ಸಂಸ್ಕೃತಿ ಶ್ರೀಮಂತ: ಸಮಸ್ಯೆ ಜ್ವಲಂತ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಅ. 4
ಕಲ್ಯಾಣಿ ಚಾಲುಕ್ಯರು ಅರಸರಿಂದ ಇಂದಿನ ಸುಸಂಸ್ಕೃತ ರಾಜಕಾರಣಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ. ಪ್ರಕಾಶ ವರೆಗೂ ಮಲ್ಲಿಗೆ ನಾಡೆಂಬ ಹೆಗ್ಗಳಿಕೆ ಹೊಂದಿರುವ ಹೂವಿನಹಡಗಲಿ ವಿಶಿಷ್ಟ ಶ್ರೀಮಂತ ಸಂಸ್ಕೃತಿ ಹೊಂದಿದೆ. ಆದರೆ ಜ್ವಲಂತ ಸಮಸ್ಯೆಗಳಿಂದ ಇಂದಿಗೂ ಬಳಲುತ್ತಿದೆ.
ಪ್ರಭಾವಿ ರಾಜಕಾರಣಿಯಾಗಿದ್ದ ಎಂ.ಪಿ. ಪ್ರಕಾಶ ಸಾಕಷ್ಟು ಅನುದಾನ ತಂದು ರಾಜ್ಯದಲ್ಲೇ ಮಾದರಿ ತಾಲೂಕನ್ನು ನಿರ್ಮಾಣ ಮಾಡಬೇಕೆಂಬ ಕನಸು ಇಂದಿಗೂ ನನಸಾಗದೇ, ಸಮಸ್ಯೆಗಳಲ್ಲಿಯೇ ಜನ ಕೈ ತೊಳೆಯುವಂತಾಗಿದೆ.
ಎಂ.ಪಿ. ಪ್ರಕಾಶ ಅವರ ಉತ್ತರಾಧಿಕಾರಿ ಎಂದು ಹೇಳಿಕೊಂಡು ಹೂವಿನಹಡಗಲಿ ಕ್ಷೇತ್ರದ ರಾಜಕೀಯಕ್ಕೆ ಎಂಟ್ರಿ ಕೊಟ್ಟಿರುವ ಪಿ.ಟಿ. ಪರಮೇಶ್ವರನಾಯ್ಕ ಜಿಲ್ಲಾ ಉಸ್ತುವಾರಿ ಸಚಿವರಾಗಿ 5 ತಿಂಗಳು ಕಳೆಯುತ್ತ ಬಂದರೂ ಶಾಲು, ಸನ್ಮಾನ ಸಮಾರಂಭಗಳಲ್ಲೇ ಮುಳುಗಿದ್ದಾರೆ. ಜತೆಗೆ ಮತದಾರರಿಗೆ ಕೃತಜ್ಞತೆ ಹೇಳಲು ಪುರುಸೊತ್ತೇ ಇಲ್ಲ. ಹೀಗಾದರೆ, ಯಾರು ನಮ್ಮ ಸಮಸ್ಯೆ ಆಲಿಸುತ್ತಾರೆ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ರಸ್ತೆ ಅಗಲೀಕರಣ: ಪಟ್ಟಣದ ರಸ್ತೆ ಅಗಲೀಕರಣ ನಡೆದು 3 ವರ್ಷ ಕಳೆದರೂ ಅಗತ್ಯ ಅನುದಾನ ಕೊರತೆಯಿಂದ ಗಿಡ ಮರಗಳು ಮತ್ತು ವಿದ್ಯುತ್ ಕಂಬಗಳನ್ನು ತೆರವುಗೊಳಿಸಿಲ್ಲ. ಅಭಿವೃದ್ಧಿ ಕಾಣದೇ ಧೂಳು ತುಂಬಿರುವ ರಸ್ತೆಯೇ ಗತಿಯಾಗಿದೆ. ಅರೆಬರೆ ಅಗಲೀಕರಣವಾಗಿದ್ದರೂ ಪೂರ್ಣಗೊಳಿಸಲು ಪುರಸಭೆ ಮುಂದಾಗಿಲ್ಲ. ಜನರಿಗೆ ಕನಿಷ್ಠ ಒಂದು ಸಾರ್ವಜನಿಕ ಮೂತ್ರಾಲಯ, ಶೌಚಾಲಯ ನಿರ್ಮಾಣ ಮಾಡಿಲ್ಲ. ಇದರಿಂದ ಪಟ್ಟಣದ ಜನತೆ ಮತ್ತು ಪ್ರಯಾಣಿಕರು ಬೇಸತ್ತು ಹೋಗಿದ್ದಾರೆ. ಹೆಸರಿಗೆ ರಾಜ್ಯ ಹೆದ್ದಾರಿಯಂತಿರುವ ರಸ್ತೆಗಳ ಅಭಿವೃದ್ಧಿಯಾಗಿಲ್ಲ. ಸಂಬಂಧಿಸಿದ ಇಲಾಖೆ ಸರಿಯಾಗಿ ನಿರ್ವಹಿಸದಿರುವುದರಿಂದ ತಗ್ಗು ಗುಂಡಿಗಳ ರಸ್ತೆಯೇ ಗತಿಯಾಗಿದೆ. ಇನ್ನು ಹಳ್ಳಿ ರಸ್ತೆಗಳ ಸ್ಥಿತಿಯಂತೂ ಆ ದೇವರಿಗೆ ಪ್ರೀತಿ.
ಅತಂತ್ರ ಸಂತ್ರಸ್ತರು: ತಾಲೂಕಿನ ಮದಲಗಟ್ಟಿ, ಮಾಗಳದ ಬಸ್ತಿ ಓಣಿ, ಬಡ್ಡರಗೇರಿ ಸಂತ್ರಸ್ತರಿಗೆ ಕಳೆದ 4 ವರ್ಷಗಳಿಂದ ಆಸರೆ ಮನೆ ನೀಡುತ್ತೇವೆ ಎಂದು ಸರ್ಕಾರ ಮೂಗಿಗೆ ತುಪ್ಪ ಹಚ್ಚುತ್ತ ಬಂದಿದೆ. ಆದರೆ ಸಂತ್ರಸ್ತರ ನೋವು, ನಲಿವು ಆಲಿಸುವವರಿಲ್ಲದೇ ಅದೇ ಅಳಿದುಳಿದ ಮನೆಗಳಲ್ಲಿ ಜೀವ ಕೈಯಲ್ಲಿ ಹಿಡಿದುಕೊಂಡು ಜೀವಿಸುವಂತಾಗಿದೆ. ಇವರ ಕಷ್ಟ ಯಾವ ಶತ್ರುವಿಗೂ ಬೇಡ ಎನ್ನುವಂತಾಗಿದೆ. ಮನೆಗಳ ಕಾಮಗಾರಿ ಅರೆಬರೆಯಾಗಿದ್ದು, ಸಂಪೂರ್ಣ ಕಳಪೆ ಮಟ್ಟದ್ದಾಗಿದೆ. ಹೀಗಿದ್ದರೂ ಸಚಿವರು ಭೇಟಿ ನೀಡಿ ಸಂತ್ರಸ್ತರ ಸಮಸ್ಯೆ ಆಲಿಸಿ, ನೆರವಿಗೆ ಬಂದಿಲ್ಲ.
ನೀರಾ'ವರಿ': ಸಿಂಟಾಲೂರು ಏತ ನೀರಾವರಿ ಯೋಜನೆ ಈ ಭಾಗದ ರೈತರಿಗೆ ಜೀವಾಳ. ಆದರೆ, ಕೆಲವು ಕಡೆಗಳಲ್ಲಿ ಅವೈಜ್ಞಾನಿಕ ಕಾಲುವೆ ನಿರ್ಮಾಣದಿಂದ ರೈತರ ಜಮೀನುಗಳಿಗೆ ನೀರುಣಿಸಲು ಹರಸಾಹಸ ಪಡಬೇಕಿದೆ. ಅಧಿಕಾರವಿಲ್ಲದ ಸಮಯದಲ್ಲಿ ಸಚಿವರು ಕಾಲುವೆ ಕಾಮಗಾರಿ ಕಳಪೆಯಾಗಿದೆ ಎಂದು ಆರೋಪಿಸಿದ್ದರು. ಅಧಿಕಾರ ಬಂದಾಗ ಕ್ರಮಕೈಗೊಂಡು ರೈತರಿಗೆ ನೆರವಾಗಿಲ್ಲ.
ಬಲದಂಡೆ ಭಾಗದ ಅಲ್ಲಿಪುರ ಸಂತ್ರಸ್ತರ ಸ್ಥಳಾಂತರ ಗ್ರಾಮದಲ್ಲಿ ನಿವೇಶನ ಹಂಚಿಕೆ, ಚರಂಡಿ ನಿರ್ಮಾಣ, ರಸ್ತೆ, ವಿದ್ಯುತ್ ಸಂಪರ್ಕ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲಭೂತ ಸೌಕರ್ಯಗಳ ಕಾಮಗಾರಿ ಆಮೆಗತಿಯಲ್ಲಿ ನಡೆದಿದ್ದರೂ ಸಚಿವರು ಕ್ರಮಕೈಗೊಂಡಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಹಾಗೂ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸ್ಥಾನ ಹೂವಿನಹಡಗಲಿ ತಾಲೂಕಿಗೆ ದಕ್ಕಿದರಿಂದ ರಾಜಕೀಯ ಶಕ್ತಿ ಕೇಂದ್ರವಾಗಿದೆ ಇನ್ನೇನು ಹೂವಿನಹಡಗಲಿ ಸಾಕಷ್ಟು ಅಭಿವೃದ್ಧಿಯಾಗುತ್ತದೆ ಎಂದು ಜನತೆ ಕನಸು ಕಾಣುತ್ತಿದ್ದಾರೆ. ಮತದಾರರ ಕನಸನ್ನು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ನನಸು ಮಾಡುವರೋ ಎನ್ನುವುದನ್ನು ಕಾದು ನೋಡಬೇಕು.
ಅಗಲೀಕರಣದಿಂದ ರಸ್ತೆ ಧೂಳು, ತಗ್ಗು ಗುಂಡಿಗಳ ಕೂಡಿದೆ. ಇದರ ಕಷ್ಟ-ನಷ್ಟ ಕಾರಿನಲ್ಲಿ ಗ್ಲಾಸ್ ಏರಿಸಿಕೊಂಡು ಹೋಗುವ ಸಚಿವರಿಗೆ ಅರ್ಥವಾಗಿಲ್ಲ. ಒಂದು ಬಾರಿ ಪಟ್ಟಣದಲ್ಲಿ ಪಾದಯಾತ್ರೆ ಮಾಡಿ ಪಟ್ಟಣದ ಜನತೆಯ ನೋವು ಆಲಿಸಲಿ. ರಸ್ತೆ ಅಗಲೀಕರಣಕ್ಕೆ ಅಗತ್ಯ ಅನುದಾನ ಬಿಡುಗಡೆ ಮಾಡಿಸಲಿ
- ಎಚ್. ಪೂಜೆಪ್ಪ,
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ
-ಚಂದ್ರು ಕೊಂಚಿಗೇರಿ