ಅವ್ಯವಸ್ಥೆ ಸರಿಪಡಿಸಲು ಆಗ್ರಹ
ಬಳ್ಳಾರಿ: ತಾಲೂಕಿನ ಕುಡಿತಿನಿ ಬಳಿಯ ಶಾತವಾಹನ ಕಾರ್ಖಾನೆಯಲ್ಲಿನ ಅವ್ಯವಸ್ಥೆ ಸರಿಪಡಿಸಬೇಕು ಮತ್ತು ಕಾರ್ಖಾನೆಯ ಕಾರ್ಮಿಕರಿಗೆ ಮೂಲ ಸೌಲಭ್ಯ ಕಲ್ಪಿಸಲು ಮಾಲೀಕರಿಗೆ ಆದೇಶಿಸುವಂತೆ ಒತ್ತಾಯಿಸಿ ನವಕರ್ನಾಟಕ ಯುವಶಕ್ತಿ ಸಂಘಟನೆ ಕಾರ್ಯಕರ್ತರು ಜಿಲ್ಲಾ ಕೈಗಾರಿಕಾ ಸಂಸ್ಥೆಯ ಜಂಟಿ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.
ಮೂಲ ಸೌಕರ್ಯ ಕಲ್ಪಿಸುವಲ್ಲಿ ವಿಫಲವಾಗಿರುವ ಶಾತವಾಹನ ಕಾರ್ಖಾನೆ ಕಾರ್ಮಿಕರನ್ನು ವಂಚಿಸುತ್ತಿದೆ. ನಿಯಮದಂತೆ ಕಾರ್ಮಿಕರಿಗೆ ಒದಗಿಸಬೇಕಾದ ಕುಡಿವ ನೀರು, ಶೌಚಾಲಯ, ಕ್ಯಾಂಟಿನ್ ವ್ಯವಸ್ಥೆ, ಆರೋಗ್ಯ ಭದ್ರತೆ ಮುಂತಾದ ಸೌಲಭ್ಯಗಳನ್ನು ಒದಗಿಸಬೇಕೆಂಬ ಸರ್ಕಾರದ ನಿಯಮಗಳನ್ನು ಗಾಳಿಗೆ ತೂರಿದೆ. ಇದರಿಂದ ಕಾರ್ಮಿಕರು ನಿತ್ಯ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಕುಡಿಯಲು ಮನೆಯಿಂದಲೇ ನೀರು ಹೊತ್ತೊಯ್ಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರ್ಖಾನೆ ಆವರಣದಲ್ಲಿ ಸೂಕ್ತ ಹೋಟೆಲ್ ವ್ಯವಸ್ಥೆ ಇಲ್ಲ. ಧೂಳಿನಿಂದ ರಕ್ಷಣೆಗಾಗಿ ಮುಖಕ್ಕೆ ಹಾಕಿಕೊಳ್ಳುವ ಮಾಸ್ಕ್ ನೀಡಿಲ್ಲ. ಸುರಕ್ಷಿತ ಕನ್ನಡಕ ವಿತರಿಸಿಲ್ಲ. ಹೀಗಾಗಿ ಮಾಲೀಕರ, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಹೋರಾಟದ ಎಚ್ಚರಿಕೆ: ಕಾರ್ಖಾನೆಗೆ ತೆರಳುವ ರಸ್ತೆ ಸಂಪೂರ್ಣ ಹಾಳಾಗಿದ್ದು, ಒಮ್ಮೆ ಮಳೆ ಬಂದರೆ, ರಸ್ತೆಯಲ್ಲಿ ಸಂಚರಿಸುವವರ ಪರಿಸ್ಥಿತಿ ಹೇಳತೀರದು. ಇಂಥಹ ಕಾರ್ಖಾನೆಗಳನ್ನು ತಪಾಸಣೆ ಮಾಡಿದ್ದೀರಾ? ಕನಿಷ್ಟ ಸೌಲಭ್ಯ ಕಲ್ಪಿಸದ ಕಾರ್ಖಾನೆಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಕಾರ್ಯಕರ್ತರು ಮನವಿ ಸ್ವೀಕರಿಸಿದ ಅಧಿಕಾರಿಗಳನ್ನು ಪ್ರಶ್ನಿಸಿದರು. ಒಂದು ವೇಳೆ ಹತ್ತು ದಿನಗಳಲ್ಲಿ ಕಾರ್ಖಾನೆ ವಿರುದ್ಧ ಕ್ರಮಕೈಗೊಳ್ಳದೇ ಇದ್ದಲ್ಲಿ ಸಂಘಟನೆಯಿಂದ ಕಚೇರಿ ಎದುರು ಪ್ರತಿಭಟನೆ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯ ಉಪಾಧ್ಯಕ್ಷ ಸಿದ್ಮಲ್ ಮಂಜುನಾಥ, ಜಿಲ್ಲಾಧ್ಯಕ್ಷ ಬಿ. ಚಂದ್ರಶೇಖರ್ ಆಚಾರ್, ಕಾರ್ಯದರ್ಶಿ ಕೆ.ಎಂ. ಕೇದಾರ್ನಾಥ, ಉಪಾಧ್ಯಕ್ಷ ಟಿ.ಎಂ. ಸುರೇಶ್, ಸಿ. ವಿರೂಪಾಕ್ಷಿ ರೆಡ್ಡಿ, ಎಂ. ಮಂಜುನಾಥ, ಮುಂಡಾಸದ ಮಲ್ಲಿಕಾರ್ಜುನ, ಡಿ. ಮಹೇಶ್, ಮಠದ ಶಿವಲಿಂತಗಯ್ಯ ಸ್ವಾಮಿ, ಯೂಸೂಫ್, ಎಚ್. ಯಮುನಪ್ಪ ಸೇರಿದಂತೆ ಇತರರು ಇದ್ದರು.