ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಾರ್ಣಿಕ: ಗೊರವಪ್ಪನ ಮಗ ನೇಮಕ

Vishwanath S
Updated On : 6 Oct 2013, 11:28 am

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಅ. 5
ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನಕ್ಕೆ ಕಾರ್ಣಿಕ ನುಡಿಯುವ ಗೊರವಪ್ಪನ ನೇಮಕ ಕುರಿತ ವಿವಾದ ಸುಖಾಂತ್ಯ ಕಂಡಿದ್ದು, ಈಗಿರುವ ಗೊರವಪ್ಪನ ಮಗನನ್ನೇ ಕಾರ್ಣಿಕ ನುಡಿಯಲು ನೇಮಕ ಮಾಡಲಾಗಿದೆ ಎಂದು ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಮಾಜಿ ಸಚಿವ ಈ.ಟಿ. ಶಂಭುನಾಥ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತ, ಕಾಗಿನೆಲೆ ಕನಕ ಗುರುಪೀಠ ಹಾಗೂ ಮೈಲಾರದ ಕಪಿಲಮುನಿ ಪೀಠಗಳ ನಡುವೆ ಯಾವುದೇ ವೈಮನಸ್ಸು ಉಂಟಾಗಿಲ್ಲ. 3ನೇ ವ್ಯಕ್ತಿಗಳಿಂದ ವಿವಾದ ಸೃಷ್ಟಿಯಾಗಿದೆ. ಅವರ ನಮ್ಮ ನಡುವಿನ ಸಂಬಂಧ ಹಳಸಿಲ್ಲ ಎಂದರು.
ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿಯುತ್ತಿದ್ದ ಮಾಲತೇಶಪ್ಪ ಮಲ್ಲಪ್ಪ ಕಾರ್ಣಿಕದ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಕಾರ್ಣಿಕ ನುಡಿಯಲು ಅಸಾಧ್ಯವಾಗಿರುವ ಹಿನ್ನೆಲೆಯಲ್ಲಿ ಅವರ ವಂಶಸ್ಥರನ್ನೇ ನೇಮಕ ಮಾಡಿಕೊಳ್ಳಬೇಕಿತ್ತು. ಆದರೆ, ಇದರಲ್ಲಿ ಕೆಲವರು ಗೊಂದಲ ಸೃಷ್ಟಿಸಿದ್ದಾರೆ.
ಈ ಹಿಂದೆ ಗೊರವಪ್ಪ ನೇಮಕಾತಿ ಮಾಡುವ ವಿಚಾರದಲ್ಲಿ ಮಾಲತೇಶಪ್ಪನ ಮಗ ದೇವಸ್ಥಾನಕ್ಕೆ ಅರ್ಜಿ ಸಲ್ಲಿಸದ ಕಾರಣ ಅವರನ್ನು ಬಿಟ್ಟು ಅದೇ ವಂಶಸ್ಥರನ್ನು ನೇಮಕ ಮಾಡಲು ತಯಾರಿ ನಡೆದಿತ್ತು. ನಂತರದಲ್ಲಿ ಅ. 4ರಂದು ಅರ್ಜಿ ಸಲ್ಲಿಸಲು ಆಹ್ವಾನಿಸಲಾಗಿತ್ತು. ಆ ಸಂದರ್ಭದಲ್ಲಿ ಮಾಲತೇಶಪ್ಪನ ಎರಡನೇ ಮಗ ಕೃಷ್ಣಪ್ಪ ಸೇರಿದಂತೆ ಒಟ್ಟು ನಾಲ್ವರು ಅರ್ಜಿ ಸಲ್ಲಿಸಿದ್ದರು.
ದೇವಸ್ಥಾನದ ಪರಂಪರೆಯಂತೆ ವಂಶಸ್ಥರನ್ನೇ ಆಯ್ಕೆ ಮಾಡಿ ನೇಮಕ ಮಾಡಬೇಕೆಂಬ ನಿರ್ಧಾರಕ್ಕೆ ಬರಲಾಯಿತು. ಮಾಲತೇಶಪ್ಪನ ಮಗ ಕೃಷ್ಣಪ್ಪನ ಹೆಸರನ್ನು 2014ರ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿಯಲು ಘೋಷಣೆ ಮಾಡಲಾಗುವುದು ಎಂದರು.
ಮೈಲಾರಲಿಂಗೇಶ್ವರನ ಜನ್ಮದಿನ ಎಂದು ಕರೆಯಲಾಗುವ ಡಿ. 8ರಂದು ದೇವಸ್ಥಾನದ ಆವರಣದಲ್ಲಿ ಭಂಡಾರದ ಸೃಷ್ಟಿಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಂದು ಕೃಷ್ಣಪ್ಪನಿಗೆ ದೀಕ್ಷೆ ನೀಡುವುದಾಗಿ ತಿಳಿಸಿದರು. ಕಾಗಿನೆಲೆ ಕನಕ ಗುರುಪೀಠದ ಶ್ರೀಗಳ ಜತೆಗೆ 2-3 ದಿನಗಳಲ್ಲಿ ಉಭಯ ಕುಶಲೋಪರಿ, ಮುಕ್ತ ಮಾತುಕತೆ ನಡೆಯಲಿದೆ. ಆ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಪರಿಹಾರ ಕಂಡುಕೊಂಡು ದೇವಸ್ಥಾನದ ಅಭಿವೃದ್ಧಿಗೆ ಪೂರಕವಾಗುವಂತೆ ವಾತಾವರಣ ಸೃಷ್ಟಿ ಮಾಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಸಚಿವ ಈ.ಟಿ. ಶಂಭುನಾಥ ಮಾತನಾಡಿ, ಕಾರ್ಣಿಕ ನುಡಿಯುವ ಗೊರವಪ್ಪ ಮೂಲತಃ ಬಡ ಹಾಗೂ ಮುಗ್ಧರಾಗಿದ್ದು, ಅವರ ಕುಟುಂಬದವರ ವಾಸಕ್ಕೆ ಯೋಗ್ಯವಾದ ನಿವೇಶನ ಹಾಗೂ ಮನೆ ಇಲ್ಲ. ಆದರಿಂದ ಮೈಲಾರಲಿಂಗೇಶ್ವರ ದೇವಸ್ಥಾನದ ಪಕ್ಕದಲ್ಲಿರುವ ಹೆಗ್ಗಪ್ಪ ದೇವಸ್ಥಾನದ ಹತ್ತಿರ ನಿವೇಶನ ಹಂಚಿಕೆ ಮಾಡಬೇಕೆಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿ ಎಂದು ಮನವಿ ಮಾಡಿದರು.
ನಿವೇಶನ ನೀಡಿದ ಅನಂತರದಲ್ಲಿ ಮೈಲಾರಲಿಂಗೇಶ್ವರ ಭಕ್ತರಿಂದ ದಾನ ಪಡೆದು ಗೊರವಪ್ಪನಿಗೆ ವಾಸಕ್ಕೆ ಉತ್ತಮವಾಗಿರುವ ಮನೆ ನಿರ್ಮಾಣ ಮಾಡುತ್ತೇವೆ ಎಂದು ಹೇಳಿದರು. ಈ ಬೇಡಿಕೆಗೆ ಸ್ಪಂದಿಸಿದ ದೇವಸ್ಥಾನದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಸರ್ಕಾರ ಮನವಿ ಕಳುಹಿಸಿಕೊಡಲಾಗುವುದು ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಎಂ. ಪರಮೇಶ್ವರಪ್ಪ ವಕೀಲರು, ಗುರುವಿನ ಕೊಟ್ರಯ್ಯ, ಮಲ್ಲಿಕಾರ್ಜುನ ಹಾಸನ, ಬಾಲಚಂದ್ರ ಒಡೆಯರ್, ವಸಂತ ಒಡೆಯರ್, ಬಿ. ಹನುಮಂತಪ್ಪ, ಶಿಕ್ಷಕ ಪ್ರಕಾಶ, ಫಕ್ಕೀರಪ್ಪ, ಡಿ. ವಿರೂಪಣ್ಣ ಮತ್ತಿತರರಿದ್ದರು.
 ಮಾಲತೇಶಪ್ಪನ ಮಗ ಕೃಷ್ಣಪ್ಪನ ಹೆಸರನ್ನು 2014ರ ಮೈಲಾರಲಿಂಗೇಶ್ವರ ಜಾತ್ರೆಯಲ್ಲಿ ಕಾರ್ಣಿಕ ನುಡಿಯಲು ಘೋಷಣೆ ಮಾಡಲಾಗುವುದು. ಮೈಲಾರಲಿಂಗೇಶ್ವರನ ಜನ್ಮದಿನ ಎಂದು ಕರೆಯಲಾಗುವ ಡಿ. 8ರಂದು ದೇವಸ್ಥಾನದ ಆವರಣದಲ್ಲಿ ಭಂಡಾರದ ಸೃಷ್ಟಿಯ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ಅಂದು ಕೃಷ್ಣಪ್ಪನಿಗೆ ದೀಕ್ಷೆ ನೀಡಲಾಗುವುದು. ಕಾಗಿನೆಲೆ ಕನಕ ಗುರುಪೀಠದ ಶ್ರೀಗಳ ಜತೆಗೆ ಮುಕ್ತ ಮಾತುಕತೆ ನಡೆಯಲಿದೆ. ಆ ಮೂಲಕ ಸಮಸ್ಯೆಯನ್ನು ಬಗೆಹರಿಸಿ ಪರಿಹಾರ ಕಂಡುಕೊಳ್ಳಲಾಗುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement