ರಾಜಕಾರಣ ಬೇಡೆವೆಂದಿದ್ದ ಗಾಂಧೀಜಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 2
ರಾಜಕಾರಣ ನನಗೆಂದು ಬೇಡ. ಸತ್ಯ, ಶಾಂತಿ, ಅಹಿಂಸೆ, ಸಹಬಾಳ್ವೆ ಮಾತ್ರ ಬೇಕು ಎನ್ನುವುದು ಗಾಂಧೀಜಿಯವರ ಮನೋಇಚ್ಛೆಯಾಗಿತ್ತು ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಕೆ. ನಾರಾಯಣ ಭಟ್ ಹೇಳಿದರು.
ನಗರದ ರೋಟರಿ ಕ್ಲಬ್ ಆವರಣದಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣ ಸರ್ವೋದಯ ಟ್ರಸ್ಟ್, ರೋಟರಿ ಮತ್ತು ಇನರ್‌ವೀಲ್ ಕ್ಲಬ್‌ಗಳು ಬುಧವಾರ ಹಮ್ಮಿಕೊಂಡಿದ್ದ ಗಾಂಧೀಜಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರಿ ಅವರ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿಶ್ವಕ್ಕೆ ಶಾಂತಿ, ಅಹಿಂಸೆ ಬೋಧಿಸಿದ ಗಾಂಧೀಜಿಯವರ ಸಂದೇಶವಿಂದು ಕೇವಲ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ. ಇಡೀ ವಿಶ್ವಕ್ಕೆ ಮಾದರಿಯಾಗಿದೆ. ವೇದಾಂತ ಮತ್ತು ವಿಜ್ಞಾನ ಎರಡು ಸೇರಿದರೆ ಮಾತ್ರ ಮಾನವ ಜನಾಂಗದ ಅಭ್ಯುದಯವಾಗುತ್ತದೆ. ಯುವ ಪೀಳಿಗೆ ಮಹಾತ್ಮರ ಧ್ಯೇಯ ಉದ್ದೇಶಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದರು.
ಕೊಪ್ಪಳದ ಕಿರ್ಲೋಸ್ಕರ್ ಫೆರೋಸ್ ಇಂಡಸ್ಟ್ರೀಸ್‌ನ ಆರ್.ವಿ. ಗುಮಾಸ್ತೆ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು. ಜೆಎಸ್‌ಡಬ್ಲ್ಯು ಸ್ಟೀಲ್ಸ್ ಲಿ.ನ ಸಹ ಉಪಾಧ್ಯಕ್ಷ ಆಂಜನೇಯಲು ಶೆಟ್ಟಿ ಮಾತನಾಡಿದರು. ರೋಟರಿ ಕ್ಲಬ್ ಅಧ್ಯಕ್ಷ ಎಚ್. ಶ್ರೀನಿವಾಸ ರಾವ್ ಅಧ್ಯಕ್ಷತೆ ವಹಿಸಿದ್ದರು, ಇನ್ನರ್ ವೀಲ್ ಅಧ್ಯಕ್ಷೆ ಡಾ. ಮಾಧವಿ, ಕಾರ್ಯದರ್ಶಿ ಮೇಘನಾ, ಆರ್. ಗೋಪಿನಾಥ್, ಬಿಇಒ ಪಿ. ಸುನಂದಾ ಭಾಗವಹಿಸಿದ್ದರು.
ನಿವೃತ್ತ ಪ್ರಾಚಾರ್ಯ ಯು. ರಾಘವೇಂದ್ರರಾವ್ ಸ್ವಾಗತಿಸಿದರು. ಸೈಯದ್ ಮಹಮದ್ ವಂದಿಸಿದರು. ಸುಪ್ರಿಯಾ ನಿರೂಪಿಸಿದರು. ಕಾರ್ಯಕ್ರಮದ ನಂತರ ಶ್ರೀನಿವಾಸ ತಂತ್ರಿ ಮತ್ತು ಸಂಗಡಿಗರಿಂದ ಭಜನೆ ನಡೆಯಿತು.