ಕಾನೂನಿನಡಿ ಹೋರಾಡಿ: ಪಾಟೀಲ್
ಬಳ್ಳಾರಿ: ಸಮಸ್ಯೆಗಳಿಗೆ ಕಾನೂನಾತ್ಮಕವಾಗಿ ಹೋರಾಟ ಮಾಡಿದಾಗ ಮಾತ್ರ ಸಂಘಟನೆಗಳು ಜನರ ವಿಶ್ವಾಸ ಗಳಿಸಲು ಸಾಧ್ಯ ಎಂದು ಜೈ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಅರುಣ್ಕುಮಾರ್ ಪಾಟೀಲ್ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಜಿಲ್ಲೆಯ ಸಿರುಗುಪ್ಪ ತಾಲೂಕಿನ ಹಾಗಲೂರು ಗ್ರಾಮದಲ್ಲಿ ಏರ್ಪಡಿಸಿದ್ದ ಗಡಿನಾಡ ಕನ್ನಡಿಗರ ನಾಡಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನಾಡು, ನುಡಿ, ಗಡಿ, ನೆಲ, ಜಲ, ಸಂಸ್ಕೃತಿ, ರೈತ, ಕಾರ್ಮಿಕ, ವಿದ್ಯಾರ್ಥಿ, ಯುವಜನರ ಹಾಗೂ ಮಹಿಳೆಯರ ರಕ್ಷಣೆಯೂ ಒಳಗೊಂಡಂತೆ ನಾಡಿನ ಸರ್ವತೋಮುಖ ಬೆಳವಣಿಗೆಗೆ ಸಂಘಟನೆಗಳು ಶಕ್ತಿ ನೀಡಲಿವೆ. ಹೀಗಾಗಿ ಸಂಘಟನೆಯನ್ನು ವೈಯಕ್ತಿಕ ಕಾರಣಕ್ಕೆ ಬಳಸಿಕೊಳ್ಳದೆ, ಸಾರ್ವಜನಿಕರ ಸಮಸ್ಯೆಗಳ ವಿರುದ್ಧ ಹೋರಾಟಕ್ಕೆ ಬಳಸಿಕೊಳ್ಳಬೇಕು ಎಂದರು.
ನಂತರ ಗ್ರಾಮದ ಉತ್ತಮ ಶಿಕ್ಷಕರು ಹಾಗೂ ರಾಜ್ಯ ಮಟ್ಟಕ್ಕೆ ಆಯ್ಕೆಯಾದ ಖೋ ಖೋ ಕ್ರೀಡಾಪಟುಗಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಳ್ಳಾರಿ ವಿಎಸ್ಕೆ ವಿವಿ ಕುಲಸಚಿವ ಡಾ.ಕೆ. ವಿಜಯಕುಮಾರ್, ವೇದಿಕೆಯ ರಾಜ್ಯ ಉಪಾಧ್ಯಕ್ಷ ಮಂಜುನಾಥ ಹಾಗರಗಿ, ಬಿ. ಜಯಸಿಂಗ್, ಪ್ರಭುರಾಜ್ ಕೊಡ್ಲೆ, ಗಂಗಾಧರ ಸ್ವಾಮಿ, ಮಲ್ಲಿಕಾರ್ಜುನ ಕೊಡ್ಲೆ, ವೆಂಕಟೇಶ್, ಎಚ್. ರಮೇಶ್ ಗೋನಾಳ, ದರೂರು ಶಾಂತನಗೌಡ, ಕುಂದಾಪುರ ನಾಗರಾಜ್, ಅದ್ದಿಗೇರಿ ರಾಮಣ್ಣ, ಜೆ.ವಿ. ಮಂಜುನಾಥ್ ಸೇರಿದಂತೆ ಇತರರು ಇದ್ದರು.