ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಗಾಂಧಿ ಜಯಂತಿ: ರೋಗಿಗಳಿಗೆ ಹಾಲು-ಹಣ್ಣು ವಿತರಣೆ

Vishwanath S
Updated On : 4 Oct 2013, 10:52 am

ಹೂವಿನಹಡಗಲಿ:  ಗಾಂಧಿ ಜಯಂತಿ ಅಂಗವಾಗಿ ತಾಲೂಕು ಗೃಹ ರಕ್ಷಕ ದಳದ ವತಿಯಿಂದ ಇಲ್ಲಿನ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಣ್ಣು-ಹಾಲು ವಿತರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ತಹಸೀಲ್ದಾರ್ ವಿಜಯಕುಮಾರ, ಗೃಹ ರಕ್ಷಕ ದಳವು ಈ ರೀತಿ ಸಾರ್ವಜನಿಕರ ಸೇವೆ ಮಾಡುತ್ತಿರುವುದು ಅನುಪಮವಾದದ್ದು ಎಂದು ಪ್ರಶಂಸೆ ವ್ಯಕ್ತಪಡಿಸಿದರು. ವೈದ್ಯಾಧಿಕಾರಿ ಡಾ. ಶಿವಕುಮಾರ, ಎಎಸ್‌ಐ ಜಿ.ಪಿ. ಹಳ್ಳಪ್ಪನವರ್, ಗೃಹ ರಕ್ಷಕ ಅಧಿಕಾರಿ ಪಿ. ವೆಂಕಟೇಶರಾವ್, ಪಿಎಲ್‌ಸಿ ಕೆ. ರಾಜಪೀರ್, ಎಸ್. ಸಿದ್ದಲಿಂಗಪ್ಪ, ಕೆ. ಸುಭಾನ್‌ಸಾಬ್, ಬಿ. ವೀರಭದ್ರಪ್ಪ, ಸಂತೋಷಕುಮಾರ ಇತರರು ಉಪಸ್ಥಿತರಿದ್ದರು.
ಎಸ್‌ಡಿಎಂಸಿ ಸದಸ್ಯರ ಆಯ್ಕೆ
ಬಳ್ಳಾರಿ: ನಗರದ ಕೌಲ್ ಬಜಾರ್‌ನ ಗಣೇಶ್‌ಗುಡಿ ಬೀದಿಯಲ್ಲಿನ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಗೆ ನೂತನ ಎಸ್‌ಡಿಎಂಸಿ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಪಶ್ಚಿಮ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್ ಸಿಂಧಗಿ ಅನುಮೋದನೆ ನೀಡಿದ್ದಾರೆ. ಆಯ್ಕೆಯಾದವರ ವಿವರ ಇಂತಿದೆ. ಅಧ್ಯಕ್ಷರಾಗಿ ಎಸ್. ಸುರೇಶ್‌ಕುಮಾರ, ಉಪಾಧ್ಯಕ್ಷೆಯಾಗಿ ಶಾಂತಿ, ಸದಸ್ಯರಾಗಿ ಪಿ.ಎಂ. ಮೋಹನ್, ಹೇಮಾವತಿ, ವರಲಕ್ಷ್ಮಿ, ಪೀರ್ ನಾಯಕ್, ಕೆ. ಕೃಷ್ಣ, ಸೈಯದ್ ಬಷೀರ್, ಕಾತುನ್‌ಬೀ, ಸುಶೀಲ್, ಈರಣ್ಣ, ಭಾಗ್ಯಮ್ಮ, ಡಿ. ಮೋಹನ್, ಪದನಿಮಿತ್ತ ಸದಸ್ಯರಾಗಿ ಡಿ. ಮೋಹನ್‌ದಾಸ್, ಅಂಗನವಾಡಿ ಕಾರ್ಯಕರ್ತೆ ಇಂದಿರಾ, ಆರೋಗ್ಯ ಕಾರ್ಯಕರ್ತೆ ವಿಜಯಲಕ್ಷ್ಮಿ ನಾಯಕ್, ನಾಮ ನಿರ್ದೇಶನ ಸದಸ್ಯರಾಗಿ ಪಾಲಿಕೆ ಸದಸ್ಯ ಅಕ್ಬರ್, ಶಿಕ್ಷಕಿ ಈರಮ್ಮ, ವಿದ್ಯಾರ್ಥಿ ಕುಮಾರ ಮಂಜು ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ ಎಂದು ಬಿಇಒ ಅಶೋಕ್ ಸಿಂಧಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಆಭರಣ ಕಳ್ಳತನ
ಹೊಸಪೇಟೆ: ಸೆಕ್ಯೂರಿಟಿಯವರು ಎಂದು ಹೇಳಿ ರು. 2.40 ಲಕ್ಷ ಮೌಲ್ಯದ 9 ತೊಲೆ ಬಂಗಾರದ ಆಭರಣಗಳನ್ನು ದೋಚಿಕೊಂಡು ಹೋಗಿರುವ ಘಟನೆ ಗುರುವಾರ ಜರುಗಿದೆ. ಆಭರಣಗಳನ್ನು ಮೈಮೇಲೆ ಹಾಕಿಕೊಂಡು ನಗರದಲ್ಲಿ ವಾಕಿಂಗ್ ಹೋಗುವಾಗ ಬಂಗಾರದ ಆಭರಣಗಳನ್ನು ಮೈಮೇಲೆ ಹಾಕಿಕೊಂಡು ಹೋಗುವ ಬದಲು ಚೀಲದಲ್ಲಿ ಹಾಕಿಕೊಂಡು ಹೋಗಿ ಎಂದು ಹೇಳಿ ಒಂದು ಚೀಲದಲ್ಲಿ ಆಭರಣಗಳನ್ನು ಇಟ್ಟು, ಮತ್ತೊಂದು ಚೀಲದಲ್ಲಿ ಸಣ್ಣ ಸಣ್ಣ ಕಲ್ಲುಗಳನ್ನು ಹಾಕಿಕೊಟ್ಟು ಅಸಲಿ ಬಂಗಾರದ ಚೀಲವನ್ನು ಹಾರಿಸಿಕೊಂಡು ಹೋಗಿದ್ದಾರೆ. ನಾಗಲಕ್ಷ್ಮಿ ಎಂಬುವವರು ಮೋಸಕ್ಕೆ ಒಳಗಾಗಿದ್ದು, ಆಭರಣಗಳ ಚೀಲವನ್ನು ಬಿಟ್ಟು ಸಣ್ಣ ಕಲ್ಲುಗಳನ್ನು ಹಾಕಿರುವ ಚೀಲವನ್ನು ನಾಗಲಕ್ಷ್ಮಿ ಅವರ ಸೀರೆಯ ಸೆರಗಿನಲ್ಲಿ ಕಟ್ಟಿಕೊಟ್ಟಿದ್ದಾರೆ. ನಗರದ ಮೇನ್ ಬಜಾರ್‌ನಲ್ಲಿ ವಾಕಿಂಗ್ ಮಾಡಿ ನಂತರ ಪಾದಗಟ್ಟಿ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಬಂದು ಸೀರೆಯ ಸೆರಗಿನಲ್ಲಿದ್ದ ಚೀಲವನ್ನು ಬಿಚ್ಚಿ ನೋಡಿದಾಗ ಚೀಲದಲ್ಲಿ ಕಲ್ಲು ತುಂಬಿದ್ದು ಗೊತ್ತಾಗಿದೆ. ಈ ಕುರಿತು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರಿಕೆಟ್ ಬೆಟ್ಟಿಂಗ್: ಓರ್ವನ ಬಂಧನ
ಹೊಸಪೇಟೆ: ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿದ್ದ ವ್ಯಕ್ತಿಯನ್ನು ನಗರ ಪೊಲೀಸರು ಬಂಧಿಸಿ, ಆತನಿಂದ ರು. 60 ಸಾವಿರ ನಗದು ಹಾಗೂ 5 ಮೊಬೈಲ್‌ಗಳು, 3 ನೋಟ್ ಪುಸ್ತಕಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.  ಅರವಿಂದ ನಗರದ ನಿವಾಸಿ ಶಿವಕುಮಾರ್ (30) ಬೆಟ್ಟಿಂಗ್‌ನಲ್ಲಿ ತೊಡಗಿದ್ದ ವ್ಯಕ್ತಿಯಾಗಿದ್ದಾನೆ. ನಗರದ ಕೆಎಸ್‌ಆರ್‌ಟಿಸಿ ಡಿಪೋ ಹಿಂಭಾಗದಲ್ಲಿ ಬೆಟ್ಟಿಂಗ್ ಹಣ ನೀಡುತ್ತಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ಮಾಡಿ ಶಿವಕುಮಾರ್‌ನನ್ನು ಬಂಧಿಸಿದ್ದಾರೆ. ಈ ಕುರಿತು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಾಳೆ ಸಮಾರೋಪ
ಹೊಸಪೇಟೆ: ಕರ್ನಾಟಕ ಕಲಾಭಿಮಾನಿ ಸಂಘದಿಂದ ನಗರದಲ್ಲಿ 30 ದಿನಗಳ ಕಾಲ ಹಮ್ಮಿಕೊಂಡಿದ್ದ ಮಕ್ಕಳ ನಾಟಕ ತರಬೇತಿ ಶಿಬಿರದ ಸಮಾರೋಪ ಸಮಾರಂಭ ನಗರದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಅ. 5ರಂದು ಸಂಜೆ 7 ಗಂಟೆಗೆ ನಡೆಯಲಿದೆ. ಕಾಂಗ್ರೆಸ್ ಮುಖಂಡ ದೀಪಕ್‌ಕುಮಾರ್ ಸಿಂಗ್ ಕಾರ್ಯಕ್ರಮ ಉದ್ಘಾಟಿಸುವರು. ಕರ್ನಾಟಕ ಕಲಾಭಿಮಾನಿ ಸಂಘದ ಮುಖಂಡ ಆರ್.ಪಿ. ಗುರುರಾಜ್ ಅಧ್ಯಕ್ಷತೆ ವಹಿಸುವರು. ನಿವೃತ್ತ ಪ್ರಾಚಾರ್ಯ ಯು. ರಾಘವೇಂದ್ರರಾವ್ ಸಮಾರೋಪ ಭಾಷಣ ಮಾಡುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ. ನಾಗರಾಜ, ಹಿರಿಯ ರಂಗ ಕಲಾವಿದೆ ಡಾ. ಕೆ. ನಾಗಲಕ್ಷ್ಮಮ್ಮ, ನಗರಸಭಾ ಸದಸ್ಯ ಚಂದ್ರಕಾಂತ ಕಾಮತ್, ಕೈರಳಿ ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎಂ.ಕೆ. ಮತ್ತಾಯಿ, ಕಾರ್ಯದರ್ಶಿ ಡಾ. ಮೋಹನ ಕುಂಟಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಳ್ಳಾರಿ ಇವರ ಸ್ಥಳೀಯ ಪ್ರಾಯೋಜಕತ್ವದಡಿ ಶಿಬಿರದಲ್ಲಿ ರೂಪಿಸಿದ ಪುಣ್ಯಕೋಟಿ ಮಕ್ಕಳ ನಾಟಕ ಪ್ರದರ್ಶನ ನಡೆಯಲಿದೆ.
ಆರೋಗ್ಯ ತಪಾಸಣೆ
ಬಳ್ಳಾರಿ: ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ, ದೇವದಾಸಿ ಪುನರ್ವಸತಿ ಯೋಜನೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಜಿಲ್ಲೆಯ ಕುರುಗೋಡು ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದೇವದಾಸಿ ಮಹಿಳೆಯರಿಗಾಗಿ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಡಾ. ಪದ್ಮಾವತಿ ತಪಾಸಣಾ ಶಿಬಿರ ಉದ್ಘಾಟಿಸಿ ನಂತರ ಮಾತನಾಡಿ, ಏಡ್ಸ್, ಬಿ.ಪಿ. ಮಧುಮೇಹ, ಡೆಂಗ್ಯು ಮತ್ತಿತರ ಕಾಯಿಲೆ ಬಗ್ಗೆ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳನ್ನು ಅವರು ತಿಳಿಸಿದರು. ಈ ಸಂದರ್ಭ ದೇವದಾಸಿ ಪುನರ್ವಸತಿ ಯೋಜನೆ ಅನುಷ್ಠಾನಾಧಿಕಾರಿ ಎಂ. ಮುಕ್ಕಣ್ಣ, ಆಪ್ತ ಸಮಾಲೋಚಕ ಬಂಗಿ ವೆಂಕಟೇಶ್, ಎಸ್.ಟಿ.ಡಿ. ಆಪ್ತ ಸಮಾಲೋಚಕ ಟಿ. ಸುರೇಶ್, ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಇದ್ದರು.
ಪದಾಧಿಕಾರಿಗಳ ಆಯ್ಕೆ
ಕೂಡ್ಲಿಗಿ: ತಾಲೂಕಿನ ಎಲ್ಲ ಇಲಾಖೆಗಳ ಹೊಸ ಪಿಂಚಣಿ ಯೋಜನೆಗೆ ಒಳಪಡುವ ಸರ್ಕಾರಿ ಕಾಯಂ ನೌಕರರ ಸಂಘದ ಪದಾಧಿಕಾರಿಗಳನ್ನು ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಬಿ.ಬಿ. ಶಿವಾನಂದ ಅಧ್ಯಕ್ಷ, ಆರ್. ಕುಮಾರ್ ಉಪಾಧ್ಯಕ್ಷ, ಎಚ್.ಜಿ. ಹನುಮಂತಪ್ಪ ಗೌರವಾಧ್ಯಕ್ಷ, ಬಿ.ಎಂ. ಬಸವರಾಜಯ್ಯ ಪ್ರಧಾನ ಕಾರ್ಯದರ್ಶಿ, ರಜನಿಕಾಂತ ಸಹ ಕಾರ್ಯದರ್ಶಿ, ಕೆ.ಪಿ.ಎಂ. ಶಿವಾನಂದಸ್ವಾಮಿ ಖಜಾಂಚಿ, ತಿಪ್ಪೇಸ್ವಾಮಿ ಅಂಗಡಿ ಸಂಘಟನಾ ಕಾರ್ಯದರ್ಶಿ, ವಿಜಯಲಕ್ಷ್ಮೀ ಮಹಿಳಾ ಸಂಘಟನಾ ಕಾರ್ಯದರ್ಶಿ, ವಲಯ ಕಾರ್ಯದರ್ಶಿಗಳಾಗಿ ಜಿ. ರವಿಕುಮಾರ್ (ಕೂಡ್ಲಿಗಿ ವಲಯ), ಬಸವರಾಜ (ಕೊಟ್ಟೂರು ವಲಯ), ಅಣಜಿ ಸಿದ್ದಲಿಂಗಪ್ಪ (ಗುಡೇಕೋಟೆ), ಎನ್. ಪ್ರಭು (ಹೊಸಹಳ್ಳಿ) ಹಾಗೂ ಕೆ. ಎರ್ರಿಸ್ವಾಮಿ ಸಲಹೆಗಾರರಾಗಿ ಆಯ್ಕೆಯಾಗಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement