ಸ್ವಾವಲಂಬಿ ಜೀವನ ಸಾಗಿಸಿ: ಪರಮೇಶ್ವರ ನಾಯ್ಕ
ಹಗರಿಬೊಮ್ಮನಹಳ್ಳಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಕೃಷಿ ಹಾಗೂ ಮಹಿಳಾ ಪ್ರಾಧಾನ್ಯತೆಯಲ್ಲಿ ನಡೆಸುತ್ತಿರುವ ಕಾರ್ಯಕ್ರಮ ರೈತರು ಹಾಗೂ ಮಹಿಳೆಯರಲ್ಲಿ ಉತ್ತಮ ಜಾಗೃತಿ ಮೂಡಿಸುತ್ತಿದೆ. ಈ ಯೋಜನೆಯಡಿ ಒದಗಿಸಿಕೊಡುತ್ತಿರುವ ಎಲ್ಲ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಂಡು ಸ್ವಾವಲಂಬಿಗಳಾಗಿ ಬದುಕು ರೂಪಿಸಿಕೊಳ್ಳುವ ಮೂಲಕ ದೇಶವನ್ನು ಅಭಿವೃದ್ಧಿ ಪಥದಲ್ಲಿ ಸಾಗುವಂತೆ ಮಾಡಬೇಕೆಂದು ಕಾರ್ಮಿಕ, ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಕರೆ ನೀಡಿದರು.
ತಾಲೂಕಿನ ಏಣಿಗಿ ಗ್ರಾಮದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಹಂಪಾಸಾಗರ ವಲಯದ ಪೃಥ್ವಿ ಹಾಗೂ ಚಂದನ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಸಾಕಷ್ಟು ಯೋಜನೆಗಳನ್ನು ಜಾರಿಗೊಳಿಸುತ್ತಿವೆ. ಮುಖ್ಯವಾಗಿ ಸ್ವ-ಸಹಾಯ ಸಂಘಗಳ ರಚನೆಗೆ ಅಗತ್ಯಕ್ಕಿಂತಲೂ ಅಧಿಕ ಅನುದಾನ ನೀಡುವ ಮೂಲಕ ಮಹಿಳೆಯರು ತಮ್ಮ ಕಾಲ ಮೇಲೆ ತಾವು ನಿಂತು ಬದುಕು ಸಾಗಿಸಲು ಅನುಕೂಲ ಮಾಡಿಕೊಡಲಾಗುತ್ತಿದೆ. ಸರ್ಕಾರದ ಎಲ್ಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಅರ್ಥಿಕವಾಗಿ ಸಬಲರಾಗುವಂತೆ ಮಹಿಳೆಯರಲ್ಲಿ ಮನವಿ ಮಾಡಿದರು.
ಯೋಜನೆ ಹಂಪಸಾಗರ ವಲಯದ ಮೇಲ್ವಿಚಾರಕಿ ನೇತ್ರಾವತಿ ಐ. ನಾಯ್ಕ ಯೋಜನೆ ಹಾಗೂ ಯೋಜನೆಯ ಕಾರ್ಯಕ್ರಮಗಳ ಕುರಿತು ವಿವರಿಸಿದರು. ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ತಾಪಂ ಅಧ್ಯಕ್ಷೆ ವಿಜಯಲಕ್ಷ್ಮಿ ಪೂರ್ಯನಾಯ್ಕ, ಉಪಾಧ್ಯಕ್ಷೆ ನಾಗರತ್ನಮ್ಮ ವೆಂಕಟೇಶ, ಸದಸ್ಯೆ ಭಾರತಮ್ಮ ಬೆಲ್ಲದ್, ಕೃಷಿ ಅಧಿಕಾರಿ ಎಂ.ಎಚ್. ರವಿಕುಮಾರ, ಸೇವಾ ಪ್ರತಿನಿಧಿ ಶಿಲ್ಪಾ ಮಸ್ಕಿ ಭಾಗವಹಿಸಿದ್ದರು.