ಅಂಗವಿಕಲರಿಗೆ ಸೌಲಭ್ಯ ನೀಡಲು ಕ್ರಮ: ಕಲಾದಗಿ
ಬಳ್ಳಾರಿ: ಸ್ಥಳೀಯ ಸತ್ಯವಾಣಿ ನಗರದ ನಿವಾಸಿ ಸತ್ಯನಾರಾಯಣ ಎಂಬುವವರ ಮಕ್ಕಳಾದ ಪಾರ್ವತಿ ಹಾಗೂ ನಾಗೇಂದ್ರ ಅವರು ಸಂಪೂರ್ಣ ಅಂಗವಿಕಲರಾಗಿದ್ದಾರೆ. ಅವರಿಗೆ ಇಲಾಖೆಯಿಂದ ದೊರೆಯುವ ವಿವಿಧ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಬಿ.ಎಸ್. ಕಲಾದಗಿ ತಿಳಿಸಿದ್ದಾರೆ.
ಅಂಗವಿಕಲತೆ ಹೊಂದಿದ ಈ ಅಕ್ಕ-ತಮ್ಮನ ತಾಯಿಯು ಮರಣ ಹೊಂದಿದ್ದು, ತಮ್ಮ ಎಲ್ಲ ದೈನಂದಿನ ಕಾರ್ಯಗಳಿಗೆ ಮತ್ತೊಬ್ಬರನ್ನು ಅವಲಂಬಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅಪರ ಜಿಲ್ಲಾಧಿಕಾರಿ ಇವರಿಗೆ ನಿಯಮಾನುಸಾರ ಲಭ್ಯವಿರುವ ಎಲ್ಲ ಸೌಲಭ್ಯ ಒದಗಿಸಬೇಕೆಂದು ನಿರ್ದೇಶನ ನೀಡಿರುವುದರಿಂದ ಪಾರ್ವತಿಗೆ ಸ್ಥಳದಲ್ಲಿಯೇ ಒಂದು ಗಾಲಿ ಖುರ್ಚಿಯನ್ನು ನೀಡಲಾಯಿತು. ವೈದ್ಯಕೀಯ ತಪಾಸಣೆಗೆ ಒಳಪಡಿಸುವ ನಿಟ್ಟಿನಲ್ಲಿ ಅಂಗವಿಕಲರ ಗುರುತಿನ ಚೀಟಿಯನ್ನೂ ನೀಡಲಾಯಿತು. ಪಾಲಿಕೆ ವತಿಯಿಂದ ವಸತಿ ಯೋಜನೆ, ಆರೋಗ್ಯ ಕಾರ್ಡ್, ಬ್ಯಾಂಕ್ ಖಾತೆ ತೆರೆಯಲು ಕ್ರಮ ಕೈಗೊಳ್ಳಲಾಗುವುದೆಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗ್ರಂಥಾಲಯಗಳ ಕೊಡುಗೆ ಅನನ್ಯ: ಪರಮೇಶ್ವರಯ್ಯ
ಹಗರಿಬೊಮ್ಮನಹಳ್ಳಿ: ಗ್ರಂಥಾಲಯಗಳು ನಾಗರಿಕತೆ ಮತ್ತು ಸಂಸ್ಕೃತಿ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಸಾಹಿತಿ ಪರಮೇಶ್ವರಯ್ಯ ಸೊಪ್ಪಿಮಠ ಹೇಳಿದರು.
ಪಟ್ಟಣದ ರಾಮನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ಹಮ್ಮಿಕೊಂಡಿದ್ದ ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದಲ್ಲಿ ಉಪನ್ಯಾಸ ನೀಡಿ ಮಾತನಾಡಿದ ಅವರು, ಪುಸ್ತಕಗಳಿಗಿಂತ ಉತ್ತಮ ಸ್ನೇಹಿತ ಈ ಜಗತ್ತಿನಲ್ಲಿ ಸಿಗುವುದಿಲ್ಲ. ನಮ್ಮ ಯುವ ಜನಾಂಗ ಉತ್ತಮ ಪ್ರಜೆಗಳಾಗಬೇಕಾದರೆ ಕೆಟ್ಟ ಹವ್ಯಾಸಗಳಿಗೆ ಬಲಿಯಾಗದಂತೆ ತಡೆಯಲು ಅವರಿಗೆ ಓದಿನೆಡೆಗೆ ಹೆಚ್ಚಿನ ಆಸಕ್ತಿ ವಹಿಸುವಂತೆ ಮಾಡುವುದೊಂದೇ ದಾರಿ ಎಂದರು.
ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್ ಅಧ್ಯಕ್ಷತೆ ವಹಿಸಿದ್ದರು. ಡಿಗ್ರಿ ಕಾಲೇಜಿನ ಹಿರಿಯ ಗ್ರಂಥಾಪಾಲಕ ಟಿ. ರಾಮಲಿಂಗಪ್ಪ, ಗ್ರಾಪಂ ಉಪಾಧ್ಯಕ್ಷೆ ಸಾವಿತ್ರಿಬಾಯಿ, ಸಾಹಿತಿ ಮೇಟಿ ಕೊಟ್ರಪ್ಪ, ಕಸಾಪ ಅಧ್ಯಕ್ಷ ಎಂಪಿಎಂ ಮಂಜುನಾಥ, ವೀರೇಶ ಮಜ್ಗಿ, ಮುಖ್ಯಗುರು ಅನಂತಪದ್ಮನಾಭ ಇದ್ದರು. ಶಾಖಾ ಗ್ರಂಥಾಪಾಲಕ ಟಿ. ಮಲ್ಲಿಕಾರ್ಜುನ ಸ್ವಾಗತಿಸಿದರು. ಕೆ. ರಾಮಣ್ಣ ನಿರೂಪಿಸಿದರು. ಡಿ. ಚಿದಾನಂದಪ್ಪ ವಂದಿಸಿದರು.
ಉಪನ್ಯಾಸಕ ಎಸ್.ಪಿ ಹೊಂಬಳೆಗೆ ಸನ್ಮಾನ
ಬಳ್ಳಾರಿ: ನಗರದ ಗುಗ್ಗರಹಟ್ಟಿ ಶ್ರೀ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ಸಾರ್ವಜನಿಕರಿಗೆ ಪ್ರತಿದಿನ ಸಂಜೆ ಪುರಾಣ ಪ್ರವಚನ ಮಾಡುತ್ತಿದ್ದ ಉಪನ್ಯಾಸಕ ಎಸ್.ಪಿ. ಹೊಂಬಳೆ ಅವರನ್ನು ನವಕರ್ನಾಟಕ ನಿರ್ಮಾಣ ವೇದಿಕೆಯಿಂದ ಸನ್ಮಾನಿಸಲಾಯಿತು.
ವೇದಿಕೆ ಜಿಲ್ಲಾಧ್ಯಕ್ಷ ಪಿ. ಶೇಖರ್, ಹೊಂಬಳೆ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿದರು. ಬಳಿಕ ಅವರು ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಕಳೆದ ಮೂರು ವರ್ಷಗಳಿಂದ ಪ್ರತಿದಿನ ಸಂಜೆ ರಾಮಾಯಣ, ಮಹಾಭಾರತ, ದೇವಿ ಪುರಾಣಗಳ ಕುರಿತು ಪ್ರವಚನ ನೀಡುತ್ತಿದ್ದ ಹೊಂಬಳೆಯವರು ದಾಸರ ಭಜನೆಗಳು, ದೇವಿ ಸ್ತೋತ್ರ ಹಾಡುವರು. ಇವರ ಪ್ರವಚನ ಕೇಳಲು ನಿತ್ಯ ನೂರಾರು ಜನರು ದೇವಸ್ಥಾನಕ್ಕೆ ಆಗಮಿಸುತ್ತಿದ್ದರು ಎಂದರು.
ಈ ಸಂದರ್ಭ ಕೆ. ರಾಮಾಂಜಿನಿ, ವೀರನಗೌಡ, ಹಗರಪ್ಪ, ಸುನೀಲ್, ನಾಗರಾಜ್, ಅನಿಲ್, ಗಂಗಾಧರ, ವೆಂಕಟೇಶ್, ಪ್ರಶಾಂತ, ಲಿಂಗನಗೌಡ, ಹನುಮಂತ ಇತರರಿದ್ದರು.