ಬಳ್ಳಾರಿ ಜಿಲ್ಲೆಯಲ್ಲಿ ಬತ್ತ ಖರೀದಿ ಕೇಂದ್ರ ಆರಂಭ
ಬಳ್ಳಾರಿ: ರಾಜ್ಯ ಸರ್ಕಾರ 2013-14ನೇ ಸಾಲಿನ ಮುಂಗಾರು ಹಂಗಾಮಿನ ಬತ್ತಕ್ಕೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ್ದು, ಶನಿವಾರದಿಂದ ಬತ್ತ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ ಎಂದು ಜಿಲ್ಲಾಧಿಕಾರಿ ಅಮ್ಲಾನ್ ಆದಿತ್ಯ ಬಿಸ್ವಾಸ್ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿಯಲ್ಲಿ ನ. 7ರಂದು ನಡೆದ ಟಾಸ್ಕ್ಫೋರ್ಸ್ ಸಮಿತಿ ಸಭೆಯಲ್ಲಿ ತೀರ್ಮಾನಿಸಿದಂತೆ ಮುಂಗಾರು ಹಂಗಾಮಿನ ಭತ್ತದ ಕನಿಷ್ಠ ಬೆಂಬಲ ಬೆಲೆಯನ್ನು ಪ್ರತಿ ಕ್ವಿಂಟಲ್ಗೆ ರು. 1,310 ಜತೆಗೆ ರಾಜ್ಯ ಸರ್ಕಾರದ ಪ್ರೋತ್ಸಾಹಧನ ರು. 290 ಸೇರಿ ಒಟ್ಟು ರು. 1,600 ನಿಗದಿಪಡಿಸಲಾಗಿದೆ. 17 ತೇವಾಂಶದ ಬತ್ತವನ್ನು ಖರೀದಿಸಲು ಕರ್ನಾಟಕ ಆಹಾರ ನಾಗರಿಕ ಸರಬರಾಜು ಮತ್ತು ನಿಗಮ ನಿಯಮಿತವನ್ನು ಖರೀದಿ ಏಜೆನ್ಸಿಯಾಗಿ ನೇಮಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕೆಎಫ್ಸಿಎಸ್ಸಿ ಕಚೇರಿ ಅಥವಾ ದೂ-ಸಂ-08392-276283ನ್ನು ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.
ಈಡೇರದ ಬೇಡಿಕೆ: ಎಐಟಿಯುಸಿ ಪ್ರತಿಭಟನೆ
ಹೂವಿನಹಡಗಲಿ: ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಹಾಗೂ ತಾಲೂಕು ಎಐಟಿಯುಸಿ ವತಿಯಿಂದ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಶನಿವಾರ ಪ್ರತಿಭಟನೆ ಮಾಡಿದರು. ಎಐಟಿಯುಸಿ ತಾಲೂಕು ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ ಮಾತನಾಡಿ, ಕೂಲಿ ಕಾರ್ಮಿಕರ ಚಳವಳಿ ಮಾಡುವ ಹಕ್ಕು ಕಿತ್ತುಕೊಳ್ಳಲು ಸರ್ಕಾರ ಹುನ್ನಾರ ನಡೆಸಿ ಎಸ್ಮಾ ಜಾರಿಗೆ ತರಲಾಗುತ್ತಿದೆ ಎಂದು ದೂರಿದರು. ಪ್ರತಿಭಟನೆಯಲ್ಲಿ ಫೆಡರೇಷನ್ ಅಧ್ಯಕ್ಷ ಎನ್.ಮಂಜುಳ, ಕಾರ್ಯದರ್ಶಿ ಕಮಲಾಕ್ಷಿ, ಜೆ.ಇಂದಿರಾ, ಬಿ. ಹೇಮಾವತಿ, ಎನ್. ಸುನಂದಾ, ಎಸ್. ವಿಜಯ, ನೂರಾರು ಕಾರ್ಯಕರ್ತೆಯರು ಭಾಗವಹಿಸಿದ್ದರು.
ಅನ್ನಭಾಗ್ಯ ಭ್ರಷ್ಟಾಚಾರ: ಸದಸ್ಯತ್ವ ರದ್ದತಿಗೆ ಒತ್ತಾಯ
ಗಂಗಾವತಿ: ಅನ್ನಭಾಗ್ಯ ಯೋಜನೆಯಲ್ಲಿ ಭಾಗಿಯಾಗಿ ಭ್ರಷ್ಟಾಚಾರ ನಡೆಸಿದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಂಗ್ರೆಸ್ ಸದಸ್ಯ ಎಸ್. ವೆಂಕಟರಡ್ಡಿ ಅವರ ನಾಮನಿರ್ದೇಶನವನ್ನು ರದ್ದುಮಾಡಬೇಕೆಂದು ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಕಾರ್ಯಕರ್ತರು ಎಪಿಎಂಸಿ ಕಚೇರಿ ಮುಂದೆ ಧರಣಿ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವೇದಿಕೆ ಜಿಲ್ಲಾಧ್ಯಕ್ಷ ರಾಜೇಶ ಅಂಗಡಿ ಅವರು, ಬಡವರ ಭಾಗ್ಯದ ಯೋಜನೆಯಾದ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ದಾಸನಾಳ ಗ್ರಾಮದ ಬಳಿ ಇರುವ ಕೀರ್ತಿ ರೈಸ್ ಇಂಡಸ್ಟ್ರೀಸ್ನಲ್ಲಿ ಅಕ್ರಮವಾಗಿ ಸಂಗ್ರಹಿಸಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ದೂರಿದರು. ಕೂಡಲೇ ಸರ್ಕಾರ ಈ ಸದಸ್ಯನ ಸದಸ್ಯತ್ವ ರದ್ದುಗೊಳಿಸಬೇಕೆಂದು ಒತ್ತಾಯಿಸಿದರು. ಮಂಜುನಾಥ ಜಂಗರ, ಹೊನ್ನಪ್ಪನಾಯಕ, ಎಸ್.ಹೈದರ ಅಲಿ, ವೆಂಕಟೇಶ ಬಾಬು, ನಾಗರಾಜ ಗೂಗಿ, ಬಂಡಿನಾಗರಾಜ ನಾಯಕ, ಯಮನೂರುಸಾಬ ಭಾಗವಹಿಸಿದ್ದರು.
ಭೂರಹಿತರಿಗೆ ಭೂಮಿ ನೀಡಿ:
ಬಿಎಸ್ಪಿ ಧರಣಿ ಅಂತ್ಯ
ಬಳ್ಳಾರಿ: ಬಗರ್ಹುಕುಂ ಸಾಗುವಳಿ ಸಕ್ರಮಗೊಳಿಸಿ, ಭೂರಹಿತರಿಗೆ ಭೂಮಿ ನೀಡುವಂತೆ ಒತ್ತಾಯಿಸಿ, ಬಹುಜನ ಸಮಾಜ ಪಕ್ಷದ ಜಿಲ್ಲಾ ಘಟಕ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಮೂರು ದಿನಗಳ ಕಾಲ ಹಮ್ಮಿಕೊಂಡಿದ್ದ ಧರಣಿ ಶನಿವಾರ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸುವ ಮೂಲಕ ಅಂತ್ಯಗೊಂಡಿತು. ಸರ್ಕಾರ ಬಗರ್ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸಿ, ಭೂಮಿಯನ್ನು ಸಕ್ರಮಗೊಳಿಸಿ, ಸಾಗುವಳಿ ಪತ್ರ ನೀಡಬೇಕು ಆಗ್ರಹಿಸಿದರು. ಅಬ್ದುಲ್ ಲತೀಫ್, ರೇಣುಕುಮಾರ್, ಎಚ್.ಎಂ. ಕುಮಾರ್, ಚಂದ್ರಣ್ಣ, ಲಕ್ಷ್ಮಣ, ಮಹಾದೇವ, ಮಾರೇಶ್, ಉಮೇಶ್, ಅಂಬಣ್ಣ, ತಾಯಮ್ಮ, ಹುಲಿಗೆಮ್ಮ, ಈರಮ್ಮ, ಚಂದ್ರಮ್ಮ, ನೇಮಕಲ್ ಹುಲಿಗೆಮ್ಮ ಇದ್ದರು.
ಅನರ್ಹ ಪಡಿತರ ಚೀಟಿ ಹಿಂದಿರುಗಿಸಿ: ಡಿಸಿ ಸೂಚನೆ
ಕೊಪ್ಪಳ: ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಪಡೆದ ಕುಟುಂಬಗಳು ಹಾಗೂ ನ್ಯಾಯಬೆಲೆ ಅಂಗಡಿಕಾರರು ತಮ್ಮ ಬಳಿ ಇರುವ ಅನರ್ಹ, ನಕಲಿ ಪಡಿತರ ಚೀಟಿಗಳನ್ನು ಡಿ.31ರೊಳಗೆ ಆಯಾ ತಾಲೂಕು ಕಚೇರಿಗೆ ಹಿಂದಿರುಗಿಸಬೇಕು ಎಂದು ಡಿಸಿ ಕೆ.ಪಿ. ಮೋಹನರಾಜ್ ಸೂಚನೆ ನೀಡಿದ್ದಾರೆ. ಅನರ್ಹ ವ್ಯಕ್ತಿಗಳು, ಒಂದಕ್ಕಿಂತ ಹೆಚ್ಚು ಪಡಿತರ ಚೀಟಿ ಪಡೆದಿರುವ ಕುಟುಂಬಗಳು ಹಾಗೂ ನ್ಯಾಯಬೆಲೆ ಅಂಗಡಿಕಾರರು ತಮ್ಮ ಬಳಿ ಇರುವ ಅನರ್ಹ, ನಕಲಿ ಪಡಿತರ ಚೀಟಿ ಡಿ. 31ರೊಳಗೆ ಆಯಾ ತಾಲೂಕು ಕಚೇರಿಗೆ, ಆಹಾರ ಇಲಾಖೆ ಉಪನಿರ್ದೇಶಕರಿಗೆ ಹಿಂದಿರುಗಿಸಬೇಕು. ಇಲ್ಲವಾದರೆ ಪಡಿತರ ಚೀಟಿ ರದ್ದುಪಡಿಸಿ, ಮೊಕದ್ದಮೆ ಹಾಕಲಾಗುವುದು ಎಂದು ಎಚ್ಚರಿಸಿದ್ದಾರೆ.
ಏಕೀಕರಣ ಹೋರಾಟಗಾರರ ಹೋರಾಟ ಅನನ್ಯ
ಹೂವಿನಹಡಗಲಿ: ಭಾಷಾವಾರು ರಾಜ್ಯ ವಿಂಗಡಣೆಗೆ ಕರ್ನಾಟಕ ಏಕೀಕರಣ ಹೋರಾಟಗಾರರ ಹೋರಾಟ ಅನನ್ಯ ಎಂದು ಕಸಾಪ ಜಿಲ್ಲಾ ಪ್ರತಿನಿಧಿ ಲೋಕ್ಯಾನಾಯ್ಕ ಹೇಳಿದರು. ತಾಲೂಕಿನ ಹೊಳಲು ಗ್ರಾಮದ ಸ್ವಾಮಿ ವಿವೇಕಾನಂದ ಸರ್ಕಾರಿ ಪಪೂ ಕಾಲೇಜಿನಲ್ಲಿ ಕಸಾಪ ಆಯೋಜಿಸಿದ್ದ ಕರ್ನಾಟಕ ಏಕೀಕರಣ ಹೋರಾಟಕ್ಕೆ ಬಳ್ಳಾರಿ ಜಿಲ್ಲೆ ಕೊಡುಗೆ ಕುರಿತು ಅವರು ಮಾತನಾಡಿದರು. ಕರ್ನಾಟಕ ಹಾಗೂ ವೀರಶೈವ ವಿದ್ಯಾವರ್ಧಕ ಸಂಘಗಳು, ಅನೇಕ ಸಂಘ ಸಂಸ್ಥೆಗಳು ಸಹ ಹೋರಾಟ ಚಳವಳಿಯಲ್ಲಿ ಭಾಗವಹಿಸಿದ್ದವು ಎಂದು ಹೇಳಿದರು. ಶಿಕ್ಷಕ ಶಿವಾನಂದಪ್ಪ ಅಧ್ಯಕ್ಷತೆ ವಹಿಸಿದ್ದರು. ಸುರೇಶ ಅಂಗಡಿ ಮಾತನಾಡಿದರು. ಶಿಕ್ಷಕ ಶೇಕ್ಅಹ್ಮದ್, ವಿದ್ಯಾರ್ಥಿನಿ ರಂಜಿತಾ ನಿರ್ವಹಿಸಿದರು.
ಮತದಾರರ ಪಟ್ಟಿ ತಯಾರಿಕೆ ಸಹಕಾರ ಅಗತ್ಯ: ಬಿಸ್ವಾಸ್
ಕೊಪ್ಪಳ: ಮತದಾರರ ಪಟ್ಟಿಯನ್ನು ದೋಷಮುಕ್ತವಾಗಿ ತಯಾರಿಸಲು ಹಾಗೂ ಅರ್ಹರು ಮತ ಪಟ್ಟಿಯಲ್ಲಿ ಹೆಸರು ನೋಂದಾಯಿಸುವ ಮತದಾರರ ಪಟ್ಟಿ ಪರಿಷ್ಕರಣಾ ಕಾರ್ಯಕ್ರಮ ಯಶಸ್ವಿಗೆ ರಾಜಕೀಯ ಪಕ್ಷಗಳ ಸಹಕಾರ ಅಗತ್ಯ ಎಂದು ಗುಲ್ಬರ್ಗ ವಿಭಾಗದ ಪ್ರಾದೇಶಿಕ ಆಯುಕ್ತ ಆಮ್ಲನ್ ಆದಿತ್ಯ ಬಿಸ್ವಾಸ್ ಹೇಳಿದರು. ಜಿಲ್ಲೆಯ ಮತದಾರರ ಪಟ್ಟಿ ಪರಿಷ್ಕರಣೆ ಪ್ರಗತಿ ಪರಿಶೀಲನೆ ಕುರಿತು ಮುನಿರಾಬಾದ್ನ ಇಂದ್ರಭವನ ಅತಿಥಿ ಗೃಹದಲ್ಲಿ ಏರ್ಪಡಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮತ ಪಟ್ಟಿಗೆ ಹೆಸರು ನೋಂದಾಯಿಸಲು ಮತ್ತು ಆಕ್ಷೇಪಣೆ ಸಲ್ಲಿಸಲು ಡಿ. 6ರ ಕೊನೆ ದಿನವಾಗಿದೆ. ರಾಜಕೀಯ ಪಕ್ಷಗಳು ನೋಡಲ್ ಬೂತ್ಮಟ್ಟದ ಏಜೆಂಟರ್ ನೇಮಿಸಿ, ಅಂತವರಿಂದ ಪಟ್ಟಿ ಸಲ್ಲಿಸಬೇಕು ಎಂದು ಹೇಳಿದರು. ಸಹಾಯಕ ಆಯುಕ್ತ ಮಂಜುನಾಥ್ ಮಾತನಾಡಿದರು. ರಾಜಕೀಯ ಪಕ್ಷದ ಪ್ರತಿನಿಧಿಗಳು, ಜಿಲ್ಲೆಯ ಎಲ್ಲ ತಹಸೀಲ್ದಾರರು ಸಭೆಯಲ್ಲಿದ್ದರು.
ಕುರುಗೋಡು: ಅಂಗನವಾಡಿ ನೌಕರರ ಸಭೆ ಮುಕ್ತಾಯ
ಕುರುಗೋಡು: ಪಟ್ಟಣದ ಆಂಬೇಡ್ಕರ್ ಸಮುದಾಯ ಭವನದಲ್ಲಿ ಅಂಗನವಾಡಿ ನೌಕರರ ಕುರುಗೋಡು ವಲಯ ಸಮಿತಿ ಸಭೆ ಜರುಗಿತು.
ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಎಚ್.ಎಂ. ವಿಶ್ವನಾಥಸ್ವಾಮಿ ಮಾತನಾಡಿ, ರಾಜ್ಯದ ನಾನಾ ಇಲಾಖೆಗಳನ್ನು ಸರ್ಕಾರ ಖಾಸಗಿಕರಣ ಮಾಡುವ ಹುನ್ನಾರ ನಡೆಸಿದೆ ಎಂದು ಆರೋಪಿದರು. ಸರ್ಕಾರ ಈ ಮೊದಲು ನೌಕರರಿಗೆ ಘೋಷಿಸಿದ ಯೋಜನೆಗಳನ್ನು ಕೂಡಲೆ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಎಂ. ಅನ್ನಪೂರ್ಣ, ಗೀತಮ್ಮ, ವೇದಾಚಲಂ, ಶಾರದಮ್ಮ, ನಿರ್ಮಲಾ ಮಾತನಾಡಿದರು. ದೊಡ್ಡಬಸವೇಶ್ವರ ದೇವಸ್ಥಾನದ ಅವರಣದಿಂದ ಕಾಲ್ನಡಿಗೆ ಜಾಥಾ ನಡೆಸಿ ಅಂಬೇಡ್ಕರ್ ಭವನದಲ್ಲಿ ಸಮಾವೇಶಗೊಂಡರು.
ಬತ್ತ ಖರೀದಿ ಕೇಂದ್ರ ನಾಳೆ ಪ್ರಾರಂಭ: ಡಿಸಿ
ಕೊಪ್ಪಳ: ಬೆಂಬಲ ಬೆಲೆಯಲ್ಲಿ ಬತ್ತ ಖರೀದಿಸಲು ನಿರ್ಧರಿಸಿದ್ದು, ಡಿ. 2ರಿಂದ ಗಂಗಾವತಿ ಮತ್ತು ಕಾರಟಗಿ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆ ತೀರ್ಮಾನಿಸಿದೆ ಎಂದು ಡಿಸಿ ಕೆ.ಪಿ. ಮೋಹನ್ರಾಜ್ ತಿಳಿಸಿದ್ದಾರೆ. ಕೊಪ್ಪಳ ಡಿಸಿ ಕಚೇರಿಯಲ್ಲಿ ಜರುಗಿದ ಜಿಲ್ಲಾ ಟಾಸ್ಕ್ಫೋರ್ಸ್ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಜಿಲ್ಲೆಯಲ್ಲಿ ಮೆಕ್ಕೆಜೋಳ ಖರೀದಿಗೆ ರಾಜ್ಯ ಸಹಕಾರ ಮಾರಾಟ ಮಹಾಮಂಡಳ ಖರೀದಿ ಏಜೆನ್ಸಿಯಾಗಿದೆ. ಖರೀದಿಸಿದ ಬತ್ತದ ದಾಸ್ತಾನಿಗೆ ಗೋದಾಮು ವ್ಯವಸ್ಥೆ ಮಾಡಿಕೊಳ್ಳಬೇಕು ಎಂದು ಡಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಂಟಿ ಕೃಷಿ ನಿರ್ದೇಶಕ, ಅಧಿಕಾರಿಗಳು ಇದ್ದರು.
ಮಿಂಚೇರಿ ಕೆರೆಗೆ ನೀರು ಸರಬರಾಜು: ಮನವಿ
ಬಳ್ಳಾರಿ: ತಾಲೂಕಿನ ಮಿಂಚೇರಿ ಗ್ರಾಮದ ಕುಡಿವ ನೀರಿನ ಕೆರೆಗೆ ನೀರು ಸರಬರಾಜು ಮಾಡುವಂತೆ ಒತ್ತಾಯಿಸಿ, ಕರ್ನಾಟಕ ವಾಲ್ಮೀಕಿ ನಾಯಕ ಜಾಗ್ರತ ವೇದಿಕೆಯ ಕಾರ್ಯಕರ್ತರು ತಾಪಂ ಇಒ ಕೇಣಿಬಸಪ್ಪರಿಗೆ ಮನವಿ ಸಲ್ಲಿಸಿದರು. ಮಿಂಚೇರಿ ಗ್ರಾಮದಲ್ಲಿ ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣವಾಗಿರುವ ಕೆರೆ ಕಾಮಗಾರಿ ಮುಗಿದು ಮೂರು ವರ್ಷಗಳಾಗಿದ್ದರೂ ನೀರು ಮಾತ್ರ ಇನ್ನೂ ತುಂಬಲಾಗಿಲ್ಲ. ತಾ.ಪಂ. ಸಭೆಯಲ್ಲಿ ಪ್ರಸ್ತಾಪಿಸಿದ್ದರೂ ಪ್ರಯೋಜನವಾಗಿಲ್ಲ. ಕೂಡಲೇ ಕೆರೆಗೆ ನೀರನ್ನು ತುಂಬಿಸುವಂತೆ ಒತ್ತಾಯಿಸಿದ್ದಾರೆ. ಶಿವಣ್ಣ, ಬಿ.ಹುಲಿಗೇಶ, ಸುಂಕಣ್ಣ, ದಮಾಲೆಪ್ಪ, ಗಾದಿಲಿಂಗ, ರಾಜಣ್ಣ, ವೆಂಕಟೇಶ್, ಬಿ. ಶ್ರೀನಿವಾಸ, ಹನುಮಂತ, ರಾಮಾಂಜಿನಿ, ಸಂಗನಕಲ್ಲು ಹನುಮಂತ ಇತರರಿದ್ದರು.
ಆಯತಪ್ಪಿ ಬಿದ್ದು ಬೈಕ್ ಸವಾರ ಸಾವು
ಬಳ್ಳಾರಿ: ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಬೈಕ್ ಸವಾರನೋರ್ವ ಮೃತಪಟ್ಟಿರುವ ಘಟನೆ ಸಿರುಗುಪ್ಪ ತಾಲೂಕಿನ ಹಳೆಕೋಟೆ ಸಮೀಪದಲ್ಲಿ ನಡೆದಿದೆ. ಮೃತ ಸವಾರನನ್ನು ಸಿರುಗುಪ್ಪ ತಾಲೂಕಿನ ಸದಾಶಿವನಗರದ ರಾಮ್ಬಾಬು (36) ಎಂದು ಗುರುತಿಸಲಾಗಿದೆ. ಈತನು ಸಿರುಗುಪ್ಪ- ಬಳ್ಳಾರಿ ರಸ್ತೆಯಲ್ಲಿ ಹಳೆಕೋಟೆ ಸಮೀಪದಲ್ಲಿ ನವೆಂಬರ್ 28ರಂದು ಮೋಟರ್ ಬೈಕ್ನಲ್ಲಿ ತುಂಬಿದ ಸಿಲಿಂಡರ್ ಕಟ್ಟಿಕೊಂಡು ಬರುತ್ತಿರುವಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದು ಗಾಯಗೊಂಡಿದ್ದ. ಆತನನ್ನು ಚಿಕಿತ್ಸೆಗಾಗಿ ಸಿರುಗುಪ್ಪ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅನಂತರ ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿಲ್ಲ. ಬುಧವಾರ ರಾತ್ರಿ ರಾಮ್ಬಾಬು ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಈ ಕುರಿತಾಗಿ ತೆಕ್ಕಲಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾವರಗೇರಾದಲ್ಲಿ ಮಕ್ಕಳ ಹಕ್ಕುಗಳ ಗ್ರಾಮಸಭೆ
ತಾವರಗೇರಾ: ಇಲ್ಲಿಗೆ ಸಮೀಪದ ಸಾಸ್ವಿಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಮಕ್ಕಳ ಹಕ್ಕುಗಳ ಗ್ರಾಮ ಸಭೆ ಆಯೋಜಿಸಲಾಗಿತ್ತು. ಜುಮಲಾಪುರ ಗ್ರಾಪಂ ಅಧ್ಯಕ್ಷ ನಾಗಪ್ಪ ಕಾರಟಗಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ತಾಪಂ ಸದಸ್ಯ ಕೆಂಗಾಲಪ್ಪ ಕುರ್ನಾಳ ಜ್ಯೋತಿ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಯೂನಿಟೆಡ್ ಸಮುದಾಯ ಸಂಘಟಕ ಆದಪ್ಪ ಜಿ. ಪಾಟೀಲ, ಜುಮಲಾಪುರ ಸ.ಹಿ. ಪ್ರಾ. ಶಾಲೆ ಮುಖ್ಯಗುರು ಹಂಪಣ್ಣ ಮಾತನಾಡಿದರು. ನಾಗಪ್ಪ ಕಾರಟಗಿ, ದೇವಪ್ಪ ಮಡಿವಾಳ, ಹನುಮಂತ ಹರಿಜನ, ಶರಣಪ್ಪ ಪ್ರೇರಕರು, ಪ್ರಭುಲಿಂಗಯ್ಯ ಹಿರೇಮಠ ಸಾಸ್ವಿಹಾಳ, ಎಸ್.ಬಿ. ಪತಂಗಿ, ಅಂಗನವಾಡಿ ಕಾರ್ಯಕರ್ತೆಯರು, ಮಕ್ಕಳು ಇದ್ದರು.
ಬಳ್ಳಾರಿ: ಇಂದು ವಿಶ್ವ ಏಡ್ಸ್ ದಿನಾಚರಣೆ
ಬಳ್ಳಾರಿ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ನಿರ್ವಾಹಕ ಘಟಕಗಳ ಸಹಯೋಗದಲ್ಲಿ ಡಿ. 1ರಂದು ವಿಶ್ವ ಏಡ್ಸ್ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ದಿನಾಚರಣೆ ಅಂಗವಾಗಿ ಬೆಳಿಗ್ಗೆ 9.30ಕ್ಕೆ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ಜಾಗೃತಿ ಜಾಥಾ ಏರ್ಪಡಿಸಿದ್ದು, ಜಿಪಂ ಅಧ್ಯಕ್ಷೆ ಶೋಭಾ ಬೆಂಡಿಗೇರಿ ಉದ್ಘಾಟಿಸಲಿದ್ದಾರೆ. ಜಾಥಾದಲ್ಲಿ ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ್ ಚಿನಮಳ್ಳಿ, ಡಾ.ಪಂಪಾಪತಿ, ಡಾ. ವೆಂಕಟೇಶಮೂರ್ತಿ, ಡಾ. ನರಸಿಂಹಮೂರ್ತಿ ಪಾಲ್ಗೊಳ್ಳಲಿದ್ದಾರೆ. ನಂತರ ಕೊಂಡಯ್ಯ ನಗರದಲ್ಲಿ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಂ.ಕೆ. ಪಾಟೀಲ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳಲ್ಲಿ ಸಾಂಸ್ಕೃತಿಕ ಚಟುವಟಿಕೆ ಕುಂಠಿತ
ಗಂಗಾವತಿ: ಪ್ರಸ್ತುತ ವಿದ್ಯಾರ್ಥಿಗಳಲ್ಲಿ ಕಲೆ ಸಾಂಸ್ಕೃತಿಕ ಚಟುವಟಿಕೆಗಳು ಕುಂಠಿತಗೊಳ್ಳುತ್ತವೆ ಎಂದು ಸಂಸದ ಶಿವರಾಮಗೌಡ ವಿಷಾದ ವ್ಯಕ್ತಪಡಿಸಿದರು. ಸಮೀಪದ ಕೆಎಲ್ಇ ಶಿಕ್ಷಣ ಸಂಸ್ಥೆಯಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಏರ್ಪಡಿಸಿದ್ದ ಪದವಿಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ ಉದ್ಘಾಟಿಸಿ ಮಾತನಾಡಿದರು. ಪಠ್ಯದ ಜತೆ ಕಲೆ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿರುವದರಿಂದ ಶಿಕ್ಷಣದಲ್ಲಿ ಹೆಚ್ಚಿನ ರೀತಿಯಲ್ಲಿ ಮುಂದುವರಿಯಲು ಸಾಧ್ಯ ಎಂದರು. ಮಾಜಿ ಶಾಸಕ ಪರಣ್ಣ ಮುನವಳ್ಳಿ, ಉಪನಿರ್ದೇಶಕ ಶಿವಾನಂದ ಕಡಪಟ್ಟಿ, ಡಾ. ವಿ.ಬಿ. ರಡ್ಡೇರ್, ಎ.ಜಿ. ಶರಣಪ್ಪ, ಪ್ರೊ. ಶಿವಾನಂದ ಮೇಟಿ, ಎಸ್.ಆರ್. ಹಿರೇಗೌಡರ, ರಾಜು ಇನ್ನಿತರರು ಇದ್ದರು.
'ಅಕ್ಕ' ಕನ್ನಡ ಧಾರಾವಾಹಿಗೆ ಈಗ ಕೋರ್ಟಿನ ಕಡಿವಾಣ
ಇದೇ ಸೋಮವಾರ ಡಿಸೆಂಬರ್ ಎರಡರಿಂದ ರಾತ್ರಿ ಎಂಟೂವರೆಗೆ ಈಟೀವಿಯಲ್ಲಿ ಪ್ರಸಾರವಾಗಬೇಕಿದ್ದ ಅಕ್ಕ ಕನ್ನಡ ಧಾರಾವಾಹಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಖ್ಯಾತ ಲೇಖಕಿ ಹಾಗೂ ಕಿರುತೆರೆ ನಿರ್ಮಾಪಕಿ-ನಿರ್ದೇಶಕಿ ರೇಖಾರಾಣಿ ಅವರ ಕಣ್ಮಣಿ ಎಂಬ ಕತೆಯನ್ನು ಕದ್ದು ಅಕ್ಕ ಧಾರಾವಾಹಿ ನಿರ್ಮಿಸಲಾಗಿದೆ ಎಂದು ನೀಡಲಾಗಿದ್ದ ದೂರನ್ನು ಪರಿಶೀಲಿಸಿದ ಸಿವಿಲ್ಕೋರ್ಟ್ ನಂ.10ರ ನ್ಯಾಯಾಧೀಶರು ಶುಕ್ರವಾರ ಅಕ್ಕ ಧಾರಾವಾಹಿಗೆ ತಡೆಯಾಜ್ಞೆ ನೀಡಿದ್ದಾರೆ. ಮುಂದಿನ ವಿಚಾರಣೆ ನಡೆದು ವಿವಾದ ಇತ್ಯರ್ಥ ಆಗುವವರೆಗೆ ಧಾರಾವಾಹಿಯು ಪ್ರಸಾರವಾಗುವಂತಿಲ್ಲ ಎಂದು ಕೋರ್ಟು ಆದೇಶ ನೀಡಿದೆ. ಇದು ತಮ್ಮದೇ ಕತೆಯ ಕೃತಿಚೌರ್ಯ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದು ಹೇಳಿಕೆ ನೀಡಿರುವ ರೇಖಾ ರಾಣಿ ಇದಕ್ಕೆ ನೇರ ಕಾರಣ ಪ್ರಸ್ತುತ ಚಾನಲ್ನ ಧಾರಾವಾಹಿ ವಿಭಾಗದ ಮುಖ್ಯಸ್ಥರು ಎಂದು ಆರೋಪ ಹೊರಿಸಿದ್ದಾರೆ.
ಬ್ಯಾಂಕಾಕ್ನಲ್ಲಿ 'ನಿನ್ನಿಂದಲೇ' ಚಿತ್ರದ ಶೂಟಿಂಗ್ ಬ್ಯಾನ್
ಪುನೀತ್ ರಾಜ್ಕುಮಾರ್ ಅಭಿನಯದ 'ನಿನ್ನಿಂದಲೇ' ಚಿತ್ರದ ಶೂಟಿಂಗಿಗೆ ವಿಘ್ನ. ಆದರೆ ಹಾಗಂತ ಅದು ಶಾಶ್ವತ ವಿಘ್ನ ಅಲ್ಲ ಬಿಡಿ. ಅದೇನಿದ್ದರೂ ಕೇವಲ 'ಎಮರ್ಜೆನ್ಸಿ' ವಿಘ್ನ. ಬ್ಯಾಂಕಾಕ್ನಲ್ಲಿ ಚಿತ್ರದ ಚಿತ್ರೀಕರಣ ನಡೆಸಲು ನಿನ್ನಿಂದಲೇ ಚಿತ್ರತಂಡ ಯೋಜನೆ ಮಾಡಿತ್ತು. ಅದರಂತೆ ಶೂಟಿಂಗ್ ಕೂಡ ಎರಡು ದಿನದ ಹಿಂದೆ ಶುರುವಾಗಿತ್ತು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಬ್ಯಾಂಕಾಕ್ ನಗರದಲ್ಲಿ ರಾಜಕೀಯ ಕಾರಣಗಳಿಗಾಗಿ ತುರ್ತು ಪರಿಸ್ಥಿತಿ ಘೋಷಿಸಲಾಯಿತು. ಚಿತ್ರೀಕರಣಕ್ಕೆ ಯಾವ ತೊಂದರೆ ಇಲ್ಲದಿದ್ದರೂ ಸಾರ್ವಜನಿಕ ಸಭೆಗಳು, ಮೆರವಣಿಗೆಗಳ ಕಾರಣ ಚಿತ್ರೀಕರಣ ನಡೆಸುವುದು ಸುಲಭವಾಗಿರಲಿಲ್ಲ. ಈ ಕಾರಣಕ್ಕಾಗಿ ನಿನ್ನಿಂದಲೇ ಚಿತ್ರತಂಡ ಎರಡು ದಿನಗಳ ಕಾಲ ಶೂಟಿಂಗ್ ನಿಲ್ಲಿಸಬೇಕಾಗಿತ್ತು. ಅದರಂತೆ ಎರಡು ದಿನಗಳ ಬ್ರೇಕ್ನ ನಂತರ ಈಗ ಮತ್ತೆ ನಿನ್ನಿಂದಲೇ ಶುರುವಾಗಿದೆ.