ಪಡಿತರ ವಿತರಕರಿಗೂ ಬಯೋವುಟ್ರಿಕ್
ಕನ್ನಡಪ್ರಭ ವಾರ್ತೆ, ಕೊಟ್ಟೂರು, ನ. 25
ಪಡಿತರ ಆಹಾರ ಧಾನ್ಯಗಳ ವಿತರಣೆಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ದಿನನಿತ್ಯ ಕೇಳಿಬರುತ್ತಿರುವ ದೂರುಗಳ ನಿವಾರಣೆಗೆ ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆ ಹೊಸ ಹೊಸ ಮಾರ್ಗಗಳನ್ನು ಕಂಡುಕೊಳ್ಳಲು ಮುಂದಾಗಿದೆ. ಈ ಮೂಲಕ ಜನತೆಯ ಸಂಶಯಗಳನ್ನು ನಿವಾರಿಸಲು ಇಲಾಖೆ ಇದೆ ಮೊದಲ ಬಾರಿಗೆ ಆಹಾರ ನಿಗಮದ ಗೋದಾಮುಗಳಿಂದ ಪಡಿತರ ಧಾನ್ಯಗಳನ್ನು ಎತ್ತುವಳಿ ಮಾಡುವುದಕ್ಕೂ ಇದೀಗ ಬಯೋವುಟ್ರಿಕ್ ಪದ್ಧತಿ ಅಳವಡಿಸಿಕೊಂಡಿದೆ.
ಬಯೋವುಟ್ರಿಕ್ ಪದ್ಧತಿಯಂತೆ ಇನ್ಮುಂದೆ ರಾಜ್ಯದಲ್ಲಿನ ನ್ಯಾಯಬೆಲೆ ಅಂಗಡಿಗಳ ಸಂಚಾಲಕರು ಹೆಬ್ಬೆಟ್ಟು ಗುರುತನ್ನು ನೀಡಬೇಕಿದೆ. ಗುರುತು ನ್ಯಾಯಬೆಲೆ ಅಂಗಡಿ ಮಾಲೀಕರು ಪಡಿತರ ಧಾನ್ಯಗಳನ್ನು ಪಡೆಯುವುದು ಸಾಧ್ಯವೇ ಇಲ್ಲ. ಇಲಾಖೆ ಕಟ್ಟುನಿಟ್ಟಿನ ಈ ಕ್ರಮದಿಂದ ಪ್ರತಿಯೊಬ್ಬರೂ ಪಡೆಯುವ ಪಡಿತರದ ಧಾನ್ಯದ ವಿವರ ಸ್ಪಷ್ಟವಾಗಿ ಗೋಚರವಾಗುತ್ತದೆ. ಈ ಮೂಲಕ ನಕಲಿ ಸಹಿ, ಕಾಳಸಂತೆಯಲ್ಲಿ ಆಹಾರ ಧಾನ್ಯಗಳ ಮಾರಾಟ ಪ್ರವೃತ್ತಿಗೆ ಸಂಪೂರ್ಣ ಕಡಿವಾಣ ಬೀಳಲಿದೆ.
ಚಾಲನೆ: ಇತ್ತೀಚಿಗೆ ಕೊಟ್ಟೂರು ಪಟ್ಟಣದಲ್ಲಿನ ರಾಜ್ಯ ಆಹಾರ ನಿಗಮದ ಗೋದಾಮಿನಲ್ಲಿ ಪಡಿತರ ಅಂಗಡಿಗಳ ಸಂಚಾಲಕರ ಹೆಬ್ಬೆಟ್ಟು ಗುರುತನ್ನು ದಾಖಲಿಸಿಕೊಳ್ಳುವ ಪ್ರಕ್ರಿಯೆ ನಡೆಯಿತು. ಈ ಪ್ರಕ್ರಿಯೆಯಲ್ಲಿ ಬಳ್ಳಾರಿ ಜಿಲ್ಲೆಯ ಪಶ್ಚಿಮ ತಾಲೂಕಿನ ಕೂಡ್ಲಿಗಿ, ಹಗರಿಬೊಮ್ಮನಹಳ್ಳಿ ಮತ್ತು ಹೂವಿನಹಡಗಲಿ ತಾಲೂಕುಗಳ 200ಕ್ಕೂ ಹೆಚ್ಚು ನ್ಯಾಯಬೆಲೆ ಅಂಗಡಿಗಳ ಮಾಲೀಕರ ಹೆಬ್ಬೆಟ್ಟು ಗುರುತು ಮತ್ತು ಭಾವಚಿತ್ರ ನೋಂದಾಯಿಸಿಕೊಳ್ಳುವ ಪ್ರಕ್ರಿಯೆ ದಿನವಿಡೀ ನಡೆಯಿತು.
ಸ್ವತಃ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಜಿಲ್ಲಾ ಉಪನಿರ್ದೇಶಕ ಮಂಟೆಸ್ವಾಮಿ ಹಾಜರಿದ್ದು, ಈ ಪ್ರಕ್ರಿಯೆಗೆ ಚಾಲನೆ ನೀಡಿದರು. ಈ ಪ್ರಕ್ರಿಯೆ ವ್ಯಾಪ್ತಿಗೆ ರಾಜ್ಯದ ಎಲ್ಲ ನ್ಯಾಯಬೆಲೆ ಅಂಗಡಿಗಳು ಬರಲಿವೆ.
ಈ ಪದ್ಧತಿಯಿಂದ ನ್ಯಾಯಬೆಲೆ ಅಂಗಡಿಯವರು ಯಾವ ಯಾವ ಸಂದರ್ಭದಲ್ಲಿ ಪಡಿತರ ಧಾನ್ಯಗಳನ್ನು ಪಡಿದಿದ್ದಾರೆ ಎಂಬ ಮಾಹಿತಿ ದಾಖಲಾಗುತ್ತದೆ. ಈ ಪದ್ಧತಿ ಅಳವಡಿಸಿಕೊಂಡ ಇಲಾಖೆಯ ಗೋದಾಮಿಗಷ್ಟೇ ಈ ವಿವರ ಸೀಮಿತವಾಗದೆ ಆಹಾರ ಇಲಾಖೆಯ ತಾಲೂಕು, ಜಿಲ್ಲಾ ಕೇಂದ್ರಗಳಲ್ಲಿ ಕೂಡ ಈ ಮಾಹಿತಿ ದಾಖಲಾಗುತ್ತದೆ.
ಅಕ್ರಮ ತಡೆಗೆ ಸಹಕಾರಿ: ಕೇವಲ ಗೋದಾಮಿಗಷ್ಟೇ ಈ ಪದ್ಧತಿ ಸೀಮಿತಗೊಳ್ಳದೆ ನ್ಯಾಯಬೆಲೆ ಅಂಗಡಿಗಳಿಗೆ ತೆರಳುವ ಪಡಿತರದಾರರು ಕೂಡ ಈ ಪದ್ಧತಿಗೆ ಒಳಪಡಲಿದ್ದಾರೆ. ಅಲ್ಲಿರುವ ಬಯೋವುಟ್ರಿಕ್ ಮಶಿನ್‌ಗೆ ತಮ್ಮ ಹೆಬ್ಬೆಟ್ಟನ್ನು ನೀಡಿದರೆ ಅವರ ಕಾರ್ಡ್‌ಗೆ ಹಂಚಿಕೆಯಾಗುವ ಪಡಿತರ ವಿವರ, ಬೆಲೆ ಮತ್ತು ಒಟ್ಟು ಮೊತ್ತವನ್ನು ಬಯೋವುಟ್ರಿಕ್ ಯಂತ್ರ ತಿಳಿಸುತ್ತದೆ.
ಇದರಿಂದ ಬೋಗಸ್ ಕಾರ್ಡ್ ಇಲ್ಲವೇ ಅಂಗಡಿಗಳಲ್ಲಿ ನಡೆಯುವ ಅಕ್ರಮ ತಡೆಯಲು ಸಹಕಾರಿಯಾಗಲಿದೆ. ಪಡಿತರ ಚೀಟಿಯಲ್ಲಿನ ಕುಟುಂಬ ಸದಸ್ಯರ ಭಾವಚಿತ್ರ, ಹೆಬ್ಬೆಟ್ಟಿನ ಗುರುತು, ನೋಂದಾಯಿಸಿಕೊಳ್ಳಲಾಗಿದೆ. ಬಯೋವುಟ್ರಿಕ್ ಪದ್ಧತಿಯಲ್ಲಿ ಪಡಿತರ ವಿತರಣೆ ಕಾರ್ಯ ಈಗಾಗಲೇ ರಾಜ್ಯದೆಲ್ಲೆಡೆ ಜಾರಿಯಲ್ಲಿದ್ದು, ಹಂತ ಹಂತವಾಗಿ ಎಲ್ಲ ನ್ಯಾಯಬೆಲೆ ಅಂಗಡಿಗಳಲ್ಲಿ ಬಯೋವುಟ್ರಿಕ್ ಯಂತ್ರ ಕಾಣಬಹುದಾಗಿದೆ.
ಮುಂದಿನ ತಿಂಗಳು ಜಾರಿ
ಪ್ರತಿ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಆಹಾರ ಗೋದಾಮಿನಲ್ಲಿ ಅಳವಡಿಸಲಾಗುವ ಬಯೋವುಟ್ರಿಕ್ ಯಂತ್ರಕ್ಕೆ ತಮ್ಮ ಭಾವಚಿತ್ರ, ಹೆಬ್ಬೆಟ್ಟು ಗುರುತು, ಮತ್ತಿತರ ಮಾಹಿತಿಗಳನ್ನು ನೀಡುವ ಪ್ರಕ್ರಿಯೆ ಮುಂದಿನ ತಿಂಗಳಿನಿಂದ ಜಾರಿಗೆ ಬರಲಿದೆ. ಆಹಾರ ಗೋದಾಮಿನಿಂದ ಪ್ರತಿ ಅಂಗಡಿ ಮಾಲೀಕರು ಪಡೆಯುವ ಆಹಾರ ಧಾನ್ಯಗಳ ಸಮಗ್ರ ವಿವರಗಳನ್ನು ಪ್ರತಿಯೊಬ್ಬರು ಗಮನಿಸಬಹುದಾಗಿದೆ.
- ಮಂಟೆಸ್ವಾಮಿ, ಆಹಾರ ಮತ್ತು ನಾಗರಿಕರ ಸರಬರಾಜು ಇಲಾಖೆಯ ಬಳ್ಳಾರಿ ಜಿಲ್ಲಾ ಉಪನಿರ್ದೇಶಕ
ಜಿ. ಸೋಮಶೇಖರ