ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬೀದಿನಾಯಿಗಳ ಕಾಟ: ಪಾಲಿಕೆ ಮೌನ

Vishwanath S
Updated On : 1 Dec 2013, 12:26 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 30
ಕಳ್ಳತನ, ದರೋಡೆ ಇಂತಹ ಸಂಗತಿಗಳಷ್ಟೆ ನಗರದ ಜನತೆಗೆ ಭಯಭೀತಿ, ನಡುಕ ಉಂಟು ಮಾಡುವುದಿಲ್ಲ. ಪ್ರಾಣಕ್ಕೆ ಕುತ್ತುಂಟು ಮಾಡುವ ಬೀದಿ ನಾಯಿಗಳ ಹಾವಳಿಯಿಂದಲೂ ಸಾರ್ವಜನಿಕರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.
ಹೌದು, ಸ್ಥಳೀಯ ಕುವೆಂಪು ನಗರ ಸೇರಿದಂತೆ ನಗರದ ವಿವಿಧೆಡೆಗಳಲ್ಲಿ ದಿನದಿಂದ ದಿನಕ್ಕೆ ಬೀದಿನಾಯಿಗಳ ಸಂಖ್ಯೆ ಹೆಚ್ಚುತ್ತಲೆ ಇದ್ದು, ಅವುಗಳ ಹಾವಳಿ ಮಿತಿಮೀರಿದೆ. ಹಗಲು, ರಾತ್ರಿ ಎನ್ನದೆ ಹಿಂಡು ಹಿಂಡು ನಾಯಿಗಳಿಂದಾಗಿ ಮಹಿಳೆಯರು, ಮಕ್ಕಳು ಹೊರಬರಲು ಹೆದರುತ್ತಿದ್ದಾರೆ.
ನಗರದ ಹೊರವಲಯದ ಕುವೆಂಪು ನಗರ ಬಡಾವಣೆಯಲ್ಲಿ ಪ್ರಾರಂಭದಲ್ಲಿ ಅಲ್ಪ ಪ್ರಮಾಣದಲ್ಲಿದ್ದ ಬೀದಿನಾಯಿಗಳು, ದಿನ ಕಳೆದಂತೆ ಅವುಗಳ ಸಂಖ್ಯೆ ಏರುಗತಿಯಲ್ಲಿ ಸಾಗಿದ್ದು, ದುಸ್ವಪ್ನವಾಗಿ ಕಾಡುತ್ತಿವೆ. ಹಾಗೆಯೇ ಅವುಗಳ ಉಪಟಳದಿಂದಾಗಿ ಮಹಿಳೆಯರಲ್ಲಿ ಭಯ ಹೆಚ್ಚಿದೆ. ಮನೆಗಳ ಹೊರಗೆ ಆಟವಾಡುವ ಮಕ್ಕಳಿಗೆ ಕಚ್ಚುತ್ತವೆ ಎನ್ನುವ ಭೀತಿ ಕಾಡುತ್ತಿದೆ. ಏನೂ ಅರಿಯದ ಮುಗ್ಧ ಮಕ್ಕಳು ಅಂಗಡಿಗಳಿಗೆಂದು ತೆರಳಿದಾಗ ಕೈಯಲ್ಲಿನ ವಸ್ತುಗಳನ್ನು ಗಮನಿಸುವ ನಾಯಿಗಳು ಅವನ್ನು ತಿನ್ನುವ ಆಸೆಯಿಂದ ಬೆನ್ನಟ್ಟಿ ಬಂದಾಗ ಮಕ್ಕಳು ಆತಂಕಗೊಂಡು ಓಡಲು ಶುರು ಮಾಡಿದ್ದೆ ತಡ ನಾಲ್ಕೈದು ನಾಯಿಗಳ ಗುಂಪು ಒಮ್ಮೆಲೆ ದಾಳಿ ನಡೆಸಿ, ಕಚ್ಚಿರುವ ಘಟನೆಗಳು ಹೆಚ್ಚಾಗಿ ಜರುಗುತ್ತಿವೆ.
ನಾಯಿಗಳು ಕಾದಾಡುವಾಗ ರಸ್ತೆ ಬದಿಯಲ್ಲಿ ನಾನಾ ಕೆಲಸ ಕಾರ್ಯಗಳ ನಿಮಿತ್ತ ಓಡಾಡುವ ಪಾದಚಾರಿಗಳ ಮೇಲೆರೆಗುವುದಂತು ಸತ್ಯ. ಇದರಿಂದಾಗಿ ನಿರಾತಂಕವಾಗಿ ರಸ್ತೆಗಳಲ್ಲಿ ತಿರುಗಾಡುವುದೆ ಜನತೆಗೆ ಕಷ್ಟವಾಗಿದೆ. ಇದರತ್ತ ಪಾಲಿಕೆ ಗಮನಿಸಬೇಕು ಎನ್ನುವುದು ಜನತೆಯ ಆಗ್ರಹ.
ವಾಹನ ಸವಾರರಿಗೂ ಭೀತಿ: ರಾತ್ರಿ ಸಮಯದಲ್ಲಿ ಬೀದಿ ನಾಯಿಗಳ ಕಾಟ ವಿಪರೀತ. ಬೀದಿಗಳಲ್ಲಿ ಮಲಗುವ ನಾಯಿಗಳು ಬೈಕ್‌ಗಳ ಸದ್ದು ಕೇಳಿದ ತಕ್ಷಣ ಎಚ್ಚರಗೊಂಡು ವಾಹನಗಳ ವೇಗಕ್ಕೆ ತಕ್ಕಂತೆ ಬೈಕ್‌ಗಳನ್ನು ಬೆನ್ನಟ್ಟುತ್ತವೆ. ಇದರಿಂದ ಬೈಕ್ ಸವಾರರು ಹೆದರುವಂತಾಗಿದೆ. ಅಲ್ಲದೆ ಮೈಮೇಲೆರಗಿ ಕಚ್ಚಿ ಗಾಯಗೊಳಿಸಿರುವ ಉದಾಹರಣೆಗಳು ನಗರದಲ್ಲಿ ಸಾಕಷ್ಟಿವೆ. ಇನ್ನು ಏನು ತಿಳಿಯದ ಅನ್ಯ ಊರಿನವರು ದ್ವಿಚಕ್ರ ವಾಹನಗಳಲ್ಲಿ ನಗರಕ್ಕೆ ಆಗಮಿಸಿದರೆ ಅವರ ಪಾಡು ಹೇಳತೀರದು. ಅವರನ್ನು ಆ ದೇವರೆ ಕಾಪಾಡಬೇಕು. ಅಂತಹ ಸ್ಥಿತಿ ನಗರದಲ್ಲಿ ನಿರ್ಮಾಣವಾಗಿದೆ. ರಾತ್ರಿ ಪಾಳೆಯದಲ್ಲಿ ಕೆಲಸಕ್ಕೆ ತೆರಳುವ ಅಥವಾ ಕೆಲಸ ಮುಗಿಸಿ ಮನೆಗೆ ಹಿಂದಿರುಗುವ ನೌಕರರು ಈ ಬೀದಿ ನಾಯಿಗಳಿಂದ ತೊಂದರೆ ಅನುಭವಿಸುವುದು ಶತಸಿದ್ಧ.
ಸಾಕು ನಾಯಿಗಳ ನಿರ್ಲಕ್ಷ್ಯ: ಕುವೆಂಪು ನಗರದ ಬಡಾವಣೆಗಳಲ್ಲಿ ಕೇವಲ ಬೀದಿನಾಯಿಗಳ ರಂಪಾಟ, ಉಪಟಳ ಅಷ್ಟೇ ಅಲ್ಲ. ಕೆಲವರು ತಮ್ಮ ಸಾಕು ನಾಯಿಗಳನ್ನು, ಬೀದಿಗೆ ಬಿಡುವುದರಿಂದ ನಾಯಿಗಳ ತೊಂದರೆ ಅಧಿಕವಾಗಿದೆ. ಮರಿ ಇರುವಾಗ ತಂದು ಅವುಗಳನ್ನು ಸಾಕುವ ಕೆಲವು ಮಾಲೀಕರು, ಸ್ವಲ್ಪ ದಿನಗಳ ನಂತರ ಅವುಗಳನ್ನು ಬೀದಿಗೆ ಬಿಟ್ಟು, ಪುನಃ ಹೊಸ ನಾಯಿ ಮರಿಯೊಂದನ್ನು ತಂದು ಸಾಕುವುದರಿಂದ ಅವುಗಳಿಗೆ ಸೂಕ್ತ ಆಹಾರ ದೊರೆಯದೆ ಹಸಿವಿನ ಕೋಪದಿಂದ ಉಪಟಳ ಹೆಚ್ಚಾಗುತ್ತಿದೆ. ಜತೆಗೆ ಸಾಕು ನಾಯಿಗಳನ್ನು ತಮ್ಮ ಅಧೀನದಲ್ಲಿರಿಸಿಕೊಳ್ಳದೆ ಬೀದಿಗೆ ಬಿಡುವುದು ಸಹ ಕೆಲ ನಾಯಿಗಳು ಮೈಮೇಲೆರಗಲು ಕಾರಣವಾಗಿದೆ ಎಂಬುದು ಸ್ಥಳೀಯ ಪ್ರಜ್ಞಾವಂತ ನಾಗರೀಕರ ಆರೋಪ.
ಕಣ್ಮುಚ್ಚಿ ಕುಳಿತ ಪಾಲಿಕೆ: ಕುವೆಂಪು ನಗರ ಮಾತ್ರವಲ್ಲದೇ ಬಳ್ಳಾರಿ ನಗರದ ಬಹುತೇಕ ಕಡೆ ಬೀದಿನಾಯಿಗಳ ಹಾವಳಿ ಮಿತಿ ಮೀರುತ್ತಿದೆ. ಆದರೆ ಪಾಲಿಕೆ ಮಾತ್ರ ತನಗೇನು ಸಂಬಂಧ ಇಲ್ಲದಂತೆ ಕಣ್ಮುಚ್ಚಿ ಕುಳಿತಿರುವುದು ಮಾತ್ರ ಖಂಡನೀಯ. ಅಧಿಕಗೊಳ್ಳುತ್ತಿರುವ ಬೀದಿನಾಯಿಗಳಿಗೆ ಕಡಿವಾಣ ಹಾಕಲು ಕನಿಷ್ಠ ಸಂತಾನ ಹರಣ ಶಸ್ತ್ರಚಿಕಿತ್ಸೆಯನ್ನಾದರು ಮಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಈ ಹಿಂದೆ ಸಂತಾನ ಹರಣ ಚಿಕಿತ್ಸೆಗೆ ಮುಂದಾಗಿತ್ತು, ಇದೀಗ ನಿಲ್ಲಿಸಲಾಗಿದೆ ಎಂಬುದು ಸ್ಥಳೀಯ ನಾಗರಿಕರ ಆಕ್ರೋಶ. ಇನ್ನಾದರು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಿ, ಪರಿಹರಿಸುವತ್ತ ಪಾಲಿಕೆ ದಿಟ್ಟ ಕ್ರಮಕೈಗೊಳ್ಳುವುದೇ ಎಂದು ನೋಡಬೇಕಿದೆ.



-ವೈ.ಎಂ. ಸಿದ್ಧಲಿಂಗಸ್ವಾಮಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement