ತುಕಾರಾಂಗೆ ಸಚಿವ ಸ್ಥಾನ ನೀಡುವಂತೆ ಮನವಿ
ಬಳ್ಳಾರಿ: ಸಚಿವ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ವಾಲ್ಮೀಕಿ ಸಮುದಾಯದ ಶಾಸಕ ಈ. ತುಕಾರಾಂ ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಕರ್ನಾಟಕ ವಾಲ್ಮೀಕಿ ನಾಯಕ ಜಾಗೃತಿ ವೇದಿಕೆ ಜಿಲ್ಲಾ ಘಟಕ ಸಿಎಂ ಸಿದ್ದರಾಮಯ್ಯ ಅವರಲ್ಲಿ ಮನವಿ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಸಂಗನಕಲ್ಲು ವಿಜಯಕುಮಾರ್, ಕಾರ್ಯಾಧ್ಯಕ್ಷ ಪಿ. ಜಗನ್ ಅವರು, ಮಂತ್ರಿಮಂಡಲದಲ್ಲಿ ಸದ್ಯಕ್ಕಿರುವ ವಾಲ್ಮೀಕಿ ಸಮುದಾಯದ ಸಚಿವರ ಜತೆಗೆ ಮತ್ತೊಬ್ಬರಿಗೆ ಆದ್ಯತೆ ನೀಡಿದರೆ ಅನುಕೂಲವಾಗಲಿದೆ. ಕುಲದೀಪ್ ಸಿಂಗ್ ಮೀಸಲಾತಿ ವರ್ಗೀಕರಣ ಪ್ರಕಾರ ಜಿಲ್ಲೆಗೆ 5 ವಿಧಾನಸಭಾ ಕ್ಷೇತ್ರ ಹಾಗೂ ಸಂಸದ ಸ್ಥಾನವನ್ನು ಪರಿಶಿಷ್ಟ ಪಂಗಡಕ್ಕೆ ಮೀಸಲಿಟ್ಟಿದ್ದು, ಜನತೆಯ ವಿಶ್ವಾಸ ಗಳಿಸಿ, ಸಂಡೂರು ಕ್ಷೇತ್ರದಿಂದ ಎರಡನೇ ಬಾರಿ ಶಾಸಕರಾಗಿ ತುಕಾರಾಂ ಜಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಮಂತ್ರಿಮಂಡಲದಲ್ಲಿ ಶಾಸಕ ತುಕಾರಾಂಗೆ ಸಚಿವ ಸ್ಥಾನ ನೀಡುವಂತೆ ಆಗ್ರಹಿಸಿದ್ದಾರೆ.
ಸಂಘದ ಪದಾಧಿಕಾರಿಗಳಾದ ಬಿ. ಹುಲಿಗೇಶ್, ಮಿಂಚೇರಿ ರಾಮಾಂಜನಿ, ಬಿ. ದೇವರಾಜ, ದಮಾಲೆಪ್ಪ, ಗಾದಿಲಿಂಗಪ್ಪ, ವೆಂಕಟೇಶ್, ವಾಲ್ಮೀಕಿ ಸಮಾಜದ ಮುಖಂಡ ಶ್ರೀನಿವಾಸ ಬೆಳಗಲ್ಲು ಹಾಗೂ ಕಾರ್ಯಕರ್ತರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.