ಬೇಲೆಕೇರಿ ಪ್ರಕರಣ: ಶಾಸಕ ನಾಗೇಂದ್ರ ಅರೆಸ್ಟ್
ಬಳ್ಳಾರಿ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲೆಯ ಕೂಡ್ಲಿಗಿ ಶಾಸಕ, ಈಗಲ್ ಟ್ರೇಡರ್ಸ್ ಮಾಲೀಕ ಬಿ. ನಾಗೇಂದ್ರ ಅವರನ್ನು ಸಿಬಿಐ ಅಧಿಕಾರಿಗಳು ಬಂಧಿಸುವ ಮೂಲಕ ಒಟ್ಟು ಮೂವರು ಶಾಸಕರ ಬಂಧನ ಪರ್ವ ಮುಗಿದಿದೆ. ಓರ್ವ ಶಾಸಕ ಮಾತ್ರ ಬಾಕಿ ಉಳಿದ್ದಿದ್ದಾನೆ.
ಗುರುವಾರ ಶಾಸಕರೊಂದಿಗೆ ಎಸ್ಬಿ ಲಾಜಿಸ್ಟಿಕ್ ಮಾಲೀಕ ಕೋನಂಪಲ್ಲಿ ಜನಾರ್ದರೆಡ್ಡಿ, ಇನ್ನು ರೆಡ್ಡಿ ಪರವಾದ ಅದಿರು ಸಾಗಾಣಿಕೆದಾರ ಜೀವ ರೆಡ್ಡಿಯನ್ನು ಕೂಡ ಸಿಬಿಐ ಅಧಿಕಾರಿಗಳು ಬಂಧಿಸಿದ್ದಾರೆ.
ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆಂದು ಕರೆದು ಹಿಂದಿನ ಶಾಸಕರನ್ನು ಬಂಧಿಸಿದಂತೆ, ಗುರುವಾರ ಕೂಡ್ಲಿಗಿಯ ಶಾಸಕ ನಾಗೇಂದ್ರ ಅವರನ್ನು ವಿಚಾರಣೆಗೆ ಕರೆದು ಬಂಧಿಸಿದ್ದಾರೆ.
ಬೇಲೆಕೇರಿ ಅದಿರು ಪ್ರಕರಣದಲ್ಲಿ ಅಕ್ರಮವಾಗಿ ತೆಗೆದಿದ್ದ ಅದಿರನ್ನು, ಪರವಾನಗಿ ಇಲ್ಲದೆ ಎಕ್ಸ್ಪೋರ್ಟ್ ಕಂಪನಿಗಳಿಗೆ, ರಫ್ತುದಾರರಿಗೆ ಮಾರಾಟ ಮಾಡಲಾಗುತ್ತಿತ್ತು ಎಂಬ ಆರೋಪದ ಹಿನ್ನೆಲೆಯಲ್ಲಿ ಶಾಸಕ ಬಿ. ನಾಗೇಂದ್ರ ಅವರನ್ನು ಬಂಧಿಸಲಾಗಿದೆ.
ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ಸಿಬಿಐಗೆ ವಹಿಸಿಕೊಟ್ಟ ಬೆನ್ನಲ್ಲೆ ಶಾಸಕರಿಗೆ ಬಂಧನದ ಆತಂಕ ಶುರುವಾಗಿತ್ತು. ಸಿಇಸಿ ಶಿಫಾರಸಿನ ಮೇರೆಗೆ ಸುಪ್ರೀಂಕೋರ್ಟ್ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣವನ್ನು ಸಿಬಿಐಗೆ ವಹಿಸಿತ್ತು. ಈ ಹಿನ್ನೆಲೆಯಲ್ಲಿ ತನಿಖೆ ಕೈಗೆತ್ತಿಕೊಂಡ ಸಿಬಿಐ ಅಧಿಕಾರಿಗಳು ಕೂಡ್ಲಿಗಿ ಶಾಸಕ ನಾಗೇಂದ್ರ ಅವರ ಬಳ್ಳಾರಿ ನೆಹರು ಕಾಲೋನಿಯಲ್ಲಿರುವ ನಿವಾಸ ಹಾಗೂ ತಾಳೂರು ರಸ್ತೆಯಲ್ಲಿರುವ ಈಗಲ್ ಟ್ರೇಡರ್ಸ್ ಹಾಗೂ ಲಾಜಿಸ್ಟಿಕ್ ಮೇಲೆ ದಾಳಿ ನಡೆಸಿ ಹಲವು ದಾಖಲೆ ಹಾಗೂ ಮಾಹಿತಿ ಕಲೆ ಹಾಕಿದ್ದರು.
ಬೇಲೆಕೇರಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಿಬಿಐ ಅಧಿಕಾರಿಗಳು ಸೆ. 13, 2012ರಂದು 5 ಎಫ್ಐಆರ್ಗಳನ್ನು ದಾಖಲಿಸಿಕೊಂಡಿದ್ದರು. ಇಂಟಿಗ್ರೇಟೆಡ್ ಲಾಜಿಸ್ಟಿಕ್, ಎಸ್ಬಿ ಲಾಜಿಸ್ಟಿಕ್, ಡ್ರೀಮ್ ಲಾಜಿಸ್ಟಿಕ್, ಮಲ್ಲಿಕಾರ್ಜುನ ಶಿಪ್ಪಿಂಗ್ ಲಾಜಿಸ್ಟಿಕ್ ಸೇರಿದಂತೆ ಐದು ಕಂಪನಿಗಳು ಮೇಲೆ ಸಿಬಿಐ ಐಎಫ್ಆರ್ ದಾಖಲಿಸಲಾಗಿತ್ತು. ಮೊದಲ ಹಂತದಲ್ಲೇ ಎಸ್ಬಿ ಲಾಜಿಸ್ಟಿಕ್ ಕಂಪನಿ ಮೇಲೆ ಸಿಬಿಐನ ವಿಶೇಷ ನ್ಯಾಯಾಲಯದಲ್ಲಿ ದೋಷಾರೋಪಣ ಪಟ್ಟಿಯನ್ನು ಸಲ್ಲಿಕೆ ಮಾಡಲಾಗಿತ್ತು. ಅದರಲ್ಲಿ ನಾಗೇಂದ್ರ ಅವರ ಈಗಲ್ ಟ್ರೇಡರ್ಸ್ ಅಂಡ್ ಲಾಜಿಸ್ಟಿಕ್ ಕಂಪನಿ ಮಾಡಿರುವ ವ್ಯಹಾರವನ್ನು ಪ್ರಸ್ತಾಪಿಸಲಾಗಿದೆ. ಎಸ್ಬಿ ಲಾಜಿಸ್ಟಿಕ್ ಕೆ. ಜನಾರ್ದನ ರೆಡ್ಡಿ ಹಾಗೂ ಭೀಮರಾಜು ಎನ್ನುವವರಿಗೆ ಸೇರಿದ್ದು, ಈ ಕಂಪನಿ ಜ.1, 2009ರಿಂದ ಜ. 30, 2010ರ ವರೆಗೆ ರು. 511,23,84,609 ವ್ಯವಹಾರ ಮಾಡಿದೆ. ಕಂಪನಿ ಬೇಲೇಕೇರಿ ಅದಿರು ಬಂದರ್ಗೆ ರು. 6.05 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಲಾಗಿದೆ ಎಂದು ಸಿಬಿಐ ದೋಷಾರೋಪಣ ಪಟ್ಟಿಯಲ್ಲಿ ತಿಳಿಸಿದೆ.
ಎಸ್ಬಿ ಲಾಜಿಸ್ಟಿಕ್ ಇದೊಂದು ಅದಿರು ರಫ್ತು ಕಂಪನಿಯಾಗಿದ್ದು, ಟ್ರೇಡಿಂಗ್ ಕಂಪನಿಗಳಿಂದ ಅದಿರು ಖರೀದಿ ಮಾಡಿ, ಬಂದರ್ಗೆ ಅದಿರನ್ನು ರಫ್ತು ಮಾಡುತ್ತಿತ್ತು. ಆಗ ಶಾಸಕ ನಾಗೇಂದ್ರ ಹಾಗೂ ನಾಗರಾಜ್ ಒಡೆತನಕ್ಕೆ ಸೇರಿದ ಈಗಲ್ ಟ್ರೇಡರ್ಸ್ ಬಳಿ ಅದಿರು ಖರೀದಿ ಮಾಡಲು ಮುಂದಾಗುತ್ತದೆ.
ಎಸ್ಬಿ ಲಾಜಿಸ್ಟಿಕ್ ಮಾಲೀಕರು ಶಾಸಕ ನಾಗೇಂದ್ರಗೆ ಈ ವಿಷಯವನ್ನು ತಿಳಿಸಿದಾಗ, ನಾಗೇಂದ್ರ ಅವರು ಜನಾರ್ದನ ರೆಡ್ಡಿ ಅವರೊಂದಿಗೆ ಚರ್ಚಿಸಿ, ರೆಡ್ಡಿ ಯಾವ ಯಾವ ಸ್ಟಾಕ್ ಯಾರ್ಡ್ಗಳಲ್ಲಿ ಹಾಗೂ ಗಣಿ ಕಂಪನಿಗಳಲ್ಲಿ ಅದಿರು ಸಂಗ್ರಹವಿದೆ ಎಂಬ ಮಾಹಿತಿ ಪಡೆಯತ್ತಾರೆ. ಬಳಿಕ ಅದಿರು ಮಾರಾಟಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದು ನಾಗೇಂದ್ರ ಮೇಲಿರುವ ಆರೋಪವಾಗಿದೆ. ಅದಿರು ಖರೀದಿಸಲು ಎಸ್ಬಿ ಲಾಜಿಸ್ಟಿಕ್ನವರು ಮುಂಗಡವಾಗಿ ಈಗಲ್ ಟ್ರೇಡರ್ಸ್ಗೆ 151,82,95,250 ನೀಡುತ್ತಾರೆ. ಈ ಹಣವನ್ನು ರೆಡ್ಡಿ ಆಪ್ತರಾದ ಚಿತ್ತಾಲ ಶ್ರೀನಿವಾಸ ರೆಡ್ಡಿ, ಮುರಳೀ ಅವರಿಗೆ ನೀಡಲಾಗುತ್ತದೆ. ಈ ಹಣವು 18 ಬೇನಾಮಿ ಕಂಪನಿಗಳ ಹೆಸರಿಗೆ ಬಳ್ಳಾರಿ ಹಾಗೂ ಹೊಸಪೇಟೆ ಬ್ಯಾಂಕ್ಗಳ ಖಾತೆಗೆ ಜಮಾ ಆಗುತ್ತದೆ. ಈ ಅಕ್ರಮವನ್ನು ಸಿಬಿಐ ತನ್ನ ಚಾರ್ಜ್ಶೀಟ್ನಲ್ಲಿ ತಿಳಿಸಿದೆ.
ಇತ್ತೀಚಿಗಷ್ಟೇ ಶಾಸಕ ನಾಗೇಂದ್ರ ಜನಾರ್ದನ ರೆಡ್ಡಿ ಪಾಳಯದಿಂದ ದೂರ ಉಳಿದಿದ್ದರು. ನಾಗೇಂದ್ರ ಬೇಲೆಕೇರಿ ಅದಿರು ರಫ್ತು ಮಾಡಿರುವ ಆರೋಪ ಎದುರಿಸುತ್ತಿದ್ದಾರೆ. ಸುಮಾರ 13 ಸ್ಟಾಕ್ಯಾರ್ಡ್ನಿಂದ ಅದಿರನ್ನು ಎಸ್ಬಿ ಲಾಜಿಸ್ಟಿಕ್ಗೆ ಸಾಗಾಣಿಕೆ ಮಾಡಲಾಗಿತ್ತು. ಹೀಗೆ ಅಕ್ರಮ ಸಾಗುತ್ತದೆ.
ಕೇವಲ ಎಸ್ಬಿ ಲಾಜಿಸ್ಟಿಕ್ ಕಂಪನಿ ಮೇಲೆ ಮಾತ್ರ ಸಿಬಿಐ ಅಧಿಕಾರಿಗಳು ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದು, ಇನ್ನು ನಾಲ್ಕು ಎಫ್ಐಆರ್ ಮೇಲೆ ತನಿಖೆ ನಡೆಸುತ್ತಿದ್ದು, ಈ ಪ್ರಕರಣದಲ್ಲಿ ಶಾಸಕರು ಆರೋಪ ಎದುರಿಸುತ್ತಿದ್ದು, ಮುಂದಿನ ದೋಷಾರೋಪ ಪಟ್ಟಿಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
-ಶಶಿಧರ ಮೇಟಿ