ಗುಂಡಿನ ಶಬ್ದ ಕೇಳಿದ ಕಳ್ಳರು ಪರಾರಿ
ಬಳ್ಳಾರಿ: ಇಲ್ಲಿನ ರೇಣುಕಾ ನಗರದ ಮನೆಯೊಂದಕ್ಕೆ ಕಳ್ಳತನ ಮಾಡಲು ಮನೆಗೆ ನುಗ್ಗಿದ ಡಕಾಯಿತ ತಂಡವೊಂದರ ಮೇಲೆ ಮನೆಯ ಮಾಲೀಕರು ಗುಂಡು ಹಾರಿಸಿದ್ದರಿಂದ ಕಳ್ಳರು ಪರಾರಿಯಾಗಿರುವ ಘಟನೆ ಮಂಗಳವಾರ ಬೆಳಗಿನ ಜಾವ ನಡೆದಿದೆ.
ಟಪಾಲ್ ಅಶ್ವಿನ್ ಎನ್ನುವವರ ಮನೆಗೆ ನುಗ್ಗಿದ ಏಳು ಡಕಾಯಿತರ ತಂಡ ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡುವುದಾಗಿ ಎಚ್ಚರಿಸಿದ್ದಾರೆ. ನಂತರ ಬಾಗಿಲಿನ ಚಿಲಕ ಮುರಿದು ಒಳ ನುಗ್ಗಿದ ಕಳ್ಳರು ಬೆಡ್ರೂಂನಲ್ಲಿ ಮಲಗ್ಗಿದ್ದ ಅಶ್ವಿನ್ ಅವರನ್ನು ನೋಡಿ, ಒಳನುಗ್ಗಲು ಮುಂದಾಗಿದ್ದಾರೆ. ಕೂಡಲೇ ಎಚ್ಚೆತ್ತ ಅಶ್ವಿನ್ ರಿವಾಲ್ವರ್ನಿಂದ ಗುಂಡು ಹಾರಿಸಿದ್ದಾರೆ. ಗುಂಡಿನ ಸದ್ದು ಕೇಳಿದಾಕ್ಷಣ ಕಳ್ಳರು ಪರಾರಿಯಾಗಿದ್ದಾರೆ. ಘಟನೆಯಲ್ಲಿ ಯಾವುದೇ ಹಾನಿಯಾಗಿಲ್ಲ.
ಡಕಾಯಿತಿ ಮಾಡಲು ಬಂದ ಕಳ್ಳರು ನಿಕ್ಕರ್ ಧರಿಸಿದ್ದು, ಮುಖ ಕಾಣದಂತೆ ಬಟ್ಟೆ, ಮಂಕಿಕ್ಯಾಪ್ ಹಾಕಿದ್ದರು. ಎಲ್ಲರೂ ತೆಲುಗು ಭಾಷೆಯಲ್ಲಿ ಮಾತನಾಡುತ್ತಿದ್ದರೆಂದು ತಿಳಿದುಬಂದಿದೆ. ವಿಷಯ ತಿಳಿದ ಡಿವೈಎಸ್ಪಿ ಮುರುಗಣ್ಣನವರ್, ಪಿಎಸ್ಐ ಚಂದನ್ ಗೋಪಾಲ್, ಬ್ರೂಸ್ಪೇಟೆ ಇನ್ಸ್ಪೆಕ್ಟರ್ ಮಹಾಂತೇಶ್ ಕೋನಬೇವು ಸೇರಿದಂತೆ ಸಿಬ್ಬಂದಿ ಭೇಟಿ ಮಾಡಿ, ಸ್ಥಳ ಪರಿಶೀಲನೆ ನಡೆಸಿದ್ದಾರೆ. ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.