ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಕಚೇರಿ ಸ್ಥಳಾಂತರಿಸಿದರೆ ಸಚಿವರಿಗೆ ಘೇರಾವ್: ಶಾಸಕರ ಎಚ್ಚರಿಕೆ

Lingaraj Badiger
Updated On : 7 Oct 2013, 11:22 am

ಹಗರಿಬೊಮ್ಮನಹಳ್ಳಿ: ಹಗರಿಬೊಮ್ಮನಹಳ್ಳಿಗೆ ಮಂಜೂರಾಗಿರುವ ಜೆಸ್ಕಾಂ ವಿಭಾಗೀಯ ಕಚೇರಿ ಎತ್ತಂಗಡಿಗೆ ಪ್ರಯತ್ನಿಸಿದ್ದೇ ಆದರೆ ಕಾರ್ಮಿಕ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಅವರಿಗೆ  ಘೇರಾವ್ ಹಾಕಲಾಗುವುದು ಎಂದು ಶಾಸಕ ಎಸ್. ಭೀಮಾನಾಯ್ಕ ಎಚ್ಚರಿಕೆ ನೀಡಿದ್ದಾರೆ.
ಶನಿವಾರ ರಾತ್ರಿ ಪಟ್ಟಣದ ಕೆಚ್ಚಿನಬಂಡಿ ರಸ್ತೆಯಲ್ಲಿನ ವೀರಶೈವ ಪಂಚಮಸಾಲಿ ನಿವೇಶನದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಿತ್ತೂರು ರಾಣಿಚನ್ನಮ್ಮ ಸಮುದಾಯ ಭವನದ ಕಾಮಗಾರಿ ವೀಕ್ಷಿಸಿದ ಅನಂತರ ಮಾತನಾಡಿ, ತಮ್ಮ ಕ್ಷೇತ್ರಕ್ಕೆ ವಿಭಾಗೀಯ ಕಚೇರಿ ಬೇಕೆಂದರೆ ಸರ್ಕಾರದ ಮೇಲೆ ಒತ್ತಡ ಹಾಕಿ ಇನ್ನೊಂದು ವಿಭಾಗೀಯ ಕಚೇರಿಯನ್ನು ಮಂಜೂರು ಮಾಡಿಸಿಕೊಳ್ಳಲಿ ಎಂದು ಸವಾಲು ಹಾಕಿದರು.
ವಸತಿ ಯೋಜನೆ ಜಾರಿಗೆ ರಾಜೀವ ಗಾಂಧಿ ವಸತಿ ನಿಗಮ ಕಟ್ಟುನಿಟ್ಟಿನ ಮಾರ್ಗಸೂಚಿ ಜಾರಿಗೊಳಿಸಿದೆ. ಸರ್ಕಾರ ಮತ್ತು ನಿಗಮದ ಮಾರ್ಗದರ್ಶನದಂತೆ ಕ್ಷೇತ್ರದಲ್ಲಿ ವಸತಿ ಯೋಜನೆಯನ್ನು ಜಾರಿಗೊಳಿಸುವಂತೆ ಸಂಬಂಧಿಸಿದ ಗ್ರಾಪಂ ಪಿಡಿಒಗಳಿಗೆ ಈಗಾಗಲೆ ಸ್ಪಷ್ಟವಾಗಿ ಸೂಚಿಸಿದ್ದೇನೆ. ಜಾಗೃತಿ ಸಮಿತಿ ಅಧ್ಯಕ್ಷನಾಗಿರುವ ನಾನು, ಈ ಸಲ ವಸತಿ ಯೋಜನೆಯಲ್ಲಿ ಹಿಂದಿನಂತೆ ಭ್ರಷ್ಟಾಚಾರ ನಡೆಯಲು ಅಸ್ಪದ ನೀಡುವುದಿಲ್ಲ. ಅಲ್ಲದೆ ಮನೆಗಳನ್ನು ಐದು ಇಲ್ಲವೆ ಹತ್ತು ಸಾವಿರ ರುಪಾಯಿಗೆ ಮಾರಿಕೊಳ್ಳಲು ಮಧ್ಯವರ್ತಿಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ನೇರವಾಗಿ ಫಲಾನುಭವಿಗಳ ಕೈಗೆ ಮನೆ ನಿರ್ಮಾಣದ ಚೆಕ್ ಸೇರುವಂತೆ ವ್ಯವಸ್ಥೆ ಮಾಡುವೆ ಎಂದರು.
ಮಾಲ್ವಿ ಡ್ಯಾಂ ಸೇರಿದಂತೆ ಕ್ಷೇತ್ರದಲ್ಲಿ ಅಗತ್ಯ ಇರುವ ಎಲ್ಲ ಏತನೀರಾವರಿ ಯೋಜನೆಗಳ ಜಾರಿಗೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ಪ್ರಾಮಾಣಿಕ ಪ್ರಯತ್ನ ಮುಂದುವರೆಸಿರುವೆ. ಈ ಸಂಬಂಧ ಅಧಿಕಾರಿಗಳಿಗೆ ಈಗಾಗಲೆ ಪ್ರಸ್ತಾವನೆ ತಯಾರಿಸಲು ಸೂಚಿಸಿರುವೆ ಎಂದರು.
ಸಮಾಜದ ತಾಲೂಕಾಧ್ಯಕ್ಷ ಅಕ್ಕಿ ಶಿವಣ್ಣ ಅಧ್ಯಕ್ಷತೆ ವಹಿಸಿದ್ದರು. ನಿಕಟಪೂರ್ವ ರಾಜ್ಯಾಧ್ಯಕ್ಷ ಬಾವಿ ಬೆಟ್ಟಪ್ಪ, ಯುವ ಘಟಕದ ರಾಜ್ಯಾಧ್ಯಕ್ಷ ಹನಸಿ ಸಿದ್ದೇಶ್, ಸಮಾಜದ ಮುಖಂಡರಾದ ಕಂದಗಲ್ ನೀಲಕಂಠಪ್ಪ, ಎಚ್.ಪಿ. ಶಿವಶಂಕರಗೌಡ, ವೀರಭದ್ರಪ್ಪ, ಯುವ ಘಟಕದ ತಾಲೂಕಾಧ್ಯಕ್ಷ ಬ್ಯಾಡಗಿ ರಾಜೇಶ್, ಜಿಪಂ ಸದಸ್ಯ ರೋಗಾಣಿ ಹುಲುಗಪ್ಪ, ಬನ್ನಿಗೋಳ ವೆಂಕಣ್ಣ, ಗಂಡಿ ಬಸವರಾಜ, ಸಂಪತ್‌ಕುಮಾರ, ತಾಪಂ ಇಒ ಕೇಣಿ ಬಸಪ್ಪ, ಜೆಸ್ಕಾಂ ಎಇಇ ಮೋಟ್ಲಾನಾಯ್ಕ, ಎಇ ಪ್ರಭು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement