ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮ
ಬಳ್ಳಾರಿ: ನೆಹರು ಯುವ ಕೇಂದ್ರ, ಸಂಡೂರು ತಾಲೂಕು ಪಂಚಾಯಿತಿ ಇವರ ಸಹಯೋಗದಲ್ಲಿ ಸಂಡೂರು ತಾಲೂಕು ಮಟ್ಟದ ಯುವ ಸಂಘಗಳ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ತಾಪಂ ಅಧ್ಯಕ್ಷೆ ಭರ್ಮಕ್ಕ ಜುಮ್ಮಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎನ್. ಕರಿಬಸಪ್ಪ ಮಾತನಾಡಿ, ಯುವ ಸಂಘಗಳ ರಚನೆ, ನಿರ್ವಹಣೆ ಹಾಗೂ ವಿವಿಧ ಇಲಾಖೆಗಳಿಂದ ಪಡೆಯುವಂತಹ ಸೌಲಭ್ಯಗಳ ಬಗ್ಗೆ ವಿವರಿಸಿದರು. ತಾಪಂ ಸದಸ್ಯೆ ಲಕ್ಷ್ಮಿ ಮಾರೆಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಯುವ ಪಡೆ ಕಾರ್ಯಕರ್ತ ಎನ್. ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನೆಹರು ಯುವ ಕೇಂದ್ರದ ಪದಾಧಿಕಾರಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು ಎಂದು ಜಿಲ್ಲಾ ಯುವ ಸಮನ್ವಯಾಧಿಕಾರಿ ಡಿ. ದಯಾನಂದ ತಿಳಿಸಿದ್ದಾರೆ.
ಜೂಜು ಅಡ್ಡೆ ಮೇಲೆ ದಾಳಿ: ಇಬ್ಬರ ಬಂಧನ
ಬಳ್ಳಾರಿ: ಮಟಕಾ ಜೂಜಾಟ ಅಡ್ಡೆ ಮೇಲೆ ಕುಡಿತಿನಿ ಪೊಲೀಸರು ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ, ಅವರಿಂದ ರು. 10 ಸಾವಿರ ವಶಪಡಿಸಿಕೊಂಡ ಘಟನೆ ಕುಡಿತಿನಿಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಕುಡಿತಿನಿ ಗ್ರಾಮದ ಜಕ್ಕೇರ ಬಾವಿ ಸಮೀಪದಲ್ಲಿ ಮಟಕಾ ಜೂಜಾಟ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ಪಿಎಸ್ಐ ವಾಸುಕುಮಾರ್ ದಾಳಿ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ರು. 10,100 ವಶಪಡಿಸಿಕೊಂಡಿದ್ದಾರೆ. ಈ ಕುರಿತಾಗಿ ಕುಡಿತಿನಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆರೋಪಿ ಬಂಧನ: ಮಟ್ಕಾ ಜೂಜಾಟದ ಅಡ್ಡೆ ಮೇಲೆ ದಾಳಿ ಮಾಡಿ, ಓರ್ವ ಆರೋಪಿಯನ್ನು ಬಂಧಿಸಿ, ಆತನಿಂದ ರು. 2,200 ವಶಪಡಿಸಿಕೊಂಡಿರುವ ಘಟನೆ ಬುಧವಾರ ಸಂಜೆ ಕುಡಿತಿನಿಯಲ್ಲಿ ನಡೆದಿದೆ. ಗ್ರಾಮದಲ್ಲಿ ಮಟ್ಕಾ ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿ ಆಧರಿಸಿ ಕುಡಿತಿನಿ ಠಾಣೆಯ ಪಿಎಸ್ಐ ವಾಸುಕುಮಾರ್ ದಾಳಿ ಮಾಡಿ, ಸ್ವಾಮಿ ಎಂಬಾತನನ್ನು ಬಂಧಿಸಿದ್ದಾರೆ. ಈ ಬಗ್ಗೆ ಕುಡಿತಿನಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.