ಸಂಭಾಜಿ ಪಾಟೀಲ್ ವಿರುದ್ಧ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 30
ಕರವೇ, ಕಸಾಪ, ಎಐಟಿಯುಸಿ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ನೀಡಿದ ಅವಹೇಳನಕಾರಿ ಖಂಡಿಸಿ ಪ್ರತಿಭಟನೆ ನಡೆಸಿದವು.
ಸಾಹಿತಿ ಶೇಷಗಿರಿರಾವ್ ಮಾತನಾಡಿ, ಮಹಾರಾಷ್ಟ್ರದಲ್ಲಿ ಮರಾಠಿ, ತಮಿಳುನಾಡಿನಲ್ಲಿ ತಮಿಳು ಭಾಷೆ ಆಧಾರದ ಮೇಲೆ ಚುನಾವಣೆಯಲ್ಲಿ ವ್ಯಕ್ತಿ ಆಯ್ಕೆ ಮಾಡುತ್ತಾರೆ. ಆಯ್ಕೆಯಾದ ವ್ಯಕ್ತಿಗಳು ಈ ರೀತಿ ಬಾಯಿಗೆ ಬಂದಂತೆ ಕನ್ನಡ ನಾಡಿನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವುದನ್ನು ಖಂಡಿಸಿದರು.
ಅನ್ಯ ರಾಜ್ಯಗಳಲ್ಲಿ ಭಾಷೆ ಮತ್ತು ರಾಜ್ಯದ ಪರ ಹೋರಾಟ ಮಾಡುವ ವ್ಯಕ್ತಿಗಳಿಗೆ ಮನ್ನಣೆ ನೀಡುತ್ತಿದೆ. ಆದರೆ ಕರ್ನಾಟಕದಲ್ಲಿ ಈವರೆಗೂ ಕನ್ನಡದ ಬಗ್ಗೆ ಅಭಿಮಾನ ಮೆರೆಯುವ ಹಾಗೂ ಕನ್ನಡದ ಬಗ್ಗೆ ನಿರಂತರ ಹೋರಾಟ ಮಾಡುವ ವ್ಯಕ್ತಿಗಳನ್ನು ಆಯ್ಕೆ ಮಾಡದಿರುವುದು ದುರಂತ ಎಂದರು.
ರಾಜ್ಯದಲ್ಲಿ ಎಂಇಎಸ್‌ನ್ನು ಬೇರು ಸಮೇತ ಕಿತ್ತು ಹಾಕಬೇಕು, ಈ ನಾಡಿನ ನೆಲ, ಜಲ, ಅನ್ನ ತಿಂದು ಗಂಡು ಮೆಟ್ಟಿನ ನಾಡು ಬೆಳಗಾವಿಯನ್ನು ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಲು ಹೋರಾಟ ಮಾಡುವ ವ್ಯಕ್ತಿಗಳನ್ನು ಕನ್ನಡಿಗರು ಚುನಾವಣೆಯಲ್ಲಿ ಆಯ್ಕೆ ಮಾಡಿರುವುದು ಸರಿಯಲ್ಲ. ಮುಂದಿನ ದಿನಗಳಲ್ಲಿ ಇಂತಹ ವ್ಯಕ್ತಿಗಳ ಠೇವಣಿ ಕಳೆದುಕೊಳ್ಳುವಂತೆ ಮಾಡಬೇಕೆಂದರು.
ಕರವೇ ಅಧ್ಯಕ್ಷ ಜಗದೀಶ ಮಾತನಾಡಿ, ಎಂಇಎಸ್ ಶಾಸಕ ಸಂಭಾಜಿ ಪಾಟೀಲ್ ಉಡಾಫೆ, ಉದ್ಧಟತನದ ಹೇಳಿಕೆಗಳನ್ನು ನಿಲ್ಲಿಸಬೇಕು. ಕನ್ನಡಿಗರ ತಾಳ್ಮೆ ಪರೀಕ್ಷೆ ಮಾಡುವ ಸಂಭಾಜಿ ಪಾಟೀಲ್‌ನನ್ನು ಜೀವಂತವಾಗಿ ಸುಟ್ಟು ಹಾಕಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು.
ಸುಟ್ಟು ಹಾಕಿ: ಕಸಾಪ ಅಧ್ಯಕ್ಷ ಸುರೇಶ ಅಂಗಡಿ ಮಾತನಾಡಿ, ಪ್ರತಿ ಬಾರಿ ಬೆಳಗಾವಿಯಲ್ಲಿ ಎಂಇಎಸ್ ಕಾರ್ಯಕರ್ತರು ಕನ್ನಡಿಗರ ಸ್ವಾಭಿಮಾನ ಮತ್ತು ಭಾವನೆಗಳಿಗೆ ಧಕ್ಕೆ ತರುವ ಹೇಳಿಕೆ ನೀಡಿದರೆ ಈ ನಾಡಿನ ಜನತೆ ಇವರಿಗೆ ಧರ್ಮದೇಟು ನೀಡಿ ರಾಜ್ಯದಿಂದ ಹೊರ ಹಾಕುವ ಮೊದಲು ತಾನೆ ಎಚ್ಚರದಿಂದ ಇದ್ದರೆ ಒಳಿತು ಎಂದರು.
ನಾಗರಾಜ ಮಲ್ಕಿಒಡೆಯರ್, ಕಸಾಪ ಹಿರೇಹಡಗಲಿ ಹೋಬಳಿ ಅಧ್ಯಕ್ಷ ಶ್ರೀಪಾದ ಒಡೆಯರ್, ಖಾಜಹುಸೇನ್, ಕೆ. ಬಸವರಾಜ, ಪುತ್ರೇಶ, ಚಂದ್ರಶೇಖರ ಶಾಸ್ತ್ರಿ, ಮತ್ತಿಹಳ್ಳಿ ಬಸವರಾಜ, ಸುನಂದಾ, ಮಂಜುಳಾ, ರೇಣುಕಾ, ಶಿವಕುಮಾರ ಸೇರಿದಂತೆ ನೂರಾರು ಕನ್ನಡ ಅಭಿಮಾನಿ ಬಳಗದವರು ಭಾಗವಹಿಸಿದ್ದರು.
ಇದಕ್ಕೂ ಮುನ್ನ ಪಟ್ಟಣದ ಮುಖ್ಯ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿದರು. ಸಂಭಾಜಿ ಪಾಟೀಲ್ ಪ್ರತಿಕೃತಿ ದಹಿಸಿದರು.