ಅಮೂ ಹೇಳಿಕೆ ಖಂಡಿಸಿ ವಿಪ್ರರ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 3
ಬ್ರಾಹ್ಮಣ ಸಮುದಾಯದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿರುವ ಸಾಹಿತಿ ಯು.ಆರ್. ಅನಂತಮೂರ್ತಿ ಕ್ರಮ ಖಂಡಿಸಿ ಹಾಗೂ ಅವರಿಗೆ ನೀಡಿರುವ ಡಾಕ್ಟರೇಟ್, ಜ್ಞಾನಪೀಠ ಪ್ರಶಸ್ತಿಹಿಂಪಡೆಯುವಂತೆ ಆಗ್ರಹಿಸಿ, ಬ್ರಾಹ್ಮಣ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ಕಾರ್ಯಕರ್ತರು ಗುರುವಾರ ಸಂಜೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಸತ್ಯನಾರಾಯಣ ಪೇಟೆಯ ಶ್ರೀ ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದಿಂದ ಮೆರವಣಿಗೆ ಆರಂಭಿಸಲಾಯಿತು. ಪ್ರತಿಭಟನಾ ಮೆರವಣಿಗೆಯಲ್ಲಿ ಅನಂತಮೂರ್ತಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ ರಾಯಲ್ ವೃತ್ತದಲ್ಲಿ ಅನಂತಮೂರ್ತಿ ಪ್ರತಿಕೃತಿ ದಹಿಸಿದರು.
ಸಮಿತಿ ಜಿಲ್ಲಾ ಘಟಕದ ಗೌರವಾಧ್ಯಕ್ಷ ಡಾ. ಬಿ.ಕೆ. ಶ್ರೀನಿವಾಸಮೂರ್ತಿ ಮಾತನಾಡಿ, ಬ್ರಾಹ್ಮಣರಲ್ಲಿ ಗೋಮಾಂಸ ಸೇವಿಸುವ ಪರಿಪಾಠವಿತ್ತು ಎಂಬ ಯು.ಆರ್. ಅನಂತಮೂರ್ತಿ ಹೇಳಿಕೆ ಬ್ರಾಹ್ಮಣ ಸಮುದಾಯಕ್ಕೆ ತೀವ್ರ ನೋವುಂಟು ಮಾಡಿದೆ. ಬ್ರಾಹ್ಮಣರು ಗೋಮಾಂಸ ಸೇವಿಸುವ ಬಗ್ಗೆ ವೇದ, ಉಪನಿಷತ್ಗಳಲ್ಲಿ ಎಲ್ಲಿಯೂ ಉಲ್ಲೇಖವಿಲ್ಲ. ಆದರೆ ಅವರ ಅವಹೇಳನಕಾರಿ, ಕಪೋಲಕಲ್ಪಿತ, ಆಧಾರರಹಿತ ಹೇಳಿಕೆ ನೀಡಿರುವುದಕ್ಕೆ ಸಮಸ್ತ ಬ್ರಾಹ್ಮಣ ಸಮಾಜಕ್ಕೆ ಕ್ಷಮೆಯಾಚಿಸಬೇಕು ಮತ್ತು ಅವರಿಗೆ ನೀಡಿರುವ ಡಾಕ್ಟರೇಟ್ ಹಾಗೂ ಜ್ಞಾನಪೀಠ ಪ್ರಶಸ್ತಿ ಹಿಂಪಡೆಯಬೇಕು ಎಂದು ಕೇಂದ್ರ, ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.
ಗೋವುಗಳಿಗೆ ಮಾತೃಸ್ಥಾನ ಕಲ್ಪಿಸಿರುವ ಹಿಂದೂ ಧರ್ಮಗ್ರಂಥಗಳು ಗೋಹತ್ಯೆ, ಗೋಮಾಂಸ ಸೇವನೆಗೆ ಯಾರಿಗೂ ಪ್ರೇರೇಪಿಸಲು ಸಾಧ್ಯವಿಲ್ಲ. ವೇದಗಳಿಗೆ ತನ್ನದೇ ಆದ ಅರ್ಥರಹಿತ ವ್ಯಾಖ್ಯಾನ ನೀಡುತ್ತ, ಗೋಹತ್ಯೆ, ಗೋಮಾಂಸ ಸೇವನೆಗೆ ಪರೋಕ್ಷವಾಗಿ ಬೆಂಬಲ ನೀಡುವ ಮೂಲಕ ತಾವು ಜಾತ್ಯತೀತರೆಂದು ಎನಿಸಿಕೊಳ್ಳಲು ಹವಣಿಸಿರುವ ಕೆಲವರ ಸಾಲಿಗೆ ಅನಂತಮೂರ್ತಿ ಸಾರಥ್ಯವಹಿಸಿದ್ದು, ಸಮಾಜಘಾತುಕ ಕಾರ್ಯಕ್ಕೆ ಮುಂದಾಗಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಅನಂತಮೂರ್ತಿ ತಮ್ಮ ಹೇಳಿಕೆ ಹಿಂಪಡೆದು, ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕು. ಕ್ಷಮೆ ಯಾಚಿಸದಿದ್ದಲ್ಲಿ ಬ್ರಾಹ್ಮಣ ಸಮಾಜ ಹಿಂದೂ ಬಾಂಧವರೊಂದಿಗೆ ಉಗ್ರ ಹೋರಾಟ ಹಮ್ಮಿಕೊಳ್ಳುತ್ತದೆ ಎಂದು ಎಚ್ಚರಿಸಿದರು.
ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯಪಾಲ, ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಸಮಿತಿ ಜಿಲ್ಲಾಧ್ಯಕ್ಷ ಡಾ. ರಾಧಾಕೃಷ್ಣ, ಕಾರ್ಯದರ್ಶಿ ಗುರುರಾಜ, ವೈದ್ಯ ಬಿ.ಕೆ. ಸುಂದರ್, ಗೋವಿಂದ ಕುಲಕರ್ಣಿ ಹಾಗೂ ಮಹಿಳಾ ಭಜನಾ ಮಂಡಳಿಗಳು, ವೈದ್ಯರು, ವಕೀಲರು, ಪುರೋಹಿತರು ಸೇರಿದಂತೆ ಸಮಿತಿ ಕಾರ್ಯಕರ್ತರು ಇದ್ದರು.