ಕೊಪ್ಪಳ: ಹೆದ್ದಾರಿಗೆ ಮತ್ತೊಂದು ಕರಡಿ ಬಲಿ
ಕೊಪ್ಪಳ: ಇತ್ತೀಚೆಗೆ ನಿರ್ಮಿಸಿರುವ ಸುವರ್ಣ ಚತುಷ್ಪಥ ರಾಷ್ಟ್ರೀಯ ಹೆದ್ದಾರಿ 13ಕ್ಕೆ ಮತ್ತೊಂದು ಕರಡಿ ಬಲಿಯಾಗಿದೆ. ಇದು ಹೆದ್ದಾರಿಯಲ್ಲಿ ರಸ್ತೆ ಅಪಘಾತಕ್ಕೆ ಸಿಲುಕಿ ಸಾಯುತ್ತಿರುವ ನಾಲ್ಕನೇ ಕರಡಿಯಾಗಿದೆ.
ಕೊಪ್ಪಳ ತಾಲೂಕಿನ ಮೆತಗಲ್ ಗ್ರಾಮದ ಬಳಿ ಮಂಗಳವಾರ ಬೆಳಗಿನಜಾವ ಅಪರಿಚಿತ ವಾಹನ ಹಾಯ್ದ ಪರಿಣಾಮ ರಸ್ತೆ ದಾಟುತ್ತಿದ್ದ ನಾಲ್ಕು ವರ್ಷದ ಹೆಣ್ಣು ಕರಡಿ ಮೃತಪಟ್ಟಿದೆ. ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಗೆ ಯಾರೋ ವಿಷಯ ತಿಳಿಸಿದ ತಕ್ಷಣ ಸ್ಥಳಕ್ಕೆ ಅಧಿಕಾರಿಗಳು ಧಾವಿಸಿದ್ದಾರೆ. ಆದರೆ, ಆ ವೇಳೆಗಾಗಲೇ ಕರಡಿ ಮೃತಪಟ್ಟಿತ್ತು. ಕರಡಿಯ ಅಂತಿಮ ಸಂಸ್ಕಾರವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ನೆರವೇರಿಸಿದ್ದಾರೆ.