ಅಧಿಕಾರಿಗಳ ಆಲಸ್ಯ: ಅಭಿವೃದ್ಧಿ ಮರೀಚಿಕೆ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ನ. 29
ಪಾಳೆಗಾರರ ಕಾಲದಲ್ಲಿ ಕೂಡ್ಲಿಗಿ ತಾಲೂಕಿನಲ್ಲಿ 3 ಪಾಳೆಪಟ್ಟುಗಳು ಆಳ್ವಿಕೆ ನಡೆಸಿ ಮೂಲೆ ಸೇರಿದ್ದು ಇತಿಹಾಸ. ಈಗ ಕೂಡ್ಲಿಗಿ ಕ್ಷೇತ್ರದಲ್ಲಿ ಶಾಸಕರಿದ್ದೂ ಇಲ್ಲದಂತಾಗಿ ಪಾಳೆಗಾರನಿಲ್ಲದ ಪಾಳೆಪಟ್ಟಿನಂತಾಗಿದೆ.
ಕೂಡ್ಲಿಗಿ ಮೀಸಲು ಕ್ಷೇತ್ರದಲ್ಲೀಗ ಅನಾಥ ಪ್ರಜ್ಞೆ ಕಾಡುತ್ತಿದೆ. ಅಧಿಕಾರಿಗಳ ಆಲಸ್ಯತನದಿಂದ ಅಭಿವೃದ್ಧಿ ಎನ್ನುವುದು ಮರೀಚಿಕೆಯಾಗಿದ್ದು, ಭದ್ರಾ ಮೇಲ್ದಂಡೆ ಯೋಜನೆಯಂತಹ ಶಾಶ್ವತ ಯೋಜನೆಗಳ ಕನಸು ಕಾಣುತ್ತಿದ್ದ ಜನತೆಗೆ ಈಗ ಆಶಾಭಂಗವಾಗಿದೆ.
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ ಆರೋಪ ಹೊತ್ತಿರುವ ಶಾಸಕ ಬಿ. ನಾಗೇಂದ್ರ ಸಿಬಿಐನಿಂದ ಬಂಧಿತರಾಗಿದ್ದು, ಪ್ರಸ್ತುತ ವಿಧಾನಸಭೆ ಕಲಾಪದಲ್ಲಿ ಪಾಲ್ಗೊಳ್ಳಲು ಸಿಬಿಐ ಕೋರ್ಟ್ ಅವಕಾಶ ನೀಡಿದೆ. ನಿರಂತರ ಬರಗಾಲವನ್ನೇ ಹಾಸಿ ಹೊದ್ದು ಮಲಗುವ ಕೂಡ್ಲಿಗಿ ತಾಲೂಕಿನಲ್ಲಿ ಸಾಲು ಸಾಲು ಸಮಸ್ಯೆಗಳು ಇನ್ನೂ ಸಮಸ್ಯೆಗಳಾಗಿಯೇ ಉಳಿದಿವೆ. ಕೂಡ್ಲಿಗಿ ಕ್ಷೇತ್ರದ ಶಾಸಕ ನಾಗೇಂದ್ರ ಅವರನ್ನು ಜನತೆ 2ನೇ ಬಾರಿ ಆಯ್ಕೆ ಮಾಡಿದರೂ ಶಾಸಕರು ಕ್ಷೇತ್ರದಲ್ಲಿ ಇಲ್ಲವಾದ್ದರಿಂದ ಅಧಿಕಾರಿಗಳು, ಕೆಲ ರಾಜಕೀಯ ಹಿತಾಸಕ್ತಿಗಳು ತಮಗೆ ತಿಳಿದಂತೆ ವರ್ತಿಸುತ್ತಿದ್ದಾರೆ.
ಜನತೆಗೆ ಸಹಾಯ: ನಂಜುಂಡಪ್ಪ ವರದಿ ಪ್ರಕಾರ ರಾಜ್ಯದ ಅತ್ಯಂತ ಹಿಂದುಳಿದ ತಾಲೂಕಾದ ಕೂಡ್ಲಿಗಿ ತಾಲೂಕಿನಲ್ಲಿ ನಿರಂತರ ಬರ ರೈತರನ್ನು ಬೆಂಬಿಡದೆ ಕಾಡುತ್ತಿದೆ. ಈ ಬಾರಿಯೂ ಸರ್ಕಾರದ ವರದಿಯಲ್ಲಿ ಕೂಡ್ಲಿಗಿ ಬರಪೀಡಿತ ತಾಲೂಕಾಗಿ ಘೋಷಣೆಯಾಗಿದೆ. 2008ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ನಾಗೇಂದ್ರ, ಕ್ಷೇತ್ರದಲ್ಲಿ ಯಾವುದೇ ಮನೆಯಲ್ಲಿ ಯಾರೇ ಮರಣ ಹೊಂದಿದರೂ ಕೈಲಾದ ಆರ್ಥಿಕ ಸಹಾಯ ಮಾಡಿ ಸತ್ತವರ ಕುಟುಂಬಕ್ಕೆ ಸಾಂತ್ವನ ಹೇಳುವ 'ಅನ್ವೇಷಣೆ' ಎಂಬ ವಾಹನದ ಮೂಲಕ ಕ್ಷೇತ್ರದ ಜನತೆಗೆ ಮತ್ತಷ್ಟು ಹತ್ತಿರವಾಗಿದ್ದರು.
ಕ್ಷೇತ್ರ ಮೌನಕ್ಕೆ ಶರಣು: 2013ರ ಚುನಾವಣೆಯಲ್ಲಿಯೂ ಅತ್ಯಧಿಕ ಮತಗಳ ಅಂತರದಿಂದ 2ನೇ ಬಾರಿಗೂ ಜನತೆ ಗೆಲ್ಲಿಸಿದರು. ಮೊದಲ ಅವಧಿಯಲ್ಲಿ ಕೂಡ್ಲಿಗಿ ಪಟ್ಟಣದಲ್ಲಿ ದ್ವಿಪಥ ರಸ್ತೆ ನಿರ್ಮಿಸುವ ಮೂಲಕ ಕೂಡ್ಲಿಗಿ ಪಟ್ಟಣದ ರಸ್ತೆಗಳ ಚಿತ್ರಣವನ್ನೇ ಬದಲು ಮಾಡಿದ್ದರು. ಫ್ಲೋರೈಡ್ ಮುಕ್ತ, ಶಾಶ್ವತ ಕುಡಿಯುವ ನೀರಿನ ಪೂರೈಕೆ, ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಮೇಲ್ದಂಡೆಯಂತಹ ಮಹತ್ವಾಕಾಂಕ್ಷಿ ಯೋಜನೆಗಳ ಸಾಕಾರ ಪ್ರಯತ್ನ ನಡೆಸಿದ್ದರು. ಅಷ್ಟರಲ್ಲೇ ಬೇಲೆಕೇರಿ ಭೂತ ನಾಗೇಂದ್ರಗೆ ಕಾಡದೆ ಬಿಡಲಿಲ್ಲ. ಬೇಲೆಕೇರಿ ಪ್ರಕರಣದಲ್ಲಿ ಒಬ್ಬೊಬ್ಬರಾಗಿ ಜೈಲುಪಾಲಾಗುತ್ತಿದ್ದಾಗ ಕೊನೆಗೆ ಶಾಸಕ ನಾಗೇಂದ್ರ ಅವರನ್ನು ಬಂಧಿಸಿದಾಗ ಇಡೀ ಕೂಡ್ಲಿಗಿ ಕ್ಷೇತ್ರ ಮೌನಕ್ಕೆ ಶರಣಾಯಿತು.
ಕನಸು ನನಸಾಗಲಿಲ್ಲ: 2008ರಲ್ಲಿ ರೆಡ್ಡಿ ಪಾಳೆಯದಲ್ಲಿ ಶಾಸಕ ನಾಗೇಂದ್ರ ಗುರುತಿಸಿಕೊಂಡಿದ್ದರೂ ಆ ಸಮಯದಲ್ಲಿಯೇ ಜನತೆ, ಅಧಿಕಾರಿಗಳ ಜತೆ ಎಂದೂ ಅಧಿಕಾರದ ದರ್ಪ ಪ್ರದರ್ಶಿಸಲಿಲ್ಲ. ಹೀಗಾಗಿ ನಾಗೇಂದ್ರ 2 ಬಾರಿ ತನಗೆ ಪರಿಚಯವಿಲ್ಲದ ಕೂಡ್ಲಿಗಿ ಕ್ಷೇತ್ರದಲ್ಲಿ ಶಾಸಕನಾಗಿ ಆಯ್ಕೆಯಾಗಲು ಸಾಧ್ಯವಾಯಿತು. ರೆಡ್ಡಿಗಳ ಸಾಮ್ರಾಜ್ಯ ದಾರಿ ತಪ್ಪುತ್ತದೆ ಎಂದರಿತ ನಾಗೇಂದ್ರ ಜಾಣ್ಮೆಯಿಂದಲೇ ರೆಡ್ಡಿಗಳ ವಿಶ್ವಾಸಕ್ಕೂ ಧಕ್ಕೆ ಬರದ ಹಾಗೇ ಅಂತರ ಕಾಪಾಡಿಕೊಂಡಿದ್ದರು. ಶ್ರೀರಾಮುಲು ರಾಜಕೀಯದಲ್ಲಿ ಅಣ್ಣನಂತಿದ್ದರೂ ರಾಜ್ಯದ ರಾಜಕೀಯ ಅನಿಶ್ಚಿತತೆಯನ್ನರಿತ ನಾಗೇಂದ್ರ ಮಾತ್ರ ಬಿಎಸ್ಸಾರ್ ಹಿಂದೆ ಹೋಗದೆ ಇತ್ತ ಬಿಜೆಪಿಯಲ್ಲಿರದೇ ಪಕ್ಷೇತರನಾಗಿ ಕಣಕ್ಕಿಳಿದು ಶಾಸಕನಾಗಿ ಆಯ್ಕೆಯಾದರು. ಒಂದು ವೇಳೆ ರಾಜ್ಯದಲ್ಲಿ ಕಾಂಗ್ರೆಸ್ಗೆ ಸ್ಪಷ್ಟ ಬಹುಮತ ಸಿಗದಿದ್ದರೆ ಪಕ್ಷೇತರ ಶಾಸಕ ನಾಗೇಂದ್ರ ಬಹುಮತ ನೀಡಲು ತುದಿಗಾಲಲ್ಲಿ ಇದ್ದರು. ಆದರೆ ಅವರ ಕನಸು ನನಸಾಗಲಿಲ್ಲ. ಅನಂತರ ಬೇಲೆಕೇರಿ ಭೂತ ನಾಗೇಂದ್ರ ಹೆಗಲೇರಿತು.
ಸದ್ಯಕ್ಕೆ ಶಾಸಕ ನಾಗೇಂದ್ರ ಬೆಳಗಾವಿ ಅಧಿವೇಶನದಲ್ಲಿ ಭಾಗಿಯಾಗಲು ಸಿಬಿಐ ಕೋರ್ಟ್ ಅನುಮತಿ ನೀಡಿರುವುದರಿಂದ ಕ್ಷೇತ್ರದ ಜನತೆಯಲ್ಲಿ ಆಸೆ ಚಿಗುರೊಡೆದಿದೆ. ಆರೋಪಮುಕ್ತರಾಗಿ ಹೊರ ಬರಲಿ ಎಂಬುದು ನಾಗೇಂದ್ರ ಅಭಿಮಾನಿಗಳ ಮಾತು. ಆದರೆ ಕಾನೂನು ಮಾತ್ರ ಎಲ್ಲರಿಗೂ ಒಂದೆ. ಈ ನಡುವೆ ಕೂಡ್ಲಿಗಿ ಕ್ಷೇತ್ರ ಮಾತ್ರ ಜ್ವಲಂತ ಸಮಸ್ಯೆಗಳಿಗೆ ಸ್ಪಂದಿಸುವ ನಾಯಕನಿಲ್ಲದೆ ಅನಾಥವಾಗಿರುವುದಂತೂ ಸತ್ಯ.
-ಭೀಮಣ್ಣ ಗಜಾಪುರ