಜದ ಕರ್ತೃಶಕ್ತಿಯಾಗಿ ಕನ್ನಡ ನಾಡಿನಲ್ಲಿದ್ದರೆ ಶೋಷಿತರೆಲ್ಲರೂ ಒಂದಾಗಿ ಪುರೋಹಿತಶಾಹಿ ಸಮಾಜದ ಒಳಮರ್ಮ ಅರಿಯಬೇಕು. ಸೋಗಲಾಡಿ ಸಾಹಿತಿಗಳ ಮತ್ತು ಸಾಹಿತ್ಯವನ್ನು ಸೂಕ್ಷ್ಮವಾಗಿ ಆವಲೋಕಿಸುವುದರೊಂದಿಗೆ ಮಾನವೀಯತೆಗೆ ಒತ್ತು ನೀಡಬೇಕು ಎಂದರು.
ಶೋಷಿತರ ಬದುಕು ಸುಧಾರಿಸುವತ್ತ ಸಾಹಿತ್ಯವಾಗಲಿ, ಹೋರಾಟವಾಗಲಿ ಸಾಗಬೇಕೆಂಬ ಉತ್ಕಟ ಮನೋಭಾವ ಬೆಳೆಯಬೇಕು ಎಂದರು. ಜಾಗತೀಕರಣ ದೇಶದ ದೊಡ್ಡ ಶತ್ರುವಾಗಿದೆ. ಜಾಗತೀಕರಣದಿಂದಾಗಿ ಮಧ್ಯಮ ವರ್ಗದವರ ಪ್ರಮಾಣ ಕಡಿಮೆಯಾಗಿದೆ. ಮತ್ತೊಮ್ಮೆ ದೇಶ ಸಮ ಸಮಾಜಕ್ಕಾಗಿ ಚಳಿವಳಿ ಹೂಡುವ ಕಾಲ ಸನ್ನಿಹಿತವಾಗಿದೆ ಎಂದು ಹೇಳಿದರು.
ಬಿಸಿಎಂ ನಿಲಯ ಪಾಲಕರಾದ ಶ್ಯಾಮಪ್ಪನವರು ಕಸಾಪ ಅಧ್ಯಕ್ಷರಾದ ಎಂ. ಪಂಪಾಪತಿ ಹಾಗೂ ಗಣ್ಯರಿಗೆ ಸನ್ಮಾನ ಮಾಡಲಾಯಿತು.
ಪ್ರಾಚಾರ್ಯ ಜೆ.ಎಂ. ಕುಮಾರಸ್ವಾಮಿ, ವೀರಭದ್ರಯ್ಯ ಹಿರೇಮಠ, ವಕೀಲರಾದ ಎಸ್. ಶ್ರೀನಿವಾಸ, ಅಬ್ದುಲ್‌ನಬಿ, ಪಿ. ಬಸವರಾಜ, ಡಾ. ತರಸಾಲಪ್ಪ, ಡಾ. ಈರಣ್ಣ, ನಾಗರಾಜ ಶೆಟ್ಟಿ ಉಪಸ್ಥಿತರಿದ್ದರು.
ಶಿವಪ್ರಕಾಶ ಸ್ವಾಗತಿಸಿದರು. ಹುಲಿಕಟ್ಟಿ ಚನ್ನಬಸಪ್ಪ ನಿರೂಪಿಸಿದರು. ಎಚ್.ಎಸ್. ನಾಗರಾಜ, ಹಿರೇಮಠ, ಸಂಧ್ಯಾ, ಶ್ವೇತ ಸುಶ್ರಾವ್ಯವಾಗಿ ಕನ್ನಡದ ಭಾವಗೀತೆ ಮತ್ತು ಜಾನಪದ ಗೀತೆಗಳನ್ನು ಹಾಡಿ ಸಭಿಕರ ಮನ ರಂಜಿಸಿದರು. ಶಿಕ್ಷಕ ಅಂಜಿನಪ್ಪ ವಂದಿಸಿದರು.