ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಬ್ಬು ಮುಕ್ತ ಸಾಗಾಣಿಕೆಗೆ ಅವಕಾಶ ನೀಡಿ

Lingaraj Badiger
Updated On : 27 Nov 2013, 11:15 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ. 26
ತಾಲೂಕಿನ ಸುತ್ತಮುತ್ತಲಿನ ಕಬ್ಬನ್ನು ಮುಕ್ತವಾಗಿ ಸಾಗಾಣಿಕೆಗೆ ಅನುಮತಿ ನೀಡಬೇಕು ಮತ್ತು ಕಬ್ಬಿಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು ಎಂದು ಒತ್ತಾಯಿಸಿ ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟ ಹಾಗೂ ರಾಜ್ಯ ರೈತ ಸಂಘ ಸೇರಿದಂತೆ ಇತರೆ ಸಂಘಟನೆಗಳು ನಗರದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದವು.
ಪ್ರತಿಭಟನಾ ಸಭೆಯನ್ನುದ್ದೇಶಿಸಿ ಬಳ್ಳಾರಿ ಜಿಲ್ಲಾ ಹಿಂದುಳಿದ ವರ್ಗಗಳ ಒಕ್ಕೂಟದ ಅಧ್ಯಕ್ಷ ವೈ. ಯಮುನೇಶ್ ಮಾತನಾಡಿ, ಪ್ರಧಾನಮಂತ್ರಿಗಳ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಡಾ. ಸಿ. ರಂಗರಾಜನ್ ಮಾಡಿರುವ ಶಿಫಾರಸಿನಂತೆ ಕಬ್ಬು ಕಾಯ್ದಿಟ್ಟ ಪ್ರದೇಶ ನಿಯಮವನ್ನು ರದ್ದು ಮಾಡಿ, ಈ ಭಾಗದಲ್ಲಿ ಬೆಳೆದಿರುವ ಕಬ್ಬನ್ನು ಬೇರೆ ಕಾರ್ಖಾನೆಗಳಿಗೆ ಸಾಗಾಣಿಕೆ ಮಾಡಲು ಅನುಮತಿ ನೀಡಬೇಕು. ಸ್ಥಳೀಯ ಕಾರ್ಖಾನೆಗೆ ಈ ಭಾಗದಲ್ಲಿ ಬೆಳೆದಿರುವ ಕಬ್ಬನ್ನು ತ್ವರಿತವಾಗಿ ಅರೆಯುವ ಸಾಮರ್ಥ್ಯವಿಲ್ಲ. ಆದ್ದರಿಂದ ಕಬ್ಬು ಒಣಗುವುದಕ್ಕಿಂತ ಮೊದಲೇ ತಮಗೆ ಇಷ್ಟವಾದ ಕಾರ್ಖಾನೆಗಳಿಗೆ ಕಬ್ಬು ಸಾಗಾಣಿಕೆ ಮಾಡಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು.
ಕಬ್ಬು ಕಾಯ್ದಿಟ್ಟ ಪ್ರದೇಶ ನಿಯಮವನ್ನು ರದ್ದುಪಡಿಸಿ ರೈತರು ಮುಕ್ತವಾಗಿ ತಮಗಿಷ್ಟವಾದ ಕಡೆ ಕಬ್ಬು ಸಾಗಾಣಿಕೆ ಮಾಡಲು ಅನುಮತಿ ನೀಡುವ ಅಧಿಕಾರ ರಾಜ್ಯ ಸರ್ಕಾರಕ್ಕಿದೆ. ಹೀಗಾಗಿ, ಜಿಲ್ಲಾಧಿಕಾರಿ ಕೂಡಲೇ ಈ ಭಾಗದಲ್ಲಿ ಬೆಳೆದ ಕಬ್ಬನ್ನು ಬೇರೆಡೆ ಸಾಗಿಸಲು ಅನುಮತಿ ನೀಡಬೇಕೆಂದು ಒತ್ತಾಯಿಸಿದರು. ಬಳಿಕ ಸಹಾಯಕ ಆಯುಕ್ತ ಪಿ. ಸುನೀಲ್ ಕುಮಾರ್‌ಗೆ ಮನವಿ ಸಲ್ಲಿಸಲಾಯಿತು.
ಜಿಲ್ಲಾ ಹಿಂದುಳಿದ ವರ್ಗ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ರವಿಶಂಕರ್ ದೇವರಮನಿ, ಕಾಕುಬಾಳ ಪ್ರಕಾಶ, ರಾಜ್ಯ ರೈತ ಸಂಘದ ಜೆ.ಜಿ. ವಿರೂಪಾಕ್ಷ, ನಗರಸಭಾ ಸದಸ್ಯ ರೂಪೇಶ್ ಕುಮಾರ್, ರವಿಕುಮಾರ್, ನಾಗೇನಹಳ್ಳಿ ಗ್ರಾಪಂ ಅಧ್ಯಕ್ಷೆ ತಾಯಮ್ಮ, ಎಚ್.ಕೆ. ಹಂಪಮ್ಮ, ತಾಪಂ ಮಾಜಿ ಸದಸ್ಯ ಡಿ. ಚಂದ್ರಶೇಖರ್, ರೈತ ಮುಖಂಡರಾದ ಬಿ. ಹನುಮಂತಪ್ಪ, ಕಲ್ಗುಡಿ ಲಕ್ಷಣ, ಎ. ಬಡಕಪ್ಪ, ಜಿ. ಜಂಬಣ್ಣ, ಡಿ.ಎಂ. ತಾಳೂರಪ್ಪ, ಅಗಳಿ ಭಾಸ್ಕರ, ವೈ. ಮಲಿಯಪ್ಪ, ಬಂದಿ ಭರಮಪ್ಪ, ಬಿಸಾಟಿ ಸತ್ಯನಾರಾಯಣ, ಬಂದಿ ಪಂಪಾಪತಿ, ಡೊಮ್ಮಿ ರಾಘವೇಂದ್ರ, ಚಿನ್ನದೊರೈ, ಅನಂತಕುಮಾರ್, ಕುಮಾರಸ್ವಾಮಿ ಪ್ರತಿಭಟನೆಯಲ್ಲಿ ಇದ್ದರು.
--
ಗ್ರಾಮೀಣ ಕಸುಬುದಾರರಿಗೆ ಉಚಿತ ಉಪಕರಣ ವಿತರಣೆ

ಬಳ್ಳಾರಿ: ಜಿಲ್ಲಾ ಪಂಚಾಯತಿ ವತಿಯಿಂದ ಜಿಲ್ಲಾ ವಲಯ ಯೋಜನೆಯಡಿ ಕೂಡ್ಲಿಗಿ ತಾಲೂಕಿನ ಗುಡೇಕೋಟೆ, ಸೂಲದಹಳ್ಳಿ ಹಾಗೂ ಎಂ.ಬಿ. ಅಯ್ಯನಹಳ್ಳಿ ಕ್ಷೇತ್ರದ 39 ಗ್ರಾಮಾಂತರ ಕಸುಬುದಾರರಿಗೆ ಸುಧಾರಿತ ಉಪಕರಣಗಳನ್ನು ವಿತರಿಸಲಾಯಿತು.
ಕೂಡ್ಲಿಗಿ ತಾಪಂ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಜಿಪಂನ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸಾವಿತ್ರಮ್ಮ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಕೆ. ಸುನಂದಾಬಾಯಿ, ಸದಸ್ಯೆ ಮೀನಾಕ್ಷಮ್ಮ, ತಾಪಂ ಉಪಾಧ್ಯಕ್ಷ ಎಚ್. ಮಲ್ಲೇಶಣ್ಣ ಉಪಕರಣಗಳನ್ನು ವಿತರಿಸಿದರು.
ಈ ಸಂದರ್ಭ ಜಿಪಂ(ಖಾಗ್ರಾ) ಉಪ ನಿರ್ದೇಶಕ ಕೆ. ಮೊಹಮ್ಮದ್ ಇರ್ಫಾನ್, ಕೂಡ್ಲಿಗಿ ತಾಪಂ ಇಒ ಬಿ.ಆರ್. ಶಿವಪ್ಪ, ಪ್ರಭಾರಿ ಕೈಗಾರಿಕಾ ವಿಸ್ತರಣಾಧಿಕಾರಿ ದಾದಾಪೀರ್ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement