ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಬಳ್ಳಾರಿ ಹುಡುಗ ಪ.ಬಂಗಾಳ ಡಿಜಿ

Vishwanath S
Updated On : 2 Oct 2013, 10:50 am

ಬಳ್ಳಾರಿ: ಗಣಿನಾಡು, ಬಿಸಿಲನಾಡು, ಹಿಂದುಳಿದ ಜಿಲ್ಲೆ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದರೂ ಬಳ್ಳಾರಿಯ ಪ್ರತಿಭೆಯೊಂದು ಹೊರ ರಾಜ್ಯದಲ್ಲಿ ಮಿಂಚಿದಂತಾಗಿದೆ. ಪಶ್ಚಿಮ ಬಂಗಾಳದ ಪೊಲೀಸ್ ಮಹಾನಿರ್ದೇಶಕರಾಗಿ ಬಳ್ಳಾರಿಯ ಜೆ.ಎಂ.ಪಿ. ರೆಡ್ಡಿ ಸೋಮವಾರ ಅಧಿಕಾರ ಸ್ವೀಕರಿಸುವ ಮೂಲಕ ರಾಜ್ಯದ ಓರ್ವ ಐಪಿಎಸ್ ಅಧಿಕಾರಿ ಹೊರ ರಾಜ್ಯದಲ್ಲಿ ಉನ್ನತ ಸ್ಥಾನ ಅಲಂಕರಿಸಿದಂತಾಗಿದೆ.
ಇದು ಇಡೀ ಬಳ್ಳಾರಿ ಏಕೆ, ರಾಜ್ಯಕ್ಕೆ ಹೆಮ್ಮೆ ಸಂಗತಿಯಾಗಿದೆ. ಕೇವಲ ಗಣಿಯ ಅಕ್ರಮಕ್ಕೆ ಹೆಸರು ಗಳಿಸಿದ್ದ ಬಳ್ಳಾರಿಗೆ ಇದು ಹೆಗ್ಗಳಿಕೆಯೇ ಸರಿ. ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮದ ಜೆ.ಎಂ. ಪ್ರಭುರಾಜಶೇಖರ ರೆಡ್ಡಿ ಅವರು (ಜಿ.ಎಂ.ಪಿ. ರೆಡ್ಡಿ) 1982ರಲ್ಲಿ ಐಪಿಎಸ್‌ಗೆ ಆಯ್ಕೆಯಾಗಿದ್ದು, ಪಶ್ಚಿಮ ಬಂಗಾಳ ರಾಜ್ಯದ ಸೇವೆಗೆ ನೇಮಕಗೊಂಡಿದ್ದರು. ಅಲ್ಲಿಯೇ ತಮ್ಮ ಸೇವೆ ಆರಂಭಿಸಿದ ಅವರು, ಎಸ್ಪಿ, ಐಜಿ, ಡಿಐಜಿಯಾಗಿ ಸೇವೆ ಸಲ್ಲಿಸಿ ಪದೋನ್ನತಿ ಹೊಂದಿ, ಸೋಮವಾರ ಡಿಜಿಪಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ.
ಹಳ್ಳಿ ಹುಡುಗ ಡಿಜಿವರೆಗೆ: ಬಳ್ಳಾರಿ ತಾಲೂಕಿನ ಗೋಟೂರು ಗ್ರಾಮದ ರೈತರಾದ ದಿ. ಗೋಟೂರು ಸೀತಾರಾಮರೆಡ್ಡಿ ಅವರ ಹಿರಿಯ ಪುತ್ರರಾಗಿರುವ ಜೆಎಂಪಿ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಗೋಟೂರು ಕಿರಿಯ ಪ್ರಾಥಮಿಕ ಶಾಲೆ ಮತ್ತು ಬಳ್ಳಾರಿ ಮದಕರಿ ಭೀಮಯ್ಯ ಶಾಲೆಯಲ್ಲಿ ಮುಗಿಸಿ, ಬಳ್ಳಾರಿಯ ವಾರ್ಡ್ಲಾ ಶಾಲೆಯಲ್ಲಿ ಪ್ರೌಢಶಿಕ್ಷಣ, ವೀರಶೈವ ಕಾಲೇಜಿನಲ್ಲಿ ಕಾಲೇಜು ಶಿಕ್ಷಣ ಮುಗಿಸಿದರು. 1982ರಲ್ಲಿ ಐಪಿಎಸ್ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಪೊಲೀಸ್ ಅಧಿಕಾರಿಯಾಗಿದ್ದರು.
ಕರ್ನಾಟಕದಲ್ಲಿ ಸಿಬಿಐ ಎಸ್ಪಿ: ಗೂರ್ಖಾಲ್ಯಾಂಡ್ ಚಳವಳಿ ಸಮಯದಲ್ಲಿ ಡಾರ್ಜಲಿಂಗ್ ಜಿಲ್ಲಾ ಎಸ್ಪಿಯಾಗಿ ಕಾರ್ಯನಿರ್ವಹಿಸಿದ ಅವರು, ಕರ್ನಾಟಕ ರಾಜ್ಯದ ಸಿಬಿಐ ಎಸ್ಪಿ ಮತ್ತು ಡಿಐಜಿಯಾಗಿ 1990ರಿಂದ 2000ರ ವರೆಗೆ ಹತ್ತು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ. ದಿ. ರಾಜೀವ್ ಗಾಂಧಿ ಹತ್ಯೆ ಪ್ರಕರಣ, ಬ್ಯಾಂಕ್ ಸೆಕ್ಯೂರಿಟೀಸ್ ಹಗರಣ, ಫೇರ್‌ಗ್ರೋತ್ ಪ್ರಕರಣ, ಇಂಡಿಯನ್ ಬ್ಯಾಂಕ್ ಹಗರಣಗಳ ತನಿಖೆಯಲ್ಲಿ ಜೆ.ಎಂ.ಪಿ. ರೆಡ್ಡಿ ಅಧಿಕಾರಿಯಾಗಿದ್ದರು. ಹಾಂಕಾಂಗ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣದಲ್ಲಿ ಭಾರತ ದೇಶವನ್ನು ಪ್ರತಿನಿಧಿಸಿ, ಹವಾಲಾ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲುವ ಮಹತ್ವ ವಿಷಯವನ್ನು ಮಂಡಿಸಿ, ಗಮನ ಸೆಳೆದಿದ್ದಾರೆ. ಈ ಮೂಲಕ ಅವರು ಬಳ್ಳಾರಿಗೆ ಹೆಸರು ತಂದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement