ಪುರಸಭೆ ಅವ್ಯವಹಾರ ತನಿಖೆಗೆ ಆಗ್ರಹ
ಹೂವಿನಹಡಗಲಿ: ಅನುದಾನ ದುರ್ಬಳಕೆ, ಕಾನೂನುಬಾಹಿರ ಕ್ರಿಯಾ ಯೋಜನೆ, ಸ್ವಜನ ಪಕ್ಷಪಾತ, ಸೊಸೈಟಿ ನಿವೇಶನದ ಖೊಟ್ಟಿ ದಾಖಲೆಗಳ ಸೃಷ್ಟಿ ಮಾಡಿರುವ ಕುರಿತಂತೆ ತನಿಖೆ ಮಾಡಿ ಪುರಸಭೆ ಅಧಿಕಾರಿಗಳ ಮೇಲೆ ಸರ್ಕಾರ ಕ್ರಮಕೈಗೊಳ್ಳಬೇಕು ಎಂದು ಪುರಸಭೆ ಸದಸ್ಯ ಮಂಜುನಾಥ ಜೈನ್ ದಾಖಲೆ ಸಮೇತ ಒತ್ತಾಯಿಸಿದ್ದಾರೆ.
ಇಲ್ಲಿನ ಪುರಸಭೆ ಕಚೇರಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದರು. 2008ರಿಂದ 2013ರ ವರೆಗೆ ಮಾಹಿತಿ ಹಕ್ಕು ಅಧಿನಿಯಮದಡಿ ಮಾಹಿತಿ ಪಡೆದು, ಕಾನೂನುಗಳನ್ನು ಗಾಳಿಗೆ ತೂರಿ ಕ್ರಿಯಾಯೋಜನೆ ತಯಾರಿಸಿ ಯೋಜನೆಗಳ ಷರತ್ತುಗಳನ್ನು ಉಲ್ಲಂಘಿಸಿದ್ದಾರೆ. ಅಂದಿನ ಬಹುತೇಕ ಕಾಮಗಾರಿಗಳು ಸಂಪೂರ್ಣ ಕಳಪೆಯಿಂದ ಕೂಡಿದ್ದು, ಸಾಕಷ್ಟು ಅವ್ಯವಹಾರ ನಡೆದಿದೆ ಎಂದು ಗಂಭೀರವಾಗಿ ಆರೋಪಿಸಿದ್ದಾರೆ.
ಆಡಳಿತಾಧಿಕಾರಿ ಅವಧಿಯಲ್ಲಿ ರು. 61.01 ಲಕ್ಷ ಬಿಡುಗಡೆಯಾಗಿತ್ತು. 2009-10ರ ಎಸ್ಎಫ್ಸಿ ಹಾಗೂ 2011-12ರ ಎಸ್ಎಫ್ ಯೋಜನೆಯಲ್ಲಿ ತಲಾ ಒಂದು ಕಾಮಗಾರಿ, 2009-10ರ ಸಿಎಂಎಸ್ಎಂಟಿಡಿಪಿಯಡಿ 4 ಕಾಮಗಾರಿ, 2011-12ರ 13ನೇ ಹಣಕಾಸಿನಲ್ಲಿ 3 ಕಾಮಗಾರಿಗಳು ಸೇರಿ ಒಟ್ಟು 9 ಕಾಮಗಾರಿಗಳ ಅನುದಾನವನ್ನು ತರಾತುರಿಯಲ್ಲಿ ಬಿಡುಗಡೆ ಮಾಡಿದ್ದಾರೆಂದು ಆರೋಪಿಸಿದ್ದಾರೆ.
ಈ ಅವ್ಯವಹಾರದಲ್ಲಿ ಹಿಂದಿನ ಪುರಸಭೆ ಅಧ್ಯಕ್ಷರು, ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಮೇಲ್ನೋಟಕ್ಕೆ ಕಂಡಿದೆ. 2008ರಿಂದ 2013ರ ವರೆಗೆ ಲಗುಬಗೆಯಿಂದ ಆಡಳಿತಾಧಿಕಾರಿ ಅವಧಿಯಲ್ಲಿ ಅಧಿಕಾರಿಗಳು ರು. 51.01 ಲಕ್ಷ ಡ್ರಾ ಮಾಡಿದ್ದಾರೆ ಎಂದು ದೂರಿದರು.
ನ. 8 ಮತ್ತು ನ. 12ರಂದು ಕರೆಯಲಾಗಿದ್ದ ಅಲ್ಪಾವಧಿ ಟೆಂಡರ್ ಕುರಿತು 14 ಜನ ಪುರಸಭೆ ಕಾಂಗ್ರೆಸ್ ಸದಸ್ಯರು, ಮುಖ್ಯಾಧಿಕಾರಿ, ಎಂಜಿನಿಯರ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕಾಂಗ್ರೆಸ್ ಗುತ್ತಿಗೆದಾರರಿಗೆ ಮಾತ್ರ ಟೆಂಡರ್ ಹಾಕಲು ಅನುವು ಮಾಡಿಕೊಟ್ಟಿದ್ದಾರೆ. ಬೇರೆ ಗುತ್ತಿಗೆದಾರರಿಗೆ ಅವಕಾಶ ನೀಡಿಲ್ಲ. ಈ ಟೆಂಡರ್ನಲ್ಲಿ ಅನವಶ್ಯಕ ಕಾಮಗಾರಿಗಳಿದ್ದು, ತಮ್ಮ ಲಾಭಕ್ಕಾಗಿ ಬೋಗಸ್ ಟೆಂಡರ್ ಕರೆದಿದ್ದಾರೆ. ಈ ಟೆಂಡರ್ನ್ನು ರದ್ದುಪಡಿಸಬೇಕು ಎಂದು 9 ಪುರಸಭೆ ಸದಸ್ಯರು ಮತ್ತು ಗುತ್ತಿಗೆದಾರರು ಒತ್ತಾಯಿಸಿದ್ದೇವೆಂದು ಹೇಳಿದರು.
ಪಟ್ಟಣದ 2 ಮತ್ತು 3ನೇ ವಾರ್ಡ್ಗಳಲ್ಲಿ ಸಾರ್ವಜನಿಕ ಶೌಚಕ್ಕೆ ಪೈಪ್ಲೈನ್ಗಾಗಿ ರು. 2 ಲಕ್ಷಗಳ ಟೆಂಡರ್ ಕರೆದಿದ್ದು, ಬೋಗಸ್ ಬಿಲ್ ಮಾಡುವ ಹುನ್ನಾರ ನಡೆದಿದೆ. ಸದ್ಯ ಪೈಪ್ಲೈನ್ ವ್ಯವಸ್ಥೆ ಇದೆ. ಅನೇಕ ಬಾರಿ ಶೌಚ ದುರಸ್ತಿಗೆ ಮನವಿ ಮಾಡಿದ್ದರೂ ಯಾರೂ ಸ್ಪಂದಿಸಿಲ್ಲ. ಈಗ ಪುರಸಭೆ ಮುಖ್ಯಾಧಿಕಾರಿ ರಿಪೇರಿ ಮಾಡದೆ ಹಣ ನುಂಗಲು ಟೆಂಡರ್ ಕರೆದಿದ್ದಾರೆ ಎಂದು ದೂರಿದರು.
ಪಟ್ಟಣ ಸೊಸೈಟಿಯೊಂದರ ನಿವೇಶನದ ಕುರಿತಂತೆ ಅಧಿಕಾರಿಗಳು ಖೊಟ್ಟಿ ದಾಖಲೆಗಳನ್ನು ಸೃಷ್ಟಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪಟ್ಟಣದ ವ್ಯಾಪ್ತಿಯಲ್ಲಿನ ಅನೇಕ ಸರ್ಕಾರಿ ಜಾಗಗಳನ್ನು 15-20 ವರ್ಷಗಳ ಹಿಂದಿನ ದಿನಾಂಕ ಹಾಕಿ ನಿವೇಶನ ಮಂಜೂರು ಮಾಡುವ ಪದ್ಧತಿ ಇಲ್ಲಿನ ಪುರಸಭೆಯಲ್ಲಿದೆ. ಈ ಜಿಡ್ಡುಗಟ್ಟಿರುವ ವ್ಯವಸ್ಥೆಯನ್ನು ಸರಿಪಡಿಸಿದ್ದರೆ 9 ಪುರಸಭೆ ಸದಸ್ಯರು ಪುರಸಭೆಗೆ ಮುತ್ತಿಗೆ ಹಾಕಿ ಹೋರಾಟ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಪುರಸಭೆ ಸದಸ್ಯರಾದ ಎಂ. ಸುರೇಶ, ರವಿ ಬಾರಿಕೇರ, ಎನ್. ಇರ್ಫಾನ್, ಯು. ಲಲಿತಮ್ಮ, ಮರ್ದಾನಬಿ, ರುದ್ರಮ್ಮ, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ. ಗೌಸ್ ಮೊಹಿದ್ದೀನ್, ಗುತ್ತಿಗೆದಾರ ಜಿ. ಬುಳ್ಳಪ್ಪ, ಪುತ್ರೇಶ ಉಪಸ್ಥಿತರಿದ್ದರು.