ಶ್ರಮದಾನ ಮಾಡಿ ಗಾಂಧಿ ಜಯಂತಿ ಆಚರಣೆ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಅ. 2
ಗಾಂಧಿ ಜಯಂತಿಯಂದು ಎಲ್ಲ ಸರ್ಕಾರಿ ನೌಕರರು ರಜೆ ಸಿಕ್ಕಿತು ಎಂದು ಖುಷಿ ಪಟ್ಟು ಕುಟುಂಬ ಪರಿವಾರದೊಂದಿಗೆ ರಜೆಯ ಮಜಾ ಕಳೆಯುತ್ತಾರೆ. ಆದರೆ ಇಲ್ಲಿ ಸರ್ಕಾರಿ ನೌಕರರು ಮಾದರಿ ಕಾರ್ಯದಲ್ಲಿ ತೊಡಗಿಕೊಂಡು ಧನ್ಯತಾಭಾವ ಅನುಭವಿಸಿದರು.
ತಮ್ಮ ಕಚೇರಿ ಆವರಣದಲ್ಲಿ ಶ್ರಮದಾನ ಮಾಡುವ ಮೂಲಕ ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಣೆ ಮಾಡಿದ್ದಾರೆ ಇಲ್ಲಿನ ಮಿನಿ ವಿಧಾನಸೌಧದಲ್ಲಿನ ಕಂದಾಯ, ಭೂ ಮಾಪಕರು, ಪಹಣಿ ವಿತರಣೆ ವಿಭಾಗ, ಅಬಕಾರಿ, ಉಪ ನೋಂದಣಿ ಕಚೇರಿ, ತಾಲೂಕು ಖಜಾನೆ, ವಿವಿಧ ಇಲಾಖೆಗಳ ನೌಕರರು.
ನಿತ್ಯ ಸಾವಿರಾರು ಸಾರ್ವಜನಿಕರು ಬಂದು ಹೋಗುವ ಈ ಕಚೇರಿಯ ಸ್ವಚ್ಛತೆಗೆ ಸಾರ್ವಜನಿಕರು ಸ್ಪಂದಿಸುತ್ತಿಲ್ಲ. ರಾಜ್ಯದ 2ನೇ ಅತಿ ದೊಡ್ಡ ಕಂದಾಯ ಇಲಾಖೆ ಕಟ್ಟಡವೆಂಬ ಹೆಗ್ಗಳಿಕೆ ಹೊಂದಿರುವ ಈ ಕಟ್ಟಡದ ಮೂಲೆ ಮೂಲೆಗಳಲ್ಲಿ ತಂಬಾಕು, ಗುಟ್ಕಾ, ಅಡಕೆ, ಎಲೆ ಜಗಿದು ಉಗುಳಿ ಹೊಲಸು ಮಾಡಿದ್ದಾರೆ.
ಗುಟ್ಕಾ ಚೀಟಿ, ಅಡಕೆ ಚೀಟಿ ಸೇರಿದಂತೆ ನಾನಾ ಪ್ಲಾಸ್ಟಿಕ್ಗಳನ್ನು ಎಲ್ಲೆಂದರಲ್ಲಿ ಬಿಸಾಡಿ ಹೋಗುವ ಜನರು, ಸ್ವಚ್ಛತೆ ಕಡೆಗೆ ಗಮನಹರಿಸದ ಕಾರಣ ಕಚೇರಿ ಆವರಣದ ಸುತ್ತಲೂ ಪ್ಲಾಸ್ಟಿಕ್ ಮಯಾವಾಗಿತ್ತು. ಹೀಗಾಗಿ ನೌಕರರು ಶ್ರಮದಾನದ ಮೂಲಕ ಸ್ವಚ್ಛತೆ ಕೈಗೊಂಡರು.
ಗಾಂಧಿ ಜಯಂತಿಯನ್ನು ವಿಶಿಷ್ಟವಾಗಿ ಆಚರಣೆ ಮಾಡಲು ಕ್ರಮ ಕೈಗೊಂಡಿರುವ ತಹಸೀಲ್ದಾರ್ ಎ.ಬಿ. ವಿಜಯಕುಮಾರ ಹಾಗೂ ಅವರ ಸಿಬ್ಬಂದಿ ತಮ್ಮ ಕಚೇರಿ ಆವರಣವನ್ನು ಶ್ರಮದಾನ ಮಾಡುವ ಮೂಲಕ ಸಂಪೂರ್ಣ ಸ್ವಚ್ಛಗೊಳಿಸಿದ್ದಾರೆ.
ಈ ಕುರಿತು ತಹಸೀಲ್ದಾರ್ ವಿಜಯಕುಮಾರ ಮಾತನಾಡಿ, ಸರ್ಕಾರಿ ನೌಕರರು ಶ್ರಮದಾನದ ಮಹತ್ವ ಅರಿಯಬೇಕು. ಈ ಹಿಂದೆ ತಾವು ಕೆಲಸ ಮಾಡುತ್ತಿದ್ದ ತಿಪಟೂರುನಲ್ಲಿ ತಾಲೂಕಿನ ಪೊಲೀಸ್ ಸಿಬ್ಬಂದಿ ಹಾಗೂ ಇತರೆ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಕೆರೆಯೊಂದನ್ನು ಸಂಪೂರ್ಣ ಸ್ವಚ್ಛಗೊಳಿಸಿದ್ದೆವು. ನಮ್ಮ ಕಚೇರಿ ಸುತ್ತಲೂ ಬೆಳೆದಿದ್ದ ಕಸವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದ್ದೇವೆ. ಇದಕ್ಕೆ ಹೆಚ್ಚಿನ ಮಹತ್ವ ನೀಡುವುದು ಬೇಡ, ನಮ್ಮ ಕೆಲಸ ನಾವು ಮಾಡಿಕೊಂಡಿದ್ದೇವೆಂದು ಹೇಳಿದರು.
ಒಟ್ಟಾರೆ ಕಂದಾಯ ಇಲಾಖೆ ಸಿಬ್ಬಂದಿ ತಮ್ಮ ಕಚೇರಿಯನ್ನು ಶ್ರಮದಾನದ ಮೂಲಕ ಸ್ವಚ್ಛತೆ ಮಾಡಿಕೊಂಡು ತಾಲೂಕಿನ ಇತರೆ ಇಲಾಖೆ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾದರಿಯಾಗಿದ್ದು, ಮೆಚ್ಚುಗೆಗೆ ಪಾತ್ರವಾಗಿದ್ದಾರೆ.