ಕನಕ ಪೀಠಕ್ಕೆ ಕಪಿಲಮುನಿ ಪೀಠದ ಮೇಲೇಕೆ ಕಣ್ಣು?
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಅ. 3
ಐತಿಹಾಸಿಕ ಹಾಗೂ ಪೌರಾಣಿಕ ಹಿನ್ನೆಲೆ ಹೊಂದಿರುವ ನಾಡಿನ ಕೋಟ್ಯಂತರ ಭಕ್ತರ ಜಾತ್ಯತೀತ ದೇವರೆಂಬ ಹೆಗ್ಗಳಿಕೆ ಹೊಂದಿರುವ ಮೈಲಾರಲಿಂಗನ ಸಂಪ್ರದಾಯ, ಪರಂಪರೆಯನ್ನು ಕಾಗಿನೆಲೆ ಕನಕ ಗುರುಪೀಠದ ಶ್ರೀಗಳು ಹಾಳು ಮಾಡುವ ಹುನ್ನಾರ ನಡೆಸಿದ್ದಾರೆ ಎಂದು ಮಾಜಿ ಶಾಸಕ ಶಂಕರಗೌಡ ಪಾಟೀಲ ಆರೋಪಿಸಿದ್ದಾರೆ.
ಮೈಲಾರ ದೇವಸ್ಥಾನದ ಕಪಿಲಮುನಿ ಪೀಠದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಲಾರಲಿಂಗನ ಪರಂಪರೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಅದನ್ನು ಸಹಿಸದ ಕೆಲವರು ಚ್ಯುತಿ ತರಲು ಹವಣಿಸುತ್ತಿದ್ದಾರೆ. ಕಪಿಲಮುನಿ ಗುರುಪೀಠ ಕಾಗಿನೆಲೆ ಕನಕ ಪೀಠಕ್ಕೂ ಮುನ್ನವೇ ಹುಟ್ಟಿಕೊಂಡು ಶ್ರೀ ಮೈಲಾರಲಿಂಗೇಶ್ವರ ಸ್ವಾಮಿಯ ಸಂಪ್ರದಾಯಗಳನ್ನು ನಡೆಸಿಕೊಂಡು ಬಂದಿದೆ. ಆದರೆ, ಕನಕ ಗುರುಪೀಠದ ಶ್ರೀಗಳು ರಾಜ್ಯದ ಒಂದು ಸಮುದಾಯಕ್ಕೆ ಮಾತ್ರ ಸೀಮಿತಗೊಳಿಸುವ ಕೆಲಸಕ್ಕೆ ಕೈ ಹಾಕಿರುವುದು ಮೈಲಾರಲಿಂಗೇಶ್ವರನ ಭಕ್ತರಲ್ಲಿ ಬೇಸರ ಹಾಗೂ ಆತಂಕ ತಂದಿದೆ ಎಂದು ಹೇಳಿದರು.
ಹಿಂದಿನಿಂದಲೂ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿನ ಕಪಿಲಮುನಿ ಪೀಠಕ್ಕೂ, ಕಾಗಿನೆಲೆ ಕನಕ ಗುರುಪೀಠಕ್ಕೂ ಯಾವುದೇ ತೆರೆನಾದ ಸಂಬಂಧಗಳಿಲ್ಲ. ಮೈಲಾರಲಿಂಗನ ಪರಂಪರೆಗೆ ತಕ್ಕ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸದಂತೆ ತೊಂದರೆ ಉಂಟು ಮಾಡುತ್ತಿದ್ದಾರೆ. ಕಪಿಲಮುನಿ ಸಿಂಹಾಸನ ಪೀಠಾಧಿಪತಿಗಳಿಗೆ ಮಾನಸಿಕ ಕಿರುಕುಳ, ಚಿತ್ರಹಿಂಸೆ ನೀಡುತ್ತಿದ್ದಾರೆಂದು ಗಂಭೀರವಾಗಿ ಆರೋಪಿಸಿದರು.
ಜಾತಿಗಳ ನಡುವೆ ಸಂಘರ್ಷ: ಕಾಗಿನೆಲೆ ಶ್ರೀಗಳ ಈ ಪ್ರಯತ್ನ ಜಾತಿ-ಜಾತಿಗಳ ನಡುವೆ ಸಂಘರ್ಷಕ್ಕೆ ದಾರಿ ಮಾಡಿದೆ. ರಾಜ್ಯದ ಒಂದು ಜಾತಿಗೆ ಸೀಮಿತವಾಗಿ ಪೀಠಾಧಿಪತಿಗಳಾಗಿರುವ ಕಾಗಿನೆಲೆ ಶ್ರೀಗಳು ತಮ್ಮ ಜಾತಿ ಸಂಘಟನೆಯಲ್ಲಿ ತೊಡಗಿಕೊಳ್ಳಲಿ. ಆದರೆ ಜಾತಿ ಜಾತಿಗಳ ನಡುವಿನ ಸಾಮರಸ್ಯ ಹಾಳು ಮಾಡುವ ಕೆಲಸಕ್ಕೆ ಕೈ ಹಾಕಬಾರದೆಂದು ಹೇಳಿದರು.
ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಮಾತನಾಡಿ, ಈಗಾಗಲೇ ಕಾರ್ಣಿಕ ನುಡಿಯುವ ಗೊರವಪ್ಪನ ಆರೋಗ್ಯ ಸರಿ ಇಲ್ಲ. ದೈಹಿಕವಾಗಿ ಸಮರ್ಥರಿಲ್ಲದ ಕಾರಣ ಅದೇ ವಂಶಾವಳಿಯಲ್ಲಿ ಬರುವ ವ್ಯಕ್ತಿಯೋರ್ವನನ್ನು ಕಾರ್ಣಿಕ ನುಡಿಯುವ ಕಾರ್ಯಕ್ಕೆ ನೇಮಕಾತಿ ಮಾಡುವ ಪ್ರಕ್ರಿಯೆ ನಡೆದಿದೆ ಎಂದರು.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿಯುವ ಕೆಲಸ ಅತ್ಯಂತ ಪವಿತ್ರವಾದುದ್ದು, ನಡತೆ ಸರಿಯಿಲ್ಲದ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿರುವ ಕಾಗಿನೆಲೆ ಶ್ರೀಗಳು ತಮ್ಮ ಪೀಠಕ್ಕೆ ಬೇಕಾದರೆ ಅವರನ್ನು ನೇಮಿಸಿಕೊಳ್ಳಲಿ ಎಂದು ಸವಾಲು ಹಾಕಿದ್ದಾರೆ.
ಕಾರ್ಣಿಕ ನುಡಿ ಗೊರವಪ್ಪನ ಆರೋಗ್ಯ ಸರಿ ಇಲ್ಲ. ಹೀಗೈ ಅದೇ ವಂಶಾವಳಿಯಲ್ಲಿ ಬರುವ ವ್ಯಕ್ತಿಯೋರ್ವನನ್ನು ಕಾರ್ಣಿಕ ನುಡಿಯ ಕಾರ್ಯಕ್ಕೆ ನೇಮಕಾತಿ ಮಾಡುವ ಪ್ರಕ್ರಿಯೆ ನಡೆದಿದೆ. ನಡತೆ ಸರಿಯಿಲ್ಲದ ವ್ಯಕ್ತಿಯನ್ನು ನೇಮಕ ಮಾಡಿಕೊಳ್ಳುವಂತೆ ಒತ್ತಡ ಹೇರುತ್ತಿರುವ ಕಾಗಿನೆಲೆ ಶ್ರೀಗಳು ಅಗತ್ಯವಿದ್ದರೆ ತಮ್ಮ ಪೀಠಕ್ಕೆ ಬೇಕಾದರೆ ಅವರನ್ನು ನೇಮಿಸಿಕೊಳ್ಳಲಿ.
ವೆಂಕಪ್ಪಯ್ಯ ಒಡೆಯರ್
ಕನಕ ಪೀಠದ ಬಗ್ಗೆ ಹಗುರ ಮಾತು ಸಲ್ಲದು
ಹೂವಿನಹಡಗಲಿ: ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿಯುವ ಗೊರವಪ್ಪ ಇನ್ನು ಜೀವಂತವಿದ್ದು, ಬೇರೊಬ್ಬ ಗೊರವಪ್ಪನನ್ನು ನೇಮಕ ಮಾಡಲು ಹೊರಟಿರುವ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಏಕಪಕ್ಷಿ ನಿರ್ಧಾರವನ್ನು ತಾಲೂಕು ಕುರುಬರ ಸಂಘ ಖಂಡಿಸಿದೆ.
ಮಾಜಿ ಸಚಿವ ಈಟಿ ಶಂಭುನಾಥ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಂಘದ ಅಧ್ಯಕ್ಷ ಹೊಸ್ಕೇರಿ ಬೀರಪ್ಪ, ದೇವಸ್ಥಾನದ ಪರಂಪರೆಯಂತೆ ವಂಶಾವಳಿ ಪ್ರಕಾರ ಇಲ್ಲಿ ಬಾಬುದಾರರು ನೇಮಕವಾಗುತ್ತಿದ್ದಾರೆ. ಕಾರ್ಣಿಕ ನುಡಿಯುವ ಗೊರವಪ್ಪನ ಆರೋಗ್ಯ ಸ್ಥಿತಿ ಸರಿ ಇಲ್ಲ, ಆದ್ದರಿಂದ ಅವರ ಮಗನನ್ನು ನೇಮಕ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಈ ದೇವಸ್ಥಾನದಲ್ಲಿ ಕಾಗಿನೆಲೆ ಗುರುಪೀಠದ ಕನಕ ಶ್ರೀಗಳು ಯಾವ ಕಾರಣಕ್ಕೂ ಹಸ್ತಕ್ಷೇಪ ಮಾಡಿಲ್ಲ. ಗುರುಪೀಠ ಹಾಗೂ ಶ್ರೀಗಳ ಬಗ್ಗೆ ಮಾಜಿ ಶಾಸಕ ಶಂಕರಗೌಡ ಪಾಟೀಲ್ ಹಾಗೂ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಹಗುರವಾಗಿ ಮಾತನಾಡಿರುವುದು ಸರಿಯಲ್ಲ ಎಂದರು.
ಗೊರವಪ್ಪನ ಅನಾರೋಗ್ಯ ನೆಪವಾಗಿರಿಸಿಕೊಂಡು ಬೇರೆಯವರ ನೇಮಕ ಮಾಡುವ ಹುನ್ನಾರ ನಡೆದಿದೆ. ಅವರ ಮಕ್ಕಳು ಹಾಗೂ 3 ಸಹೋದರರು ಇದ್ದಾರೆ. ತಮಗೆ ಬೇಕಾದವರೊಬ್ಬರನ್ನು ನೇಮಿಸಿದರೆ ಉಗ್ರ ಹೋರಾಟ ಮಾಡುತ್ತೇವೆಂದು ಎಚ್ಚರಿಸಿದರು.
ಕುರುಬ ಸಮಾಜ ಈ ವರೆಗೂ ಕಾರ್ಣಿಕ ನುಡಿಯುವ ಗೊರವಪ್ಪನ ವಿಚಾರವಾಗಿ ಮಾತ್ರ ನ್ಯಾಯ ಕೇಳಿದ್ದು ಸತ್ಯ. ಉಳಿದಂತೆ ಅವರ ಆಡಳಿತ, ಅಭಿವೃದ್ಧಿ, ದೇವಸ್ಥಾನದ ಬಗ್ಗೆ ತಮ್ಮದೇನೂ ತಕರಾರು ಇಲ್ಲ. ಆ ವಿಚಾರದಲ್ಲಿ ಕನಕ ಶ್ರೀಗಳನ್ನು ಎಳೆದು ತಂದು ಜಾತಿ ಜಾತಿಗಳ ಮಧ್ಯ ವಿಷ ಬೀಜ ಬಿತ್ತುವ ಹಠಮಾರಿತನ ಬಿಟ್ಟು ಸಮಸ್ಯೆಯನ್ನು ಸೌಹಾರ್ದಯುತವಾಗಿ ಬಗೆಹರಿಸಲು ಆಹ್ವಾನಿಸುತ್ತೇವೆ ಎಂದರು.
ಮಾಜಿ ಸಚಿವ ಈಟಿ ಶಂಭುನಾಥ, ಸಮಾಜದ ಮುಖಂಡ ಹನುಮಂತಪ್ಪ, ಗುರುವಿನ ಕೊಟ್ರಯ್ಯ, ಎಂ. ಪರಮೇಶ್ವರ ವಕೀಲರು ಇದ್ದರು.