ಕುರುಗೋಡು ತಾಲೂಕಾಗಿಸಿ
ಕನ್ನಡಪ್ರಭ ವಾರ್ತೆ, ಕುರುಗೋಡು, ನ. 25
ಹಿಂದಿನ ಸರ್ಕಾರ ಘೋಷಿಸಿದ ಹೊಸ ತಾಲೂಕು ರಚನೆ ಬಗ್ಗೆ ಈಗಿನ ಕಾಂಗ್ರೆಸ್ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಜನ ಶಕ್ತಿ ಸಂಘದ ರಾಜ್ಯಾಧ್ಯಕ್ಷ ವೈ. ಪ್ರತಾಪರೆಡ್ಡಿ ಒತ್ತಾಯಿಸಿದರು.
ಪಟ್ಟಣದ ಬಾದನಹಟ್ಟಿ ರಸ್ತೆಯಲ್ಲಿ ಸ್ಥಳೀಯ ಘಟಕದ ಕುರುಗೋಡು ಶಾಖಾ ಕಚೇರಿಯನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದರು.
ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳದ ಕಾರಣ ಘೋಷಿತ ನಾನಾ ತಾಲೂಕಿನ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕುರುಗೋಡು ತಾಲೂಕು ಆಗಲು ಎಲ್ಲ ರೀತಿಯಿಂದ ಅರ್ಹವಾಗಿದ್ದು, ಬೆಳಗಾವಿಯ ಅಧಿವೇಶನದಲ್ಲಿ ಈ ಬಗ್ಗೆ ಚರ್ಚಿಸಿ ಜನಪರ ತೀರ್ಮಾನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಘಟಕದ ಅಧ್ಯಕ್ಷ ಪಿ. ಅಲ್ಲಾಸಾಬ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಂಪ್ಲಿ ವಿಧಾನಸಭಾ ಕ್ಷೇತ್ರದ ನಾನಾ ಗ್ರಾಮದಲ್ಲಿ ಕೋಟಿಗಟ್ಟಲೆ ಅನುದಾನ ಬಳಸಿ ಕುಡಿಯುವ ನೀರಿನ ಕೆರೆ ನಿರ್ಮಾಣಗೊಂಡಿದ್ದರೂ. ಜನರಿಗೆ ಕುಡಿಯುವ ನೀರಿನ ಬವಣೆ ತಪ್ಪಿಲ್ಲ. ಅಲ್ಲದೆ ರಸ್ತೆ, ಶೌಚಾಲಯ, ಮತ್ತಿತರೆ ಕನಿಷ್ಠ ನಾಗರಿಕ ಸೌಲಭ್ಯಗಳಿಲ್ಲದ ಜನ ಪರದಾಡಿದ್ದಾರೆ. ಈ ಬಗ್ಗೆ ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಸುಮಾರೆಡ್ಡಿ, ಉಪಾಧ್ಯಕ್ಷ ಈಶ್ವರರೆಡ್ಡಿ, ಕುರುಗೋಡು ಘಟಕದ ಅಧ್ಯಕ್ಷ ವಿ. ಗಂಗರಾಜ್, ಗೌರವ ಅಧ್ಯಕ್ಷ ರಾಜೇಂದ್ರ ಪ್ರಸಾದ್, ಉಪಾಧ್ಯಕ್ಷ ವಲಿಸಾಬ್, ಹೋಬಳೇಶ್, ಮಲ್ಲಿಕಾರ್ಜುನ, ಟಿ.ರಮೇಶ್, ರಾಜಶೇಖರಯ್ಯ, ರಾಮಾಂಜನಿ, ಎಸ್. ವಿರೂಪಾಕ್ಷಗೌಡ, ಕಂಪ್ಲಿ ಹೊನ್ನೂರಪ್ಪ ಮತ್ತಿತರರು ಇದ್ದರು.