ಎಮ್ಮೆಗೆ ಡಿಕ್ಕಿ: ಬೈಕ್ ಸವಾರ ಸಾವು
ಬಳ್ಳಾರಿ: ಬೈಕ್ ಸವಾರನೋರ್ವ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿ ರಸ್ತೆಯಲ್ಲಿ ಬರುತ್ತಿದ್ದ ಎಮ್ಮೆಯೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ಜರುಗಿದೆ. ರಾಧಾಕೃಷ್ಣ ಎಂಬುವವನೇ ಮೃತವ್ಯಕ್ತಿ. ಈತನು ಹಗರಿಬೊಮ್ಮನಹಳ್ಳಿ ಕಡೆಯಿಂದ ನಂದಿಬಂಡಿ ಗ್ರಾಮ ದಾಡಿ ತೆರಳುತ್ತಿದ್ದಾಗ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬೈಕ್ ಓಡಿಸಿದ್ದರಿಂದ ಈ ಘಟನೆ ಸಂಭವಿಸಿದೆ. ಈ ಕುರಿತು ಎಂ.ಎಂ. ಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಟ್ಕಾ ಚೀಟಿ: ಬಂಧನ
ಕೊಟ್ಟೂರು: ಮಟ್ಕಾ ಜೂಜಾಟದ ಚೀಟಿ ಬರೆಯುತ್ತಿದ್ದ ವ್ಯಕ್ತಿಯನ್ನು ಆತನಿಂದ ರು. 680 ವಶಪಡಿಸಿಕೊಂಡ ಘಟನೆ ಸೋಮವಾರ ನಡೆದಿದೆ. ಸಬ್ ಇನ್ಸ್‌ಪೆಕ್ಟರ್ ಗುರುರಾಜ ಎನ್. ಮೈಲಾರ ದಾಳಿ ಮಾಡಿ ಇಲ್ಲಿನ ಮುದುಕನಕಟ್ಟೆ ಪ್ರದೇಶದ ಹೂವಿನ ವ್ಯಾಪಾರಿ ಜೈನುಲ್ಲ ಎಂಬಾತನೇ ಮಟ್ಕಾ ಚೀಟಿ ಬರೆಯುತ್ತಿದ್ದ ಅಸಾಮಿ. ಈತನ ವಿರುದ್ಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಿಳೆ ನಾಪತ್ತೆ: ದೂರು
ಬಳ್ಳಾರಿ: ಕೌಲ್‌ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯೋರ್ವಳು ಕಾಣೆಯಾಗಿದ್ದಾಳೆ. ಪೂರ್ಣಿಮಾ (27) ಕಾಣೆಯಾಗಿದ್ದು, ಈಕೆ ಅ. 6ರಂದು ಬೆಳಗ್ಗೆ 9 ಗಂಟೆಗೆ ಸಂತೋಷಿ ಮಾತಾ ದೇವಸ್ಥಾನಕ್ಕೆ ಹೋಗಿ ಬರುತ್ತೇನೆಂದು ಹೇಳಿ ಹೋದವಳು ಮರಳಿ ಬಂದಿಲ್ಲ ಎಂದು ಕಾಣೆಯಾದವಳ ತಾಯಿ ಲಕ್ಷ್ಮಿದೇವಿ ಠಾಣೆಗೆ ದೂರು ನೀಡಿದ್ದಾರೆ. 5.5 ಅಡಿ ಎತ್ತರ, ತೆಳ್ಳನೆ ಮೈಕಟ್ಟು, ಗೋದಿ ಮೈಬಣ್ಣ, ಕೋಲು ಮುಖ ಹೊಂದಿರುವ ಈಕೆ ಬಿಳಿ ಬಣ್ಣದ ಸೀರೆ ಮತ್ತು ರವಿಕೆ ಧರಿಸಿದ್ದಾಳೆ. ಕನ್ನಡ, ಹಿಂದಿ, ತೆಲುಗು ಭಾಷೆ ಬಲ್ಲವಳಾಗಿದ್ದಾಳೆ. ಈಕೆಯ ಬಗ್ಗೆ ಸುಳಿವು ಸಿಕ್ಕಲ್ಲಿ ನಗರದ ಕೌಲ್‌ಬಜಾರ್ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಠಾಣೆಯ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.