ದೊರೆಯದ ಕೌನ್ಸಿಲ್ ಮಾನ್ಯತೆ: ವೈದ್ಯಕೀಯ ವಿದ್ಯಾರ್ಥಿಗಳ ಆತಂಕ
ಬಳ್ಳಾರಿ: ದಂತ ವೈದ್ಯಕೀಯ ವಿದ್ಯಾರ್ಥಿಗಳ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ನೂರಾರು ವಿದ್ಯಾರ್ಥಿಗಳು ಎಐಡಿಎಸ್‌ಒ ನೇತೃತ್ವದಲ್ಲಿ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್‌ರಿಗೆ ಸೋಮವಾರ ಮನವಿ ಸಲ್ಲಿಸಿದರು.
ಈ ಹಿಂದಿನ ಸರ್ಕಾರ ಕಳೆದ 5 ವರ್ಷಗಳ ಹಿಂದೆ ಬಳ್ಳಾರಿಯಲ್ಲಿ ಆರಂಭವಾದ ದಂತ ವೈದ್ಯಕೀಯ ಕಾಲೇಜಿಗೆ ಈ ವರೆಗೂ ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ (ಡಿಸಿಐ)ದಿಂದ ಮಾನ್ಯತೆ ದೊರೆಯದ ಕಾರಣ ವಿದ್ಯಾರ್ಥಿಗಳು ಆತಂಕಗೊಂಡಿದ್ದು, ಇನ್ನು 6 ತಿಂಗಳಲ್ಲಿ ಮೊದಲ ಬ್ಯಾಚ್ ಕೋರ್ಸ್ ಮುಗಿಸಿ ಹೊರಬರಲಿದೆ. ಇದರಿಂದ ವಿದ್ಯಾರ್ಥಿಗಳಿಗೆ ಮುಂದಿನ ಸ್ನಾತಕೋತ್ತರ ವ್ಯಾಸಂಗಕ್ಕೆ ಹಾಗೂ ಉದ್ಯೋಗಾವಕಾಶಗಳಿಗೂ ಕುತ್ತು ಬೀಳಲಿದೆ ಎಂದು ವಿದ್ಯಾರ್ಥಿಗಳು ತಿಳಿಸಿದರು.
ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಪ್ರಕಾರ ಸ್ವಂತ ಕಟ್ಟಡ, ಅವಶ್ಯಕತೆಗೆ ತಕ್ಕಂತೆ ಉತ್ತಮ ಉಪಕರಣಗಳು ಹಾಗೂ ಇತರೆ ಸೌಲಭ್ಯ ಒದಗಿಸದ ಕಾರಣ ಡಿಸಿಐ ಈ ಕಾಲೇಜಿಗೆ ಮಾನ್ಯತೆ ನೀಡಿಲ್ಲ. ಇದರಿಂದ ಈ ಕಾಲೇಜ್‌ನಲ್ಲಿ ವ್ಯಾಸಂಗ ಮಾಡಿದ ನೂರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ. ತಮ್ಮ ಭವಿಷ್ಯ ಉಜ್ವಲವಾಗುವುದೆಂದು ನಂಬಿ ಬಳ್ಳಾರಿ ಸರ್ಕಾರಿ ದಂತ ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅನ್ಯಾಯವಾಗಿ ಬಲಿಪಶುಗಳಾಗಲಿದ್ದಾರೆ. ಈ ನಿಟ್ಟಿನಲ್ಲಿ ತಾವು ಈ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಬಳ್ಳಾರಿ ಡೆಂಟಲ್ ಸ್ಟೂಡೆಂಟ್ಸ್ ಆಕ್ಷನ್ ಕಮಿಟಿ ಹಾಗೂ ಎಐಡಿಎಸ್‌ಒ ಮನವಿ ಮಾಡಿದೆ.
ಡೆಂಟಲ್ ವಿದ್ಯಾರ್ಥಿಗಳಾದ ರೋಹಿತ್, ಗಿರೀಶ್, ರಚನಾ, ಸಲಹೆಗಾರ ಡಾ. ಪ್ರಮೋದ್ ಸೇರಿದಂತೆ ಇತರರಿದ್ದರು.