ಸಮಾಜ ಒಡೆಯುವ ಬಗ್ಗೆ ಎಚ್ಚರವಿರಿ
ಕೂಡ್ಲಿಗಿ: ರಾಜಕೀಯ ಲಾಭಕ್ಕಾಗಿ ವಾಲ್ಮೀಕಿ ಸಮುದಾಯದಲ್ಲಿ ಒಳಪಂಗಡ ಸೃಷ್ಟಿಸುವವರ ಬಗ್ಗೆ ಎಚ್ಚರವಿರಿ. ವಾಲ್ಮೀಕಿ ಸಮಾಜದಲ್ಲಿ ಯಾವ ಪಂಗಡಗಳಿಲ್ಲ, ಆದರೆ ರಾಜಕೀಯ ಲಾಭಕ್ಕಾಗಿ ಕೆಲವರು ಒಳಪಂಗಡ ಸೃಷ್ಟಿಸಿ ಜನಾಂಗವನ್ನು ಛಿದ್ರಮಾಡುವ ಹುನ್ನಾರ ನಡೆಯುತ್ತಿದೆ. ಇಂತವರ ಬಗ್ಗೆ ಎಚ್ಚರವಿರಿ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠಾಧ್ಯಕ್ಷ ಶ್ರೀ ಪ್ರಸನ್ನಾನಂದಪುರಿ ಸ್ವಾಮೀಜಿ ಹೇಳಿದರು.
ಅವರು ಶುಕ್ರವಾರ ಮಧ್ಯಾಹ್ನ ನಡೆದ ಜಿಲ್ಲಾ ಮಟ್ಟದ ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಆಯ್ಕೆ ಸಭೆಯಲ್ಲಿ ಮಾತನಾಡಿ, ಸಂಘದ ಆಯ್ಕೆ ಮತ್ತು ಚಟುವಟಿಕೆ ಪಾರದರ್ಶಕವಾಗಿ ನಡೆಯಲಿ ಎಂಬ ಉದ್ದೇಶ ಇದೆ. ಒಂದೂವರೆ ವರ್ಷಗಳಿಂದ ಸಂಘದ ಚಟುವಟಿಕೆ ಕುಂಠಿತಗೊಂಡ ಹಿನ್ನೆಲೆಯಲ್ಲಿ ಎಲ್ಲ ಮುಖಂಡರ ಆಶಯದಂತೆ ಹಿಂದಿನ ಅಧ್ಯಕ್ಷ, ಕಾರ್ಯದರ್ಶಿಯನ್ನು ಬದಲಾಯಿಸಲು ತೀರ್ಮಾನಿಸಲಾಯಿತು ಎಂದು ತಿಳಿಸಿದರು.
ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಸಭಾ ನಿರ್ದೇಶಕರು ಎಲ್ಲ ತಾಲೂಕುಗಳಿಂದ ಆಗಮಿಸಿ ಸಲಹೆ, ಸೂಚನೆಗಳನ್ನು ನೀಡಿದರು. ಕೆಲ ಹೆಸರುಗಳನ್ನು ಜಿಲ್ಲಾಧ್ಯಕ್ಷ ಮತ್ತು ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಸೂಚಿಸಿ ಆಯ್ಕೆಯನ್ನು ಶ್ರೀಗಳಿಗೆ ಒಪ್ಪಿಸಿದರು. ಸೂಕ್ತ ಅಭ್ಯರ್ಥಿಯನ್ನು ಹದಿನೈದು ದಿನದೊಳಗೆ ಅಂತಿಮಗೊಳಿಸುವುದಾಗಿ ಸ್ವಾಮೀಜಿ ತಿಳಿಸಿದರು.
ಧರ್ಮದರ್ಶಿ ಜಂಬಯ್ಯ ನಾಯಕ, ಸ್ಥಳೀಯ ಮುಖಂಡರಾದ ಎನ್. ಮುದ್ದಪ್ಪ, ಕಾವಲ್ಲಿ ಶಿವಪ್ಪನಾಯಕ, ಸಿ.ಬಿ. ಜಯರಾಂ ನಾಯಕ, ಜಯಮ್ಮ, ಡಾ. ಕೊತ್ಲಮ್ಮ, ನಾಗಮಣಿ, ಲಕ್ಷ್ಮೀದೇವಿ, ಶಿಕ್ಷಕಿ ಗೀತಾ, ಬಿ.ಪಿ. ಚಂದ್ರಮೌಳಿ, ಗಾಣಗಟ್ಟೆ ಮಹಂತೇಶ್, ಪಾಪಣ್ಣ, ಟಿ. ಓಂಕಾರಪ್ಪ, ಗುಂಡುಮುಣುಗು ಎಸ್.ಪಿ. ಪ್ರಕಾಶ್, ತಳವಾರ ಶರಣಪ್ಪ, ಬೊಮ್ಮಗಟ್ಟ ಪಂಪಾಪತಿ, ಮಹೇಶ್, ಸಿ.ಬಿ. ಸಿದ್ದೇಶ್, ಭೀಮಲಿಂಗಪ್ಪ, ಕಡ್ಡಿ ಮಂಜುನಾಥ, ದುರ್ಗಾದಾಸ್, ಹುಲಿಕುಂಟೆಪ್ಪ, ಹುಲಿಕೆರೆ ಮಾರಣ್ಣ, ನೌಕರ ಸಂಘದ ಅಧ್ಯಕ್ಷ ಪಿ.ವಿ. ಕೊತ್ಲಪ್ಪ, ಸಿರುಗುಪ್ಪ ಚಲ್ಲಾಳಪ್ಪ, ಹಡಗಲಿ ಹನುಮಂತಪ್ಪ, ಹಗರಿಬೊಮ್ಮನಹಳ್ಳಿ ಪವಾಡಿ ಹನುಮಂತಪ್ಪ, ಸಂಡೂರು ಸಿ.ಎಂ. ಶಿಗ್ಗಾವಿ ಸೇರಿದಂತೆ ಹಲವರು ಇದ್ದರು.