ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಫಲಾನುಭವಿ ಆಯ್ಕೆಪಟ್ಟಿಗಿಲ್ಲ ಅನುಮೋದನೆ

Vishwanath S
Updated On : 24 Nov 2013, 2:47 am

ಹಗರಿಬೊಮ್ಮನಹಳ್ಳಿ: ಬಸವ ವಸತಿ ಯೋಜನೆಯಡಿ 2013-14ನೇ ಸಾಲಿನ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 28 ಗ್ರಾಮ ಪಂಚಾಯಿತಿಗಳು ಆಯ್ಕೆ ಮಾಡಿರುವ 560 ಫಲಾನುಭವಿಗಳ ಆಯ್ಕೆ ಪಟ್ಟಿಗೆ ಅನುಮೋದನೆ ನೀಡಲು ಶನಿವಾರ ಮಧ್ಯಾಹ್ನ ತಾಪಂ ಸಭಾಂಗಣದಲ್ಲಿ ಜರುಗಿದ ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಮಟ್ಟದ ವಸತಿ ಜಾಗೃತಿ ಸಮಿತಿ ನಿರಾಕರಿಸಿತು.
ಆರ್ಹರಲ್ಲದವರನ್ನು ಫಲಾನುಭವಿಗಳಾಗಿ ಆಯ್ಕೆ ಮಾಡಿರುವುದು, ಕ್ರಮಬದ್ಧವಿಲ್ಲದೆ ಗ್ರಾಮಸಭೆ ನಡೆಸಿರುವುದು ಸೇರಿದಂತೆ ಗ್ರಾಪಂಗಳು ಆಯ್ಕೆ ಮಾಡಿರುವ ಫಲಾನುಭವಿಗಳ ಆಯ್ಕೆ ಪಟ್ಟಿಯಲ್ಲಿ ಸಾಕಷ್ಟು ಲೋಪದೋಷಗಳಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿವೆ. ಬಡವರು, ವಸತಿ ರಹಿತರಿಗೆ ಕಾಯಂ ಸೂರು ಕಲ್ಪಿಸಲು ಸರ್ಕಾರ ಯೋಜನೆ ಜಾರಿಗೊಳಿಸಿದೆ. ಆದರೆ ನಿಮಗೆ ತೋಚಿದ ರೀತಿಯಲ್ಲಿ, ಇಷ್ಟ ಬಂದಂತೆ ಫಲಾನುಭವಿ ಆಯ್ಕೆ ಮಾಡಿದ್ದೀರಿ, ಲೋಪದೋಷಗಳಿಂದ ಕೂಡಿರುವ ಆಯ್ಕೆಪಟ್ಟಿಗೆ ಅನುಮೋದನೆ ನೀಡಲಾಗುವುದಿಲ್ಲ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್. ಭೀಮಾನಾಯ್ಕ ತಿಳಿಸಿದರು.
ಸ್ವತಂತ್ರರು: ಮನೆ ನೀಡುವ ಅಧಿಕಾರ ಗ್ರಾಮ ಪಂಚಾಯಿತಿಗಳದ್ದು, ಹಿಂದಿನ ಶಾಸಕರಂತೆ ನಾನು ಮನೆ ಹಂಚಿಕೆಯಲ್ಲಿ ಯಾವುದೆ ಹಸ್ತಕ್ಷೇಪ ಮಾಡುವುದಿಲ್ಲ. ಮನೆಗಳನ್ನು ನೀಡಲು ನೀವು ಸಂಪೂರ್ಣ ಸ್ವತಂತ್ರರು. ಹಾಗಂತ ನಿಮಗೆ ತೋಚಿದಂತೆ ಮನೆಗಳನ್ನು ಹಂಚಿಕೆ ಮಾಡಬಾರದು. ಇನ್ನು ಮುಂದೆ ಮನೆಗಳ ಹಂಚಿಕೆ ವಿಚಾರದಲ್ಲಿ ಸಾರ್ವಜನಿಕರಿಂದ ದೂರುಗಳು ಬಂದರೆ ಅಂತಹ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಕೈಗೊಳ್ಳಲು ಶಿಫಾರಸು ಮಾಡುತ್ತೇನೆ ಎಂದು ಎಚ್ಚರಿಸಿದ ಅವರು, ಗ್ರಾಮಸಭೆಯ ಮಹತ್ವ ಅರಿತುಕೊಳ್ಳಿ. ಒಂದಿಬ್ಬರು ಸದಸ್ಯರನ್ನು ಕೂಡಿಸಿಕೊಂಡು  ನಾಲ್ಕು ಗೋಡೆಗಳ ಮಧ್ಯೆ ನಡೆಸುವುದು ಗ್ರಾಮಸಭೆಯಾಗಲಾರದು ಎಂದರು.
ನಮಗೆ ಅಧಿಕಾರವಿಲ್ಲ: ನಲವತ್ತು ಸಾವಿರ ಜನರನ್ನು ಪ್ರತಿನಿಧಿಸುವ ನಮಗೆ ಒಂದು ಮನೆ ಕೊಡುವ ಅಧಿಕಾರವಿಲ್ಲ. ವಸತಿ ಯೋಜನೆ ಫಲಾನುಭವಿಗಳ ಆಯ್ಕೆ ವಿಚಾರದಲ್ಲಿ  ಪಂಚಾಯಿತಿಯವರು ಸೌಜನ್ಯಕ್ಕಾದರು ನಮ್ಮನ್ನು ಪರಿಗಣಿಸುತ್ತಿಲ್ಲ. ನಮಗೂ ಮನೆ ನೀಡುವ ಅಧಿಕಾರ ಕೊಡಿ ಎಂದು ಸಭೆಯಲ್ಲಿ ಹಾಜರಿದ್ದ ಜಿಪಂ ಸದಸ್ಯರು ತಮ್ಮ ಅಳಲು ತೋಡಿಕೊಂಡರು. ಇದು ಸರ್ಕಾರದ ಮಟ್ಟದಲ್ಲಿ ಆಗಬೇಕಾದ ಕೆಲಸ ಎಂದು ಶಾಸಕರು ಉತ್ತರಿಸಿದರು.
ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ಜಿಪಂ ಸದಸ್ಯರಾದ ಕೋಗಳಿ ರತ್ನಮ್ಮ, ರೋಗಾಣಿ ಹುಲುಗಪ್ಪ, ತಿಪ್ಪಿಬಾಯಿ, ಚನ್ನಬಸವನಗೌಡ, ತಾಪಂ ಸದಸ್ಯರಾದ ಉಪ್ಪಾರ ಬಾಲಪ್ಪ, ಗುರುಪ್ರಸಾದ್, ಮಂಜುಳಾ ಕೃಷ್ಣನಾಯ್ಕ, ಭಾರತಮ್ಮ ಬೆಲ್ಲದ್, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ಕಡ್ಲಬಾಳು ಗ್ರಾಪಂ ಅಧ್ಯಕ್ಷೆ ಬಡಲಡಿಕಿ ಮಂಜುಳಾ, ಹಗರಿಬೊಮ್ಮನಹಳ್ಳಿ ಗ್ರಾಪಂ ಅಧ್ಯಕ್ಷ ಜಿ.ಎಂ. ಶಿವಕುಮಾರ್, ತಹಸೀಲ್ದಾರ್ ನಿತೀಶ್ ಪಾಟೀಲ್, ತಾಪಂ ಇಒ ಬಿಎಂಎಸ್ ವೀರಯ್ಯ, ಪಂ.ರಾ.ಇ. ಎಇಇ ಆರ್. ಪ್ರಭು ಸೇರಿದಂತೆ ಕ್ಷೇತ್ರದ ವ್ಯಾಪ್ತಿಗೆ ಬರುವ ಮರಿಯಮ್ಮನಹಳ್ಳಿ, ಕೊಟ್ಟೂರು ಹೊಬಳಿ ವ್ಯಾಪ್ತಿಯ ಗ್ರಾಪಂ ಅಧ್ಯಕ್ಷರು, ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.
ಮನೆ ನೀಡುವ ಅಧಿಕಾರ ಗ್ರಾಮ ಪಂಚಾಯಿತಿಗಳದ್ದು, ಹಿಂದಿನ ಶಾಸಕರಂತೆ ನಾನು ಮನೆ ಹಂಚಿಕೆಯಲ್ಲಿ ಯಾವುದೆ ಹಸ್ತಕ್ಷೇಪ ಮಾಡುವುದಿಲ್ಲ. ಮನೆಗಳನ್ನು ನೀಡಲು ನೀವು ಸಂಪೂರ್ಣ ಸ್ವತಂತ್ರರು. ಹಾಗಂತ ನಿಮಗೆ ತೋಚಿದಂತೆ ಮನೆಗಳನ್ನು ಬೇಕಾಬಿಟ್ಟಿ ಹಂಚಿಕೆ ಮಾಡಬಾರದು. ಇನ್ನು ಮುಂದೆ ಮನೆಗಳ ಹಂಚಿಕೆ ವಿಚಾರದಲ್ಲಿ ಸಾರ್ವಜನಿಕರಿಂದ ದೂರುಗಳು ಬಂದರೆ ಅಂತಹ ಗ್ರಾಮ ಪಂಚಾಯಿತಿ ಅಧಿಕಾರಿಗಳ ಮೇಲೆ ಸೂಕ್ತಕ್ರಮ ಕೈಗೊಳ್ಳಲು ಶಿಫಾರಸು ಮಾಡುತ್ತೇನೆ.
- ಎಸ್. ಭೀಮಾನಾಯ್ಕ, ಶಾಸಕ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement