ಶಾಸ್ತ್ರಿ ವಾಣಿಜ್ಯ ಸಂಕೀರ್ಣಕ್ಕೆ ಸಿಕ್ಕಿತು ಸ್ವಚ್ಛತೆ ಭಾಗ್ಯ
ಬಳ್ಳಾರಿ: ನಗರದ ಮೋತಿ ಸರ್ಕಲ್ ಸಮೀಪದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಲಾಲ ಬಹದ್ದೂರ್ ಶಾಸ್ತ್ರಿ ವಾಣಿಜ್ಯ ಸಂಕೀರ್ಣ ಸ್ಥಿತಿಗತಿ ಹಾಗೂ ಸ್ವಚ್ಛತೆ ಕುರಿತು ಬುಡಾ ಆಯುಕ್ತ ಚಂದ್ರಶೇಖರ್ ಹಾಗೂ ಎಇಇ ರವಿಶಂಕರ್ ಭೇಟಿ ನೀಡಿ, ಪರಿಶೀಲನೆ ನಡೆಸಿ, ಸಂಕೀರ್ಣ ಸ್ವಚ್ಛತೆಗೆ ಮುಂದಾಗಿದ್ದಾರೆ. ಇನ್ನು ಸಂಕೀರ್ಣದ ಭೀಮ್ ಬಿರುಕು ಬಿಟ್ಟಿರುವ ಬಗ್ಗೆ ಪ್ರಾಧಿಕಾರದ ಸಭೆಯಲ್ಲಿ ಚರ್ಚಿಸಿ, ನಿರ್ಧಾರಕ್ಕೆ ಬರಲು ತೀರ್ಮಾನಿಸಿದ್ದಾರೆ.
ಈ ಸಂಕೀರ್ಣದ ಕುರಿತು ಸೆ. 29ರಂದು 'ಕನ್ನಡಪ್ರಭ' 'ಕುಸಿಯುವ ಹಂತದಲ್ಲಿ ವಾಣಿಜ್ಯ ಸಂಕೀರ್ಣ' ಎಂಬ ಶೀರ್ಷಿಕೆಯಡಿ ಸಂಕೀರ್ಣ ಎದುರಿಸುತ್ತಿರುವ ಸಮಸ್ಯೆ ಹಾಗೂ ಭೀಮ್ ಬಿರುಕು ಬಿಟ್ಟಿರುವುದು ಹಾಗೂ ಸ್ವಚ್ಛತೆಯ ಕೊರತೆ ಬಗ್ಗೆ ವಿಸೃತ ವರದಿ ಪ್ರಕಟಿಸಿತ್ತು. ಈ ಕುರಿತು ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ನಡೆಯಬಹುದಾದಿ ಅನಾಹುತ ತಪ್ಪಿಸಲು ಮುಂದಾಗಬೇಕೆಂದು ಪತ್ರಿಕೆ ತಿಳಿಸಿತ್ತು.
'ಕನ್ನಡಪ್ರಭ' ವರದಿಗೆ ಕೂಡಲೇ ಸ್ಪಂದಿಸಿದ ಬುಡಾ ಆಯುಕ್ತ ಚಂದ್ರಶೇಖರ್, ಎಇಇ ರವಿಶಂಕರ್ ಅವರೊಂದಿಗೆ ವಾಣಿಜ್ಯ ಸಂಕೀರ್ಣಕ್ಕೆ ಭೇಟಿ ನೀಡಿ, ಸ್ವಚ್ಛತೆಯ ಕೊರತೆ ಹಾಗೂ ಮೇಲ್ಛಾವಣಿ ಸಿಮೆಂಟ್ ಉದುರಿ ಬೀಳುತ್ತಿರುವುದು, ಭೀಮ್ ಬಿರುಕು ಬಿಟ್ಟಿರುವ ಬಗ್ಗೆ ಪರಿಶೀಲನೆ ನಡೆಸಿದರು. ಬುಡಾ ವತಿಯಿಂದ ಸಂಕೀರ್ಣದಲ್ಲಿರುವ ಬಿದ್ದಿರುವ ಕಸವನ್ನು ಸ್ವಚ್ಛಗೊಳಿಸಿದರು.
ಬುಡಾ ಆಯುಕ್ತ ಚಂದ್ರಶೇಖರ್ 'ಕನ್ನಡಪ್ರಭ'ದೊಂದಿಗೆ ಮಾತನಾಡಿ, ಸಂಕೀರ್ಣವನ್ನು ಪರಿಶೀಲಿಸಿ ಬುಡಾ ವತಿಯಿಂದ ಸಂಕೀರ್ಣದಲ್ಲಿ ಸ್ವಚ್ಛತೆ ಮಾಡಲಾಗಿದೆ. ಭೀಮ್ ಬಿರುಕು ಬಿಟ್ಟಿರುವ ಕುರಿತು ಸಭೆಯಲ್ಲಿ ಚರ್ಚಿಸಿ, ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಸಂಕೀರ್ಣದ ಮಳಿಗೆಗಳನ್ನು ಮಾರಾಟ ಮಾಡಿರುವುದರಿಂದ ಮಳಿಗೆ ಮಾಲೀಕರು ತಮ್ಮ ಮಳಿಗೆ ಮುಂದೆ, ಸುತ್ತಮುತ್ತ ಸ್ವಚ್ಛತೆ ಕಾಯ್ದುಕೊಳ್ಳಬೇಕಿದೆ ಎಂದು ತಿಳಿಸಿದರು.