ಗಿಡ ಬೆಳೆಸಿ ಪರಿಸರ ಸಂರಕ್ಷಿಸಿ
ಬಳ್ಳಾರಿ: ಗಿಡ ಬೆಳೆಸಿ ಪರಿಸರ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪೋಲಯ್ಯ ತಿಳಿಸಿದರು.
ನಗರದ ಕೌಲ್ ಬಜಾರ್‌ನಲ್ಲಿರುವ ಮೊರಾರ್ಜಿ ದೇಸಾಯಿ ವಿಜ್ಞಾನ ಪದವಿಪೂರ್ವ ವಸತಿ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಮತ್ತು ವೃತ್ತಿ ಶಿಕ್ಷಣ ಇಲಾಖೆ ಆಯೋಜಿಸಿದ್ದ ಇಕೋ ಕ್ಲಬ್ (ಜೀವ ಸಂಕುಲ ಮತ್ತು ಪರಿಸರ) ಉದ್ಘಾಟಿಸಿ ಮಾತನಾಡಿದರು.
ಅಲ್ಲಂ ಸುಮಂಗಳಮ್ಮ ಕಾಲೇಜಿನ ಜೀವಶಾಸ್ತ್ರ ಉಪನ್ಯಾಸಕ ಗೋವಿಂದರಾಜುಲು ಮಾತನಾಡಿ, ಮಾನವನ ಅತಿಯಾಸೆಯಿಂದ ಭೂಮಿ ಬರಿದಾಗುತ್ತಿರುವುದು ವಿಷಾದನೀಯ ಸಂಗತಿಯಾಗಿದೆ. ಪರಿಸರ ಸಂರಕ್ಷಿಸುವ ನಿಟ್ಟಿನಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡುವ ಇಂಥ ಕಾರ್ಯಕ್ರಮ ಹಮ್ಮಿಕೊಂಡಿರುವುದು ಉತ್ತಮವಾಗಿದೆ ಎಂದು ಶ್ಲಾಘಿಸಿದರು.
ಪ್ರಾಂಶುಪಾಲ ಹಾಗೂ ಇಕೋ ಕ್ಲಬ್ ಅಧ್ಯಕ್ಷ ಪಿ. ಲಕ್ಷ್ಮಣ ಮಾತನಾಡಿ, ನಮ್ಮ ಪೂರ್ವಜರು ಪ್ರಕೃತಿಯನ್ನು ದೇವರೆಂದು ಪೂಜಿಸುತ್ತಿದ್ದರು. ಇದೀಗ ಪೂಜ್ಯ ಭಾವನೆ ದೂರವಾಗಿ ಪರಿಸರ ಅವನತಿಯತ್ತ ಸಾಗುತ್ತಿದೆ. ಇದನ್ನು ನಿಯಂತ್ರಿಸಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ವಿವಿಧ ಸಸಿಗಳನ್ನು ನೆಡಲಾಯಿತು. ಇಕೋ ಕ್ಲಬ್ ಉಪಾಧ್ಯಕ್ಷ ಹಾಗೂ ಉಪನ್ಯಾಸಕ ನರಸಣ್ಣ, ಸದಸ್ಯ ಮಲ್ಲಿಕಾರ್ಜುನ, ಶಿವಕುಮಾರ, ಕೆ. ವಿದ್ಯಾ, ಯಲ್ಲಮ್ಮ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಸುಪ್ರಿಯಾ ಸ್ವಾಗತಿಸಿದರು. ಪಾಂಡುರಂಗ ನಿರೂಪಿಸಿದರು. ಉಪನ್ಯಾಸಕ ಪಾಂಡುರಂಗ ವಂದಿಸಿದರು.