ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಐಎಸ್‌ಆರ್ ಕಾರ್ಖಾನೆ: ಬಾಕಿ ಹಣ ವಸೂಲಿ ಮಾಡಿ

Vishwanath S
Updated On : 4 Oct 2013, 10:52 am

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 3
ಇಲ್ಲಿನ ಐಎಸ್‌ಆರ್ ಸಕ್ಕರೆ ಕಾರ್ಖಾನೆಯ ಕಾಯ್ದಿಟ್ಟ ಪ್ರದೇಶ ಮುಕ್ತಗೊಳಿಸಬೇಕು ಮತ್ತು ರೈತರಿಗೆ ಬರಬೇಕಾದ ಬಾಕಿ ಹಣ ವಸೂಲಿ ಮಾಡಿಕೊಡಬೇಕು ಎಂದು ಒತ್ತಾಯಿಸಿ ಹೊಸಪೇಟೆ ರೈತರ ಸಂಘ ಹಾಗೂ ಕಮಲಾಪುರದ ರೈತರ ಸಂಘದ ಪದಾಧಿಕಾರಿಗಳು ಹಾಗೂ ನೂರಾರು ರೈತರು ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿ ರೋಟರಿ ವೃತ್ತದ ಬಳಿ ಮಾನವ ಸರಪಳಿ ನಿರ್ಮಿಸಿ ಬಳಿಕ ಸಹಾಯಕ ಆಯುಕ್ತ ಸುನೀಲ್ ಕುಮಾರ್‌ಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಪ್ರತಿಭಟನಾ ಸಭೆ ಉದ್ದೇಶಿಸಿ ರೈತರ ಸಂಘದ ಕಾರ್ಯದರ್ಶಿ ಗೋಸಲ ಭರ್ಮಪ್ಪ ಮಾತನಾಡಿ, ಸ್ಥಳೀಯ ಐಎಸ್‌ಆರ್ ಸಕ್ಕರೆ ಕಾರ್ಖಾನೆ ಕಾಯ್ದಿಟ್ಟ ಪ್ರದೇಶದಿಂದ ರೈತರನ್ನು ಮುಕ್ತಗೊಳಿಸಬೇಕು. ಕಬ್ಬನ್ನು ಮುಕ್ತವಾಗಿ ಮಾರಾಟ ಮಾಡಲು ಅವಕಾಶ ಕಲ್ಪಿಸಿಕೊಡಬೇಕು. ಐಎಸ್‌ಆರ್ ಸಕ್ಕರೆ ಕಾರ್ಖಾನೆಯು 79 ವರ್ಷದ ಹಳೇ ಕಾರ್ಖಾನೆಯಾಗಿದ್ದು, ಯಾವುದೇ ಅಧುನೀಕರಣ ಇಲ್ಲದೆ ಪ್ರತಿದಿನ 1600-1700 ಟನ್ ಕಬ್ಬನ್ನು ನುರಿಸುವ ಸಾಮರ್ಥ್ಯ ಹೊಂದಿದ್ದು, ಇದರಿಂದ ಸೀಜನ್ ಮುಗಿಸಲು 7-8 ತಿಂಗಳು ಬೇಕಾಗುತ್ತದೆ. ರೈತರು ಮೂರು ವರ್ಷದಲ್ಲಿ 2 ಬೆಳೆ ಬೆಳೆದು, ಒಂದು ಬೆಳೆ ನಷ್ಟ ಅನುಭವಿಸುವಂತಾಗಿದೆ ಎಂದು ಆರೋಪಿಸಿದರು.
ರು. 1 ಕೋಟಿ ಬಾಕಿ: 2002-03, 2003-04 ಮತ್ತು 2006-07ನೇ ಸಾಲಿಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಅಂದಾಜು ರು. 1 ಕೋಟಿ (ಅಸಲು ಮತ್ತು ಬಡ್ಡಿ ಸೇರಿ) ಬಾಕಿ ನೀಡಬೇಕು. ಆದರೆ, ಇದುವರೆಗೂ ನೀಡಿಲ್ಲ. ಅಲ್ಲದೆ 2007-08ನೇ ಸಾಲಿಗೆ ಕರ್ನಾಟಕ ಸರ್ಕಾರದಿಂದ ತೆರಿಗೆ ರಿಯಾಯತಿ, ಆರ್ಥಿಕ ರಿಯಾಯತಿ ಪಡೆದುಕೊಂಡು ಸದರಿ ಸಾಲಿಗೆ ಕರ್ನಾಟಕ ಸರ್ಕಾರದಿಂದ ಹೇಳಿದ ಪ್ರಕಾರ ಪ್ರತಿ ಟನ್‌ಗೆ ರು. 160ಗಳಂತೆ ರೈತರಿಗೆ ನೀಡಿಲ್ಲ ಎಂದು ಹೇಳಿದರು.
ಕ್ರಮಕೈಗೊಳ್ಳಿ: ಕಾರ್ಖಾನೆಗೆ ಕಬ್ಬು ಕಟಾವು ಮತ್ತು ಸಾಗಾಣಿಕೆ ಮಾಡಲು ಕೂಲಿ ಕಾರ್ಮಿಕರು ಮತ್ತು ಎತ್ತಿನ ಬಂಡಿಗಳ ಕೊರತೆಯಿಂದ ದಿನದಿಂದ ದಿನಕ್ಕೆ ರೈತರಿಗೆ ಸಮಸ್ಯೆಗಳು ಉಂಟಾಗುತ್ತಿವೆ. ಕಾರ್ಖಾನೆಯವರು ನೀಡುವ ಕಬ್ಬಿನ ಬೆಲೆಯ ಅರ್ಧದಷ್ಟು ಹಣ ಕಟಾವು ಮತ್ತು ಸಾಗಾಣಿಕೆಗೆ ಕೊಟ್ಟು ರೈತರು ನಷ್ಟ ಅನುಭವಿಸಬೇಕಾಗುತ್ತದೆ. ಕಾರ್ಖಾನೆಯವರೇ ಕಟಾವು ಮತ್ತು ಸಾಗಣಿಕೆ ಮಾಡಿಕೊಳ್ಳಲು ಮನವಿ ಮಾಡಿಕೊಂಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಈ ನಿಟ್ಟಿನಲ್ಲಿ ಕಾರ್ಖಾನೆ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ರೈತ ಸಂಘದ ಅಧ್ಯಕ್ಷ ತಾರಿಹಳ್ಳಿ ಹಲುಗಜ್ಜಪ್ಪ, ಉಪಾಧ್ಯಕ್ಷ ಬಿ.ಕೆ. ನಾಗರಾಜ್‌ರಾವ್, ಕಾರ್ಯದರ್ಶಿ ಗೋಸಲ ಭರ್ಮಪ್ಪ, ಖಜಾಂಚಿ ಪ್ಯಾಟಿ ಜಂಬಣ್ಣ, ಸಹ ಕಾರ್ಯದರ್ಶಿ ಬಿ. ನಾಗರಾಜ್, ಕಮಲಾಪುರ ರೈತ ಸಂಘದ ಅಧ್ಯಕ್ಷ ಪ್ರಶಾಂತ್ ಸಿಂಗ್, ಉಪಾಧ್ಯಕ್ಷ ಗೋವಿಂದರಾವ್, ಎಸ್. ಶಮೀಉಲ್ಲಾ, ಕಾರ್ಯದರ್ಶಿ ಕೆ.ಪಿ. ಪಾಂಡುರಂಗರಾವ್, ಜಂಟಿ ಕಾರ್ಯದರ್ಶಿ ಎ. ಅಶ್ವತ್ ಸಿಂಗ್, ಕಿಚಿಡಿ ಲಕ್ಷ್ಮಣ, ಜಿ.ಕೆ. ಹನುಮಂತಪ್ಪ, ನಾಣಿಕೇರಿ ತಿಮ್ಮಯ್ಯ, ಬೆಳಗೋಡು ರುದ್ರಪ್ಪ, ಬಂಡೆ ರಂಗಪ್ಪ, ಬ್ಯಾಲಾಳು ಸಣ್ಣಪ್ಪ, ಬಿ.ಎಸ್. ಜಂಬಯ್ಯ ನಾಯಕ, ಹೊಸಪೇಟೆ ಹಾಗೂ ಕಮಲಾಪುರದ ರೈತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement