ಟ್ರಸ್ಟ್ ನಿವೇಶನ ಬಳಕೆ: ನನ್ನದು ತಪ್ಪಿಲ್ಲ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 30
ಅರ್ಧ ದಾಖಲೆಗಳನ್ನು ಮಾಧ್ಯಮಗಳಿಗೆ ನೀಡಿ, ಟ್ರಸ್ಟ್ ವಿಷಯವನ್ನು ತಿರುಚಿ ಕೆಲವರು ಹೇಳಿದ್ದಾರೆ. ರಾಜೀವ್ ಗಾಂಧಿ ಮೆಮೊರಿಯಲ್ ಟ್ರಸ್ಟ್ ಕುರಿತ ವಾಸ್ತವ ಮಾಹಿತಿಯನ್ನು ಜಿಲ್ಲಾಧಿಕಾರಿಗಳು ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಇದರಲ್ಲಿ ತಮ್ಮದು ತಪ್ಪಿಲ್ಲ, ಕೆಪಿಸಿಸಿ ಅಧ್ಯಕ್ಷರು ನೀಡಿರುವ ನೋಟಿಸ್ಗೆ ಕೆಪಿಸಿಸಿ ಕಚೇರಿಗೆ ಖುದ್ದಾಗಿ ತೆರಳಿ ದಾಖಲೆಗಳ ಸಮೇತ ಉತ್ತರ ನೀಡಿದ್ದೇನೆ ಎಂದು ಮಾಜಿ ಸಂಸದ ಕೆ.ಸಿ. ಕೊಂಡಯ್ಯ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಂದು ತಿಂಗಳಿನಿಂದ ಮಾಧ್ಯಮಗಳು ಚರ್ಚೆಗೆ ಬರುವಂತೆ ತಮಗೆ ಆಹ್ವಾನ ನೀಡಿದ್ದವು, ಆದರೆ ಯಾವುದೋ ವ್ಯಕ್ತಿ ಮಾಡಿದ ಆರೋಪಕ್ಕೆ ತಾವು ಉತ್ತರಿಸಬಾರದು, ಅಧಿಕೃತವಾಗಿ ಕೆಪಿಸಿಸಿಯಿಂದ ನೋಟಿಸ್ ಬಂದಿದ್ದರಿಂದ ಇದೀಗ ಉತ್ತರಿಸಿದ್ದೇನೆ. ಒಂದುವರೆ ತಿಂಗಳಿನಿಂದ ಅವಮಾನ ಎದುರಿಸಿದರೂ ಮೌನದಲ್ಲಿದ್ದೆ. ಈವರೆಗೆ ಕೆಪಿಸಿಸಿ ಅಧ್ಯಕ್ಷರು ನೋಟಿಸ್ ಬಿಟ್ಟಂತೆ ತಮ್ಮನ್ನು ಸಂಪರ್ಕಿಸಿಲ್ಲ ಎಂದರು.
20 ವರ್ಷದ ರಾಜಕೀಯದಲ್ಲಿ ತಾವು ಯಾರ ಮೇಲೆ ಆರೋಪ ಮಾಡಿ, ಕೆಪಿಸಿಸಿಗೆ ದೂರು ನೀಡಿಲ್ಲ. ಆದರೀಗ ತಮ್ಮ ಮೇಲೆ ಆರೋಪ ಮಾಡಿದವರ ಮೇಲೆ ಮಾನನಷ್ಟ ಮೊಕದ್ದಮೆ ಹಾಗೂ ಕಾನೂನು ಹೋರಾಟ ಮಾಡುವಂತೆ ಆಪ್ತರು ಹೇಳುತ್ತಾರೆ. ಈ ಕುರಿತು ವಕೀಲರು, ಪಕ್ಷದ ಮುಖಂಡರೊಂದಿಗೆ ಚರ್ಚಿಸಿ ನಿರ್ಧರಿಸುತ್ತೇನೆ. ಪಕ್ಷದ ತತ್ವ ಸಿದ್ಧಾಂತಗಳಿಗೆ ನಾನು ಬದ್ಧ ಎಂದು ತಿಳಿಸಿದರು.
ಯಾರಾದರೂ ಮಾಡಲಿ: ಯಾರು ಬೇಕಾದರೆ ಟ್ರಸ್ಟ್ ಸ್ಥಾಪಿಸಲಿ, ಅದಕ್ಕೆ ನನ್ನ ಅಭ್ಯಂತರವಿಲ್ಲ. ಅನಿಲ್ ಲಾಡ್ ಅವರು ಕೂಡ್ಲಿಗಿ ಶಾಸಕರಾಗಿದ್ದಾಗ ಅಲ್ಲಿನ ಹೌಸಿಂಗ್ ಸ್ಕೀಮ್ಗೆ ಇಂದಿರಾ ಗಾಂಧಿ ಸೇರಿದಂತೆ ಇತರರ ಹೆಸರು ಇಟ್ಟಿದ್ದರೆ. ಅವರ ಹೆಸರು ರದ್ದುಪಡಿಸುವಂತೆ ಹೇಳಿರುವುದು ಜಿಪಂ ಸಭೆಯ ನಡಾವಳಿಯಲ್ಲಿ ದಾಖಲಾಗಿದೆ. ಇದೀಗ ಅನಿಲ್ ಲಾಡ್ ಕಾಳಜಿ ತೋರಿಸುತ್ತಾರೆ. ಯಾರ ಮೇಲೆಯೂ ಅನಗತ್ಯ ಆರೋಪ ಮಾಡುವುದಿಲ್ಲ, ಅದರಲ್ಲಿ ಎಂದಿಗೂ ರಾಜಕೀಯ ಮಾಡುವುದಿಲ್ಲ ಎಂದು ಪರೋಕ್ಷವಾಗಿ ಅನಿಲ್ ಲಾಡ್ ವಿರುದ್ಧ ವಾಗ್ದಾಳಿ ನಡೆಸಿದರು.
ಡಿಸಿ ಬರೆದ ಪತ್ರದಲ್ಲಿ ಏನಿದೆ?: ಬಳ್ಳಾರಿ ಜಿಲ್ಲಾಧಿಕಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದು, 2001ರಲ್ಲಿ 99 ವರ್ಷ ಅವಧಿಗೆ ರಾಜೀವ್ ಗಾಂಧಿ ಮೆಮೊರಿಯಲ್ ಟ್ರಸ್ಟ್ಗೆ ಭೂಮಿಯನ್ನು ಲೀಜ್ ನೀಡುವಂತೆ ಟ್ರಸ್ಟ್ನವರು ಕೇಳಿದ್ದರು. ರಾಜಕೀಯ ಪಕ್ಷಕ್ಕೆ ಲೀಜ್ ನೀಡಲು ಬರುವುದಿಲ್ಲ ಎಂದು ಹೇಳಿದ್ದರಿಂದ ಅದೇ ಟ್ರಸ್ಟ್ಗೆ 30 ವರ್ಷದ ಅವಧಿಗೆ ಷರತ್ತು ವಿಧಿಸಿ ಗುತ್ತಿಗೆ ನೀಡಲಾಗಿತ್ತು. ಆದರೆ ಟ್ರಸ್ಟ್ ನೋಂದಣಿಯಾಗಿರಲಿಲ್ಲ, ನಂತರ 2005ರಲ್ಲಿ ನೋಂದಣಿಯಾಗಿತ್ತು. 5,070 ಚದರ ಅಡಿ ಜಾಗವನ್ನು ವಾಹನ ನಿಲುಗಡೆ ಹಾಗೂ ಸಿಟಿ ಬಸ್ ನಿಲ್ದಾಣ, ಸಾರ್ವಜನಿಕ ಉಪಯೋಗಕ್ಕಾಗಿ ಪಾಲಿಕೆಯವರು ಟ್ರಸ್ಟ್ಗೆ ನೀಡಿದ ಉದ್ದೇಶಕ್ಕೆ ನಿಗದಿತ ಅವಧಿಯೊಳಗೆ ಬಳಸದೆ ಇರುವುದರಿಂದ ಸದರಿಯವರಿಗೆ ಕಾರಣ ಕೇಳುವ ನೋಟಿಸ್ ನೀಡಲಾಗಿ, ಸಮರ್ಪಕ ಉತ್ತರ ನೀಡದ ಕಾರಣ, ಟ್ರಸ್ಟ್ಗೆ ಗುತ್ತಿಗೆ ನೀಡಿದ ಆದೇಶವನ್ನು ಮಹಾನಗರ ಪಾಲಿಕೆ 2010ರಲ್ಲಿ ರದ್ದುಪಡಿಸಿದೆ.
ಇದನ್ನು ಪ್ರಶ್ನಿಸಿ ಟ್ರಸ್ಟ್ ಅಧ್ಯಕ್ಷರು ಹೈಕೋರ್ಟ್ನ ಧಾರವಾಡ ಪೀಠದ ಮೊರೆ ಹೋಗಿದ್ದರು. ಹೈಕೋರ್ಟ್ ವಾದಿಗಳಿಗೆ ಅವಕಾಶ ನೀಡಲು ನೋಟಿಸ್ ನೀಡಿ, ಅಹವಾಲು ಕೇಳಿ ಸೂಕ್ತ ಆದೇಶ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದ್ದರು. ಪ್ರಕರಣವನ್ನು ವಿಚಾರಣೆಗೆ ತೆಗೆದುಕೊಂಡು ಕೂಲಂಕಷವಾಗಿ ವಿಚಾರಣೆ ನಡೆಸಿ, ವಾದಿಗಳಾದ ರಾಜೀವ್ ಗಾಂಧಿ ಮೆಮೊರಿಯಲ್ ಟ್ರಸ್ಟ್ ಮನವಿ ಪುರಸ್ಕರಿಸಿ, ಪಾಲಿಕೆ ಆದೇಶ ಕೈ ಬಿಡಲಾಗಿದೆ. ನಿಯೋಜಿತ ಉದ್ದೇಶಕ್ಕಾಗಿ ನಿಗದಿತ ಅವಧಿಯೊಳಗೆ ಕಟ್ಟಡ ಪೂರ್ಣಗೊಳಿಸಲು ಅ. 17ರಂದು ಕಾಲಾವಧಿ ಮಂಜೂರು ಮಾಡಲಾಗಿದೆ. ಇದೀಗ ಕಟ್ಟಡ ನಿರ್ಮಾಣ ಕಾರ್ಯ ಚಾಲ್ತಿಯಲ್ಲಿದೆ ಎಂದು ಪತ್ರದಲ್ಲಿ ತಿಳಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ನಿರಂಜನ ನಾಯ್ಡು, ಮಂಡ್ಲೂರು ನಾರಾಯಣರಾವ್, ಬೆಣಕಲ್ ಬಸವರಾಜ್, ಚಂದ್ರಶೇಖರ್, ಗಾದೆಪ್ಪ, ಮಾನಯ್ಯ, ಮಂಜುನಾಥ್, ಸಿದ್ದಪ್ಪ, ವೆಂಕಟರಮಣ, ಬ್ರಹ್ಮಯ್ಯ, ಹುಮಾಯೂನ್ ಖಾನ್, ಪಾರ್ಥ ರೆಡ್ಡಿ ಸೇರಿದಂತೆ ಇತರರು ಇದ್ದರು.