ಕುಶಲ ಕಲೆಗಳ ಮೂಲಕ ಹಣ ಗಳಿಸಿ: ಜಿ. ಉಮೇಶ
ಕೂಡ್ಲಿಗಿ: ಗ್ರಾಮೀಣ ಭಾಗದ ಮಹಿಳೆಯರು ಕೃಷಿ ಜತೆಗೆ ಉಪ ಕಸಬುಗಳ ಬಗ್ಗೆ ತರಬೇತಿ ಪಡೆದು ಕೃಷಿ ಚಟುವಟಿಕೆಗಳು ಮುಗಿದ ನಂತರ ಬಿಡುವಿನ ದಿನಗಳಲ್ಲಿ ಮನೆಯಲ್ಲಿಯ ಕುಶಲ ಕಲೆಗಳ ಮೂಲಕ ಹಣ ಗಳಿಸಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದು ಸುರಭಿ ಸಂಸ್ಥೆ ಅಧ್ಯಕ್ಷ ಜಿ. ಉಮೇಶ ತಿಳಿಸಿದರು.
ಅವರು ತಾಲೂಕಿನ ಗುಂಡಿನಹೊಳೆಯಲ್ಲಿ ಜಲಾಯನ ಇಲಾಖೆ, ಸುರುಭಿ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ಕೌಶಲ್ಯಾಧಾರಿತ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವ ಸಹಾಯ ಸಂಘದ ಮಹಿಳೆಯರು ಕೌಶಲ್ಯ ತರಬೇತಿಯಲ್ಲಿ ಭಾಗವಹಿಸಿ ದಿನಕ್ಕೆ ನೂರೈವತ್ತರಿಂದ ಇನ್ನೂರು ರುಪಾಯಿ ವರೆಗೆ ಹಣ ಗಳಿಸಬಹುದು. ಉಪ ಕಸುಬುಗಳಿಗೆ ಸರ್ಕಾರದಿಂದ ಸಿಗುವ ಪುನಶ್ಚೇತನ ಸಾಲ ಪಡೆದು ಉತ್ತಮ ಜೀವನ ಕಂಡುಕೊಳ್ಳಬಹುದು. ಸ್ತ್ರೀ ಶಕ್ತಿ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನ ವಸ್ತುಗಳನ್ನು ನಮ್ಮ ಸಂಸ್ಥೆ ಸೂಕ್ತ ಬೆಲೆಗೆ ಕೊಂಡುಕೊಳ್ಳಲಿದ್ದು ವಸ್ತುಗಳಿಗೆ ಮಾರುಕಟ್ಟೆ ಸಮಸ್ಯೆ ಬರುವುದಿಲ್ಲ ಎಂದರು.
ಜಲಾನಯನ ಇಲಾಖೆ ಸಹಾಯಕ ನಿರ್ದೇಶಕ ಜಂಬಣ್ಣ, ಚೌಡಪುರ ಗ್ರಾಪಂ ಅಧ್ಯಕ್ಷೆ ಹನುಮಕ್ಕ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಸದಸ್ಯೆ ಮೀನಾಕ್ಷಮ್ಮ ವಿಠೋಬಯ್ಯ, ತಾಲೂಕು ಜಲಾನಯನ ಅಧಿಕಾರಿ ಜಿ. ವಾಮದೇವ, ಸೂಲದಹಳ್ಳಿ ರಾಜಣ್ಣ, ಸಂಪನ್ಮೂಲ ವ್ಯಕ್ತಿ ಶ್ರೀನಿವಾಸ್ ಇದ್ದರು. ನಂದಿನಿ, ಭಾರತಿ ಪ್ರಾರ್ಥಿಸಿದರು. ಶಿಬಿರಾಧಿಕಾರಿ ಶಂಕ್ರರಯ್ಯಸ್ವಾಮಿ ನಿರೂಪಿಸಿದರು.