ಬಲದಂಡೆ ಭಾಗಕ್ಕೂ ಹನಿ ನೀರಾವರಿ ವಿಸ್ತರಿಸಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 25
ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಜಲಸಂಪನ್ಮೂಲ ಸಚಿವರು ಎಡದಂಡೆ ಭಾಗಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು, ಬಲದಂಡೆ ಭಾಗದ ರೈತರಿಗೆ ಅನ್ಯಾಯ ಮಾಡಿದ್ದಾರೆ ಎಂದು ಬಿಎಸ್ಆರ್ ಕಾಂಗ್ರೆಸ್ ಜಿಲ್ಲಾ ಜಾಗೃತ ದಳ ನಿರ್ದೇಶಕ ಯು. ಕೊಟ್ರೇಶ ನಾಯ್ಕ ದೂರಿದರು.
ಪಟ್ಟಣದ ಅವರ ನಿವಾಸದಲ್ಲಿ ಬಿಎಸ್ಆರ್ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಯೋಜನೆಯ ಹಿನ್ನೀರಿನಿಂದ ಬಲದಂಡೆ ಭಾಗದ ರೈತರು ತಮ್ಮ ಜಮೀನು ಕಳೆದುಕೊಂಡಿದ್ದಾರೆ. ಆ ಭಾಗದಲ್ಲಿ ಸಾಕಷ್ಟು ಖುಷ್ಕಿ ಭೂಮಿ ನೀರಾವರಿ ಸೌಲಭ್ಯವಿಲ್ಲದೇ ರೈತರು ಪರದಾಡುವಂತಹ ಪರಿಸ್ಥಿತಿ ಇದೆ. ಆದ್ದರಿಂದ ಬಲದಂಡೆ ಭಾಗದ ರೈತರ ಜಮೀನಿಗೂ ಹನಿ ನೀರಾವರಿ ಸೌಲಭ್ಯ ವಿಸ್ತರಿಸಬೇಕು ಎಂದು ಒತ್ತಾಯಿಸಿದ್ದಾರೆ.
4-5 ವರ್ಷಗಳಿಂದ ಬಡ ಫಲಾನುಭವಿಗಳು ಪಡಿತರ ಚೀಟಿಗಾಗಿ ಪರದಾಡುವಂತಹ ಪರಿಸ್ಥಿತಿ ಇದೆ. ಇಲ್ಲಿ ವರೆಗೂ ಅರ್ಹ ಫಲಾನುಭವಿಗಳನ್ನು ಗುರುತಿಸಿ ಶಾಶ್ವತ ಪಡಿತರ ಚೀಟಿ ವಿತರಣೆ ಮಾಡುವಲ್ಲಿ ವಿಳಂಬ ಧೋರಣೆ ತಾಳಿದೆ ಎಂದು ಜರಿದರು.
ಬಳ್ಳಾರಿ ಜಿಲ್ಲೆಯಲ್ಲೂ ಸಾವಿರಾರು ರೈತರು ಕನಕ ಬಿಟಿ ಹತ್ತಿ ಬೀಜ ಬಿತ್ತನೆ ಮಾಡಿದ್ದಾರೆ. ಆದರೆ, ಹೂವು, ಕಾಯಿ ಇಲ್ಲದೇ ರೈತರು ಅಪಾರ ನಷ್ಟ ಅನುಭಿಸುತ್ತಿದ್ದಾರೆ. ಆದರೆ ಸಂಬಂಧ ಪಟ್ಟ ಸಚಿವರು ಬಳ್ಳಾರಿ ಜಿಲ್ಲೆ ಹೊರತು ಪಡಿಸಿ ಪರಿಹಾರ ಘೋಷಣೆ ಮಾಡಿರುವುದು ತಾಲೂಕಿನ ರೈತರಿಗೆ ಮಾಡಿರುವ ಘೋರ ಅನ್ಯಾಯ. ಈ ಭಾಗದ ರೈತರಿಗೆ ಸರ್ಕಾರ ಪರಿಹಾರ ನೀಡದಿದ್ದರೆ ರೈತರ ಜತೆಗೆ ಉಗ್ರ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಬಿಎಸ್ಆರ್ ಕಾಂಗ್ರೆಸ್ ಅಧ್ಯಕ್ಷ ಬಿ. ಶ್ರೀರಾಮುಲು ಯಾವುದೇ ಪಕ್ಷ ಸೇರ್ಪಡೆಯಾಗಲಿ, ಅವರ ಬೆಂಬಲಕ್ಕೆ ತಾವು ಮತ್ತು ತಮ್ಮ ಕಾರ್ಯಕರ್ತರು ಇರುತ್ತೇವೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ದೀಪದ ಕೃಷ್ಣಪ್ಪ, ಬಿ. ಕೊಟ್ರೇಶ, ಪುರಸಭೆ ಸದಸ್ಯರಾದ ಸುರೇಶ, ರವಿ, ಲಲಿತಮ್ಮ, ಕೊಟ್ರೇಶ, ಡಾ. ವೀರಭದ್ರಪ್ಪ, ಅಕ್ಕಿ ಬಸವರಾಜ, ಚಿದಾನಂದ, ಕಟ್ಟೆಪ್ಪ, ಅಂಜಿನಪ್ಪ, ಡಾ. ವೀರಣ್ಣ, ಜಯಣ್ಣ, ಮಂಜಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.