ಶ್ರೀಕೃಷ್ಣದೇವರಾಯ ವಿವಿ ಸಿಬ್ಬಂದಿಗಿಲ್ಲ ವೇತನ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 2
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಒಂದಲ್ಲ ಒಂದು ಕಾರಣಕ್ಕೆ ಸದಾ ಸುದ್ದಿಯಲ್ಲಿರುತ್ತದೆ. ಕುಲಪತಿ, ಕುಲಸಚಿವರ ಕಿತ್ತಾಟವಾಯ್ತು, ಇದೀಗ ಮೂರು ತಿಂಗಳಿನಿಂದ ರಾಜ್ಯ ಸರ್ಕಾರ ವಿವಿಯ ಬೋಧಕ, ಬೋಧಕೇತರ ಸಿಬ್ಬಂದಿಗೆ ವೇತನದ ಹಣವನ್ನೇ ಬಿಡುಗಡೆ ಮಾಡಿಲ್ಲ.
ವೇತನ ಇಲ್ಲದ ಸಿಬ್ಬಂದಿ ಒದ್ದಾಡುತ್ತಿದ್ದರೆ ಇತ್ತ ವಿಶ್ವವಿದ್ಯಾಲಯದ ಕುರಿತು ಉನ್ನತ ಶಿಕ್ಷಣ ಇಲಾಖೆ ನಿರ್ಲಕ್ಷ್ಯ ತಾಳುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಕುಲಸಚಿವರ ನೇಮಕ ಸೇರಿದಂತೆ ಇತರ ವಿಷಯಗಳ ಕುರಿತು ಸರ್ಕಾರ ಮತ್ತು ವಿವಿಯ ಕುಲಪತಿಗಳ ಮಧ್ಯೆ ನಡೆದ ಸಂಘರ್ಷವೇ ಇದಕ್ಕೆ ಕಾರಣವಾಗಿರಬಹುದೇ ಎಂಬ ಅನುಮಾನ ಕಾಡುತ್ತಿದೆ.
'ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ' ಎಂಬ ಮಾತಿನಂತೆ ಹಣಕಾಸು ಇಲಾಖೆ ವೇತನದ ಹಣ ಬಿಡುಗಡೆ ಮಾಡಿದರೂ, ಉನ್ನತ ಶಿಕ್ಷಣ ಇಲಾಖೆ ನೀಡುತ್ತಿಲ್ಲ ಎಂಬ ಆರೋಪವಿದೆ.
ಸರ್ಕಾರಕ್ಕೆ ಮುಜುಗರ: ಇತ್ತೀಚೆಗೆ ಕುಲಸಚಿವರ ಹಾಗೂ ಕುಲಪತಿ ನಡುವಿನ ಕಿತ್ತಾಟದಲ್ಲಿ ಕುಲಸಚಿವರನ್ನು ಮರು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದರೆ, ಕುಲಪತಿಯವರು ಅದನ್ನು ತಳ್ಳಿಹಾಕಿ, ನ್ಯಾಯಾಲಯದ ಮೆಟ್ಟಿಲೇರಿದ್ದರು. ಕೊನೆಗೆ ಕೋರ್ಟ್ ಸರ್ಕಾರದ ಆದೇಶ ಎತ್ತಿ ಹಿಡಿಯಿತು. ಕುಲಪತಿಯವರು ಕೋರ್ಟ್ ಮೆಟ್ಟಿಲೇರಿದ್ದು, ಸರ್ಕಾರಕ್ಕೆ ಮುಜುಗರಕ್ಕೆ ಕಾರಣವಾಗಿತ್ತು. ಈ ಅಂಶ ಏನಾದರೂ ಇಂತಹ ವಿಷಯದಲ್ಲಿ ಪರಿಣಾಮವಾಗಿದೆಯೇ ಎಂಬ ಮಾತುಗಳು ವಿಶ್ವವಿದ್ಯಾಲಯ ಸಿಬ್ಬಂದಿ ಹಾಗೂ ಅಧಿಕಾರಿಗಳ ವಲಯದಲ್ಲಿ ಹರಿದಾಡುತ್ತಿವೆ.
ಪ್ರತಿ ತಿಂಗಳು ರು. 75 ಲಕ್ಷ ಬಿಡುಗಡೆ: ವಿವಿಯಲ್ಲಿ ಬೋಧಕ ಹಾಗೂ ಬೋಧಕೇತರರು ಸೇರಿ ಒಟ್ಟು 140 ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರೆಲ್ಲರಿಗೂ ಪ್ರತಿ ತಿಂಗಳು ರು. 75 ಲಕ್ಷ ವೇತನ ನೀಡಬೇಕಾಗುತ್ತದೆ. ಪ್ರತಿ ತಿಂಗಳು ನಿಗದಿತ ಅವಧಿಯಲ್ಲೇ ಅವಶ್ಯಕ ಹಣವನ್ನು ಇಲಾಖೆ ಬಿಡುಗಡೆ ಮಾಡುತ್ತಿತ್ತು. ಆದರೆ ಕಳೆದ ಮೂರು ತಿಂಗಳಿಂದ ವೇತನದ ಹಣ ಬಿಡುಗಡೆ ಮಾಡದಿರುವುದು ಸಿಬ್ಬಂದಿಯ ಆತಂಕಕ್ಕೆ ಕಾರಣವಾಗಿದೆ. ಕಳೆದೆರೆಡು ತಿಂಗಳ ಅವಧಿಯಲ್ಲೇ ವಿವಿ ಕುಲಪತಿಗಳು ಬೇರೆ ಫಂಡ್‌ನಿಂದ ವಿವಿಯ ಸಿಬ್ಬಂದಿಗೆ ವೇತನ ನೀಡಿದ್ದು, ಇದೀಗ ಮೂರನೇ ತಿಂಗಳೂ ಸಂಬಳ ಬಂದಿಲ್ಲ. ಆದರೆ ರಾಜ್ಯ ಸರ್ಕಾರ ಹಣ ಬಿಡುಗಡೆಯಾದ ಮೇಲೆ ಸಂಬಳ ನೀಡುವುದಾಗಿ ತಿಳಿಸಿರುವುದು ಸಿಬ್ಬಂದಿಗೆ ತೀವ್ರ ತೊಂದರೆಯುಂಟು ಮಾಡಿದೆ.
ಅಭಿವೃದ್ಧಿ ಅನುದಾನ ಬಿಡುಗಡೆ ಇಲ್ಲ: ಒಂದು ಮೂಲದ ಪ್ರಕಾರ ಹಣಕಾಸು ಇಲಾಖೆ ವೇತನದ ಹಣ ಮಂಜೂರು ಮಾಡಿದ್ದರೂ, ಉನ್ನತ ಶಿಕ್ಷಣ ಇಲಾಖೆ ಹಣವನ್ನು ನೀಡುತ್ತಿಲ್ಲ ಎನ್ನುವ ಆರೋಪವಿದೆ. ಈ ಬಗ್ಗೆ ವಿವಿ ಅಧಿಕಾರಿಗಳು ಕೇಳಿದರೆ ಹಣ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳುತ್ತಿದ್ದಾರಂತೆ. ಆದರೆ ಬಿಡುಗಡೆ ಮಾತ್ರ ಮಾಡುತ್ತಿಲ್ಲ. ಇನ್ನು ಎರಡು ಅವಧಿಯ (6 ತಿಂಗಳ ಅವಧಿ) ವಿಶ್ವವಿದ್ಯಾಲಯ ಅಭಿವೃದ್ಧಿ ಅನುದಾನವನ್ನು ನೀಡದಿರುವುದು ವಿವಿ ಅಭಿವೃದ್ಧಿಗೆ ಧಕ್ಕೆ ಉಂಟಾಗುತ್ತಿದೆ. ಹೀಗೆ ಪ್ರತಿ ಹಂತದಲ್ಲಿ ವಿಶ್ವವಿದ್ಯಾಲಯ ಒಂದಲ್ಲ ಒಂದು ಸಮಸ್ಯೆ ಎದುರಿಸುತ್ತಾ ಸೊರಗುತ್ತಿದೆ. ಇಂತಹ ವಿಷಯಗಳು ವಿಶ್ವವಿದ್ಯಾಲಯದ ಬಗ್ಗೆ ಇರುವ ಅಭಿಪ್ರಾಯಗಳನ್ನು ಬದಲು ಮಾಡುವ ನಿಟ್ಟಿನಲ್ಲಿ ಆತಂಕ ಸೃಷ್ಟಿಯಾಗಿವೆ.
ಉನ್ನತ ಶಿಕ್ಷಣ ಸಚಿವರಿಗೆ ಮನವಿ: ವಿವಿ ಬೋಧಕೇತರ ಸಿಬ್ಬಂದಿ ಸಂಘದ ಅನಿಲ್ ಕುಮಾರ್ ಅವರು, ಸೆಪ್ಟೆಂಬರ್ ತಿಂಗಳ ವೇತನವನ್ನು ವಿವಿಗೆ ನೀಡಿಲ್ಲ. ಸರ್ಕಾರದಿಂದ ಹಣ ಬಿಡುಗಡೆಯಾಗದಿರುವುದರಿಂದ ನಮಗೆ ವೇತನ ಸಿಕ್ಕಿಲ್ಲ. ಎರಡು ತಿಂಗಳ ವೇತನದ ಹಣ ಸರ್ಕಾರದಿಂದ ಬಿಡುಗಡೆಯಾಗದಿದ್ದರೂ, ಬೇರೆ ಫಂಡ್‌ನಿಂದ ವೇತನ ನೀಡಲಾಗಿತ್ತು. ಈ ತಿಂಗಳ ಸಂಬಳ ನೀಡದ ಹಿನ್ನೆಲೆಯಲ್ಲಿ ಸಮಸ್ಯೆ ಎದುರಿಸುವಂತಾಗಿದೆ. ಇನ್ನು 2-3 ದಿನದಲ್ಲಿ ಉನ್ನತ ಶಿಕ್ಷಣ ಸಚಿವ ದೇಶಪಾಂಡೆ ಅವರಿಗೆ ಮನವಿ ಸಲ್ಲಿಸಲಾಗುತ್ತದೆ ಎನ್ನುತ್ತಾರೆ.
ಸರ್ಕಾರ ಹಾಗೂ ಕುಲಪತಿ ನಡುವೆ ಭಿನ್ನಾಭಿಪ್ರಾಯಗಳು ಇದ್ದರೂ ವಿಶ್ವವಿದ್ಯಾಲಯದ ಅಭಿವೃದ್ಧಿ, ಸಿಬ್ಬಂದಿ ವೇತನ, ಅನುದಾನ ಬಿಡುಗಡೆ ವಿಷಯದಲ್ಲಿ ಇಂತಹ ಧೋರಣೆ ತಾಳದೆ, ವಿವಿಯ ಬೆಳವಣಿಗೆಗೆ ಸಹಕರಿಸಬೇಕಾಗಿದೆ ಎಂಬುದು ಜನತೆಯ ಆಶಯ.
-ಶಶಿಧರ ಮೇಟಿ