ವಸತಿ ಯೋಜನೆಗೆ ಹೊಸ ಚಿಂತನೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 24
ಸರ್ಕಾರ ಮಂಜೂರು ಮಾಡುವ ವಸತಿ ಯೋಜನೆಯಲ್ಲಿ ಯಾವ ರಾಜಕಾರಣಿಗಳು ಹಸ್ತಕ್ಷೇಪ ಮಾಡದಂತೆ ನೇರವಾಗಿ ಅರ್ಹ ಫಲಾನುಭವಿಗಳಿಗೆ ಸಿಗುವ ಹೊಸ ಚಿಂತನೆ ಸರ್ಕಾರ ಮಟ್ಟದಲ್ಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ತಾಪಂ ಸಭಾಂಗಣದಲ್ಲಿ ಭಾನುವಾರ ನಡೆದ ವಸತಿ ಜಾಗ್ರತಿ ಸಭೆಯಲ್ಲಿ ಮಾತನಾಡಿ, ಈ ಹಿಂದೆ ಸರ್ಕಾರದ ಮನೆಗಳನ್ನು ಸಾಕಷ್ಟು ಗ್ರಾಪಂ ಸದಸ್ಯರು ಸೇರಿದಂತೆ ಸ್ಥಳೀಯ ಮಟ್ಟದ ನಾಯಕರ ಪಾಲಾಗುತ್ತಿದ್ದು, ನೇರವಾಗಿ ಅರ್ಹ ಫಲಾನುಭವಿಗೆ ಸಿಗದೆ ಮತ್ತೆ ಗುಡಿಸಲುಗಳೆ ಅವರಿಗೆ ಗತಿಯಾದವು. ಹೀಗಾಗಿ ಸರ್ಕಾರ ವಸತಿ ಯೋಜನೆಗೆ ಹೊಸ ನೀತಿಯನ್ನು ಶೀಘ್ರದಲ್ಲೇ ಜಾರಿಗೆ ತರಲಿದೆ ಎಂದರು.
ಅಮಾನತಿಗೆ ಆದೇಶ: 2013-14ನೇ ಸಾಲಿನ ಬಸವ ವಸತಿ ಯೋಜನೆಯಲ್ಲಿ ಗ್ರಾಪಂಗೆ ತಲಾ 20 ಮನೆಗಳನ್ನು ಮಂಜೂರು ಮಾಡಲಾಗಿದೆ. ಮನೆಗಳ ವಿಚಾರದಲ್ಲಿ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ಸ್ಥಳೀಯ ನಾಯಕರು, ಗ್ರಾಪಂ ಸದಸ್ಯರಿಗೆ ಮಣಿದು ಮನೆಗಳನ್ನು ವಿತರಣೆ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಅಮಾನತಿಗೆ ಆದೇಶಿಸಲಾಗುವುದು ಎಂದು ಎಚ್ಚರಿಸಿದ ಅವರು, ತಾಲೂಕಿನ ನಾಗತಿಬಸಾಪುರ ಗ್ರಾಪಂ ಕೆಲವು ವಿಚಾರಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಅಧ್ಯಕ್ಷರ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದು, ಸಾಕಷ್ಟು ಅವ್ಯವಹಾರಗಳಿಂದ ಅಪಖ್ಯಾತಿಗೆ ಒಳಗಾಗಿದೆ. ಆದರಿಂದ ಅಧಿಕಾರಿಗಳು ಬಹಳಷ್ಟು ಜಾಗೂರುಕತೆಯಿಂದ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಸೋಗಿ ಗ್ರಾಪಂ ಪಿಡಿಒ ಅನಧಿಕೃತ ಗೈರಾಗಿದ್ದಾರೆ. ಈ ಕುರಿತು ಜಿಪಂ ಸಿಇಒಗೆ ಪತ್ರ ಬರೆದು ಅವರನ್ನು ಅಮಾನತಿನಲ್ಲಿಡಲು ಇಒಗೆ ಆದೇಶಿಸಿದರು.
ಚೆಕ್ಬುಕ್ ಅಧ್ಯಕ್ಷರ ಮನೇಲಿ: ಏನ್ರೀ ಗ್ರಾಪಂನ ಎಂಬಿ ಬುಕ್, ಚೆಕ್ಬುಕ್ಗಳನ್ನು ಅಧ್ಯಕ್ಷರ ಮನೇಲಿ ಯಾಕೆ ಇದ್ದವು? ಸರ್ಕಾರಿ ದಾಖಲೆಗಳನ್ನು ಯಾರದೋ ಮನೇಲಿ ಇಡೋದಕ್ಕೆ ನಿಮಗೆ ಸರ್ಕಾರ ಅಧಿಕಾರ ಕೊಟ್ಟಿದೆಯಾ ಎಂದು ನಂದಿಹಳ್ಳಿ ಗ್ರಾಪಂ ಕಾರ್ಯದರ್ಶಿಯನ್ನು ಸಚಿವರು ತರಾಟೆಗೆ ತೆಗೆದುಕೊಂಡರು. ಮುದೇನೂರು ಕೆರೆ ಟೆಂಡರ್ ವಿಚಾರದಲ್ಲಿ ಗೊಂದಲ ಸೃಷ್ಟಿಸಿ ಜನರ ನೆಮ್ಮದಿ ಹಾಳು ಮಾಡಿದ್ದೀರಿ, ನಿಮಗೆ ಸರಿಯಾಗಿ ಕೆಲಸ ಆಗುತ್ತೋ ಇಲ್ಲವೇ ಎಂದು ಕಾರ್ಯದರ್ಶಿಯನ್ನು ಸಚಿವರು ಪ್ರಶ್ನಿಸಿದಾಗ ದಯಾಮಾಡಿ ನನಗೆ ಹಣಕಾಸಿನ ವಿಚಾರ ಒಂದು ಬಿಟ್ಟು ಬೇರ್ಯಾವ ಕೆಲಸ ಹೇಳಿದ್ರು ನಾನು ಮಾಡುತ್ತೇನೆ. ಗ್ರಾಪಂ ಸದಸ್ಯರು ಹಾಗೂ ಜನರ ನಡುವಿನ ಜಗಳಕ್ಕೆ ತಾವು ರೋಸಿ ಹೋಗಿದ್ದೇವೆಂದು ಗುರುಶಾಂತಯ್ಯ ಅಸಹಾಯಕತೆ ತೋಡಿಕೊಂಡರು.
ಸಚಿವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿನ ಎಲ್ಲ ಗ್ರಾಪಂ ಹಾಗೂ ಹಳ್ಳಿಗಳಲ್ಲಿ ತಮ್ಮ ಪಕ್ಷದ ನಾಯಕರು, ಸ್ಥಳೀಯ ಮುಖಂಡರ ಜತೆಗೆ ಚರ್ಚೆ ಮಾಡಿ ಮನೆಗಳನ್ನು ವಿತರಣೆ ಮಾಡಿ ಎಂದು ದ್ವಂದ್ವ ಹೇಳಿಕೆ ನೀಡಿದರು. ಇದರಿಂದ ಸಭೆಯಲ್ಲಿದ್ದ ಗ್ರಾಪಂ ಪಿಡಿಒ, ಕಾರ್ಯದರ್ಶಿಗಳು ಯಾರ ಮಾತನ್ನು ಕೇಳಿಬೇಕೆಂಬ ಗೊಂದಲದಲ್ಲಿ ಸಿಲುಕಿದಂತೂ ನಿಜ. ದಾಸನಹಳ್ಳಿ ಗ್ರಾಪಂನಲ್ಲಿ ಬೆಂಕಿ, ಬೂದಿ ಎರಡು ಇದೆ. ಸ್ವಲ್ಪ ಮಟ್ಟಿಗೆ ಎರಡು ಗುಂಪುಗಳ ನಡುವೆ ಸಮನ್ವಯ ಮಾಡಿ ಸಮಾಧಾನದಿಂದ ಮನೆಗಳನ್ನು ಹಂಚಿಕೆ ಮಾಡಿ ಎಂದು ಕಾರ್ಯದರ್ಶಿಗೆ ಸೂಚಿಸಿದರು.
ತಾಪಂ ಅಧ್ಯಕ್ಷೆ ಶಿಲ್ಪಾಸಿಂಗ್ ರಾಠೋಡ್, ಉಪಾಧ್ಯಕ್ಷೆ ಪ್ರೇಮಾ, ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ಜಿಪಂ ಸದಸ್ಯ ವಸಂತ, ಹರವಿ ಪ್ರಕಾಶ, ಇಒ ಡಿ. ಮಂಜಣ್ಣ ಇದ್ದರು.