ಸಂಘಟಿತರಾಗಿ ಹಕ್ಕು ಪಡೆಯಿರಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ನ. 27
ಕಾನೂನಿನಲ್ಲಿ ಮಹಿಳೆಯರಿಗೆ ಪ್ರಧಾನವಾದ ಹಕ್ಕುಗಳಿವೆ. ಮಹಿಳೆಯರು ಸಂಘಟಿತರಾಗಿ ನ್ಯಾಯಬದ್ಧ ಹಕ್ಕುಗಳನ್ನು ಕಾನೂನು ಮೂಲಕ ಪಡೆದುಕೊಳ್ಳಲು ಮುಂದಾಗಬೇಕು ಎಂದು 3ನೇ ಅಪರ ಜಿಲ್ಲಾ ನ್ಯಾಯಾಧೀಶ ಶಿವಣ್ಣ ಮಹಿಳೆಯರಿಗೆ ಸಲಹೆ ನೀಡಿದರು.
ನಗರದ ರೋಟರಿ ಸಭಾಂಗಣದಲ್ಲಿ ಸ್ಲಂ ಜನಾಂದೋಲನ, ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ, ಮಹಿಳಾ ಘಟಕ, ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ರೋಟರಿ ಕ್ಲಬ್ ಆಶ್ರಯದಲ್ಲಿ ಕಾನೂನು ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಸಂವಿಧಾನ ಮತ್ತು ಮಹಿಳಾ ಹಕ್ಕುಗಳ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಕಾನೂನುಗಳು ಬಹಳಷ್ಟು ಕಠಿಣವಾಗಿದ್ದರೂ ಸಹ ಸಮಾಜದಲ್ಲಿ ನಿತ್ಯವೂ ಒಂದಲ್ಲಾ ಒಂದು ಮಹಿಳೆಯರ ಮೇಲೆ ಅನೇಕ ದೌರ್ಜನ್ಯಗಳು, ದಬ್ಬಾಳಿಕೆಗಳು, ಅತ್ಯಾಚಾರಗಳು ನಡೆಯುತ್ತಿರುವುದು ಖಂಡನೀಯ. ಮಹಿಳೆಯರು ಸಂಘಟನೆಗೊಂಡು ಜಾಗೃತರಾಗುವ ಮೂಲಕ ದೌರ್ಜನ್ಯ, ದಬ್ಬಾಳಿಕೆ ಹಾಗೂ ಅತ್ಯಾಚಾರಗಳನ್ನು ತಡೆಯಲು ಮುಂದಾಗಬೇಕು ಎಂದರು.
ನ್ಯಾಯಾಧೀಶ ಮಾರುತಿ ಬಾಗಡೆ ಮಾತನಾಡಿ, ಮಹಿಳೆಯರು ಕಾನೂನು ಅರಿವು ಪಡೆಯುವ ಮೂಲಕ ತಮ್ಮ ಹಕ್ಕನ್ನು ಚಲಾಯಿಸಬೇಕು. ಸ್ಲಂ ನಿವಾಸಿಗಳು ಜೀವನ ಪರ್ಯಂತ ಹೋರಾಟಗಳು ಮಾಡುತ್ತಿದ್ದರೂ ಇಂದಿಗೂ ಭೂಮಿಹಕ್ಕು ನೀಡದೆ ಇರುವುದು ವಿಷಾದನೀಯ. ಕಾನೂನು ಮತ್ತು ನಿಯಮಗಳು ಇದ್ದರೂ ಸ್ಲಂ ನಿವಾಸಿಗಳನ್ನು ಸ್ಲಂ ನಿವಾಸಿಗಳಾಗಿಯೇ ಇರುವಂತೆ ಸರ್ಕಾರ ಮಾಡುತ್ತಿರುವುದು ವಿಪರ್ಯಾಸ. ಅದಕ್ಕಾಗಿ ಮಹಿಳೆಯರು ಇಂತಹ ಕಾನೂನು ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅರಿವು ಪಡೆದು ಅಧಿಕಾರಿಗಳ ಜತೆ ಚರ್ಚೆ ಮಾಡಿ ತಮ್ಮ ಹಕ್ಕನ್ನು ಪಡೆಯಬೇಕು ಎಂದು ಹೇಳಿದರು.
ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸ್ ರಾವ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ಹತ್ತಿಕಾಳು ಪ್ರಭು ಸಿದ್ದಪ್ಪ, ತಹಸೀಲ್ದಾರ್ ರಮೇಶ್ ಕೋನರಡ್ಡಿ, ವಕೀಲರ ಸಂಘ ಅಧ್ಯಕ್ಷ ಕೆ. ರತ್ನಾಕರ ರಾವ್, ಕಾರ್ಯದರ್ಶಿ ಕೊಟ್ರೇಶ್ ಹಿರೇಮಠ್, ರೋಟರಿ ಕ್ಲಬ್ ಕಾರ್ಯದರ್ಶಿ ಸೈಯದ್ ಮಹ್ಮದ್, ಸ್ಲಂ ಸಮಿತಿ ಅಧ್ಯಕ್ಷ ಕೆ. ಸುನೀಲ್, ಮಹಿಳಾ ಘಟಕದ ಅಧ್ಯಕ್ಷೆ ಮೈಮುನಾಬಿ, ವಕೀಲರಾದ ಕೊಟ್ರಗೌಡ, ಸಿ. ಸುನಂದಾ ಮಾತನಾಡಿದರು.
ಸ್ಲಂ ಸಮಿತಿ ಸಂಚಾಲಕ ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಎನ್. ಹುಲಿಗೆಮ್ಮ ಇತರರಿದ್ದರು.