ಸುದ್ದಿ ಸಂಕ್ಷೇಪ
ಪಡಿತರ ಅಕ್ರಮ: ರೈಸ್ಮಿಲ್ ಮೇಲೆ ದಾಳಿ
ಗಂಗಾವತಿ: ಗಂಗಾವತಿ ತಾಲೂಕಿನ ದಾಸನಾಳ ಸೇತುವೆ ಬಳಿ ಇರುವ ಕೆ.ಪಿ. ರೈಸ್ ಮಿಲ್ನಲ್ಲಿ ಪಡಿತರ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿಟ್ಟಿರುವ ಮಾಹಿತಿ ಹಿನ್ನೆಲೆಯಲ್ಲಿ ಗಂಗಾವತಿ ತಹಸೀಲ್ದಾರ್ ಗಂಗಪ್ಪ ನೇತೃತ್ವದ ತಂಡ ಭಾನುವಾರ ಸಂಜೆ ದಾಳಿ ನಡೆಸಿ 1200 ಕ್ವಿಂಟಲ್ ಅಕ್ಕಿ ವಶಪಡಿಸಿಕೊಂಡು ರೈಸ್ ಮಿಲ್ ಸೀಜ್ ಮಾಡಿದೆ. ಅನ್ನಭಾಗ್ಯ ಯೋಜನೆಯಡಿ ವಿತರಣೆ ಮಾಡುವ ಪಡಿತರ ಅಕ್ಕಿಯನ್ನು ಎಪಿಎಂಸಿ ಸದಸ್ಯ ಯಂಕಾರಡ್ಡಿ ಅವರ ಕೆ.ಪಿ. ರೈಸ್ಮಿಲ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿಡಲಾಗಿದೆ ಎನ್ನುವ ಬಲ್ಲ ಮಾಹಿತಿಯ ಆಧಾರದ ಮೇಲೆ ಗಂಗಾವತಿ ತಹಸೀಲ್ದಾರ್ ಗಂಗಪ್ಪ ಹಾಗೂ ಶಿರಸ್ತೇದಾರ್ ನೇತೃತ್ವದ ತಂಡ ಭಾನುವಾರ ಏಕಾಏಕಿ ರೈಸ್ ಮಿಲ್ ಮೇಲೆ ದಾಳಿ ಮಾಡಿದೆ. ದಾಳಿ ವೇಳೆ 1200 ಕ್ವಿಂಟಲ್ ಅಕ್ಕಿ ಸಂಗ್ರಹ ಮಾಡಿರುವುದು ಪತ್ತೆಯಾಗಿದ್ದು, ಎಲ್ಲ ಪಡಿತರ ಅಕ್ಕಿ ಚೀಲಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ರೈಸ್ಮಿಲ್ ಅನ್ನು ಸೀಜ್ ಮಾಡಿ ಮುದ್ರೆ ಜಡಿದಿದ್ದಾರೆ.
ನಾಪತ್ತೆ: ಎಪಿಎಂಸಿ ಸದಸ್ಯ ಯಂಕಾರಡ್ಡಿ ಎನ್ನುವವರಿಗೆ ಸೇರಿದ ರೈಸ್ಮಿಲ್ ಇದಾಗಿದ್ದು, ಮಾಹಿತಿ ಕೇಳಲು ತೆರಳಿದರೆ ಮಾಲೀಕ ಯಂಕಾರಡ್ಡಿ ಅವರು ನಾಪತ್ತೆಯಾಗಿರುವುದು ತಿಳಿದು ಬಂದಿದೆ. ಈ ಕುರಿತು ಕಂದಾಯ ಇಲಾಖೆ ಅಧಿಕಾರಿಗಳು ಗಂಗಾವತಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.
ದಂತ ತಪಾಸಣೆ ಶಿಬಿರ
ಹೊಸಪೇಟೆ: ಇಲ್ಲಿನ ರೌಂಡ್ ಟೇಬಲ್ ಸಂಸ್ಥೆ, ಎಸ್.ವಿ. ಚಟ್ಟಿ ಪೌಂಡೇಷನ್, ಎ.ಆರ್. ಉದ್ಯೋಗ್ ಏಜೆನ್ಸಿಸ್, ಮಿಲನ್ ಏಜೆನ್ಸಿಸ್ ಆಶ್ರಯದಲ್ಲಿ ಸಾಯಿರಾಂ ಪ್ಲಾಜಾದಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ ನಡೆಯಿತು. ಶಿಬಿರದಲ್ಲಿ ದಂತ ವೈದ್ಯ ಡಾ. ದೀಪು ಪಾಟೇಲ್ ಮತ್ತು ಡಾ.ಡಿ.ವಿ. ವಿದ್ಯಾ ಪಾಟೇಲ್ ಸೇರಿದಂತೆ ಇತರೆ ವೈದ್ಯರು ದಂತ ತಪಾಸಣೆ ನಡೆಸಿ, ಚಿಕಿತ್ಸೆ ನೀಡಿದರು. ಶಿಬಿರದಲ್ಲಿ 100ಕ್ಕೂ ಹೆಚ್ಚು ಜನರ ದಂತ ತಪಾಸಣೆ ನಡೆಸಿ, ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆಗೊಳಗಾದವರಿಗೆ ಉಚಿತ ಚಿಕಿತ್ಸೆ ಜತೆಗೆ ಔಷಧಿ ಸೇರಿದಂತೆ ಪೇಸ್ಟ್, ಬ್ರಷ್ ಹಾಗೂ ಮೌತ್ ವಾಷ್ ವಿತರಿಸಲಾಯಿತು. ಈ ಸಂದರ್ಭದಲ್ಲಿ ರೌಂಡ್ ಟೇಬಲ್ ಸಂಸ್ಥೆ ಕಾರ್ಯದರ್ಶಿ ಅರಳಿಹಳ್ಳಿ ಅಭಿನಿಷ್, ಖಜಾಂಚಿ ಕಾಕುಬಾಳು ಅವಿನಾಶ್ ಇತರರು ಭಾಗವಹಿಸಿದ್ದರು.