5 ಮರಿಗೆ ಜನ್ಮ ನೀಡಿದ ಮೇಕೆ!
ಹೊಸಪೇಟೆ: ಆಡೊಂದು 5 ಮರಿಗಳಿಗೆ ಜನ್ಮನೀಡಿರುವ ಅಪರೂಪದ ಘಟನೆ ತಾಲೂಕಿನ ಕಮಲಾಪುರದಲ್ಲಿ ಇತ್ತೀಚಿಗೆ ನಡೆದಿದೆ.
ಕಮಲಾಪುರ ಪಟ್ಟಣದ ಜೈಭೀಮ ನಗರದ ಚೆಲುವರಾಜ ಮಲ್ಲಿಕಮ್ಮ ಎಂಬುವವರ ಮನೆಯಲ್ಲಿ ಆಡೊಂದು 5 ಮರಿಗಳಿಗೆ ಜನ್ಮನೀಡಿದ್ದು, ಐದು ಮರಿಗಳು ಆರೋಗ್ಯವಾಗಿವೆ. ಐದು ಮರಿಗಳಿಗೆ ಜನ್ಮ ನೀಡಿರುವ ಆಡು ಈ ಮೊದಲು ಪ್ರಥಮವಾಗಿ ಎರಡು ಮರಿಗಳಿಗೆ ಜನ್ಮ ನೀಡಿತ್ತು. ನಂತರ ಮೂರು ಮರಿಗಳಿಗೆ ಜನ್ಮ ನೀಡಿತ್ತು. ಆದರೆ, ಈ ಬಾರಿ ಐದು ಮರಿಗಳಿಗೆ ಜನ್ಮ ನೀಡುವ ಮೂಲಕ ವಿಶೇಷತೆ ಕಾಪಾಡಿಕೊಂಡಿದೆ.
ಆಡುಗಳು ಎರಡು ಅಥವಾ ಮೂರು ಮರಿಗಳಿಗೆ ಜನ್ಮ ನೀಡುವುದು ಸಾಮಾನ್ಯವಾಗಿದೆ. ಆದರೆ, ಹೆಚ್ಚೆಂದರೆ ನಾಲ್ಕು ಮರಿಗಳು ಆದರೆ ಈ ಆಡು ಶುಕ್ರವಾರ ಐದು ಮರಿಗಳಿಗೆ ಜನ್ಮ ನೀಡಿರುವುದರಿಂದ ಆಡು ಸಾಕಿದ ಕುಟುಂಬದರಿಗೆ ಎಲ್ಲಿಲ್ಲದ ಸಂತೋಷ ಮತ್ತು ಸಂಭ್ರಮ ಉಂಟಾಗಿದೆ. ಐದು ಆಡು ಮರಿಗಳಿಗೆ ಜನ್ಮ ನೀಡಿರುವುದರಿಂದ ಕಮಲಾಪುರ ಪಟ್ಟಣದ ಜನರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಜನರು ಆಡುಗಳನ್ನು ವೀಕ್ಷಿಸಿಕೊಂಡು ಬರುವುದು ವಿಶೇಷವಾಗಿದೆ.
ಇತ್ತೀಚಿನ ದಿನಗಳಲ್ಲಿ ರೈತರು ಆಡುಗಳನ್ನು ಸಾಕುವುದೇ ಅಪರೂಪವಾಗಿರುವ ಸಂದರ್ಭದಲ್ಲಿ ಆಡೊಂದು 5 ಮರಿಗಳಿಗೆ ಜನ್ಮ ನೀಡಿರುವುದು ಕುಟುಂಬದ ಸದಸ್ಯರಿಗೆ ಹಾಗೂ ರೈತರಿಗೆ ಸಂತೋಷ ತರಿಸಿದೆ.