ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ಇಂದು ಕವಿ-ಮನ-ಮನೆ ಕಾರ್ಯಕ್ರಮ

Vishwanath S
Updated On : 10 Oct 2013, 10:47 am

ಕೊಟ್ಟೂರು: ಕನ್ನಡ ಸಾಹಿತ್ಯ ಪರಿಷತ್ತಿನ ಬಳ್ಳಾರಿ ಜಿಲ್ಲಾ ಘಟಕ ಆಯೋಜಿಸುವ ಕವಿ-ಮನ-ಮನೆಯೊಂದಿಗೆ ಕಸಾಪ- 6 ಕಾರ್ಯಕ್ರಮ ಅ. 10ರಂದು ಕೊಟ್ಟೂರು ಪಟ್ಟಣದ ವಿಶ್ವನಾಥ ಅಡಿಗರವರ ನಿವಾಸದಲ್ಲಿ ನಡೆಯಲಿದೆ. ಬೆಳಗ್ಗೆ 9.30ಕ್ಕೆ ನಡೆಯುವ ಕಾರ್ಯಕ್ರಮವನ್ನು ಲೇಖಕ ಎನ್.ಎಂ. ಕೊಟ್ರೇಶ್ ಉದ್ಘಾಟಿಸುತ್ತಾರೆ.
ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಸಿರಿಗೆರೆ ಎರ್ರಿಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಕಥೆಗಾರ ವಿಶ್ವನಾಥ ಅಡಿಗರೊಂದಿಗೆ ಈ ಸಂದರ್ಭದಲ್ಲಿ ಸಂವಾದ ಮತ್ತಿತರ ಚರ್ಚೆಗಳು ನಡೆಯಲಿವೆ. ಕಸಾಪ ಕೂಡ್ಲಿಗಿ ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ. ಗುರುಪ್ರಸಾದ್, ಹೋಬಳಿ ಘಟಕದ ಅಧ್ಯಕ್ಷೆ ನಿರ್ಮಲ ಶಿವನಗುತ್ತಿ ಉಪಸ್ಥಿತರಿರುವರು.
ಇಂದು ಸಾಮಾನ್ಯ ಸಭೆ
ಕೊಟ್ಟೂರು: ಕೊಟ್ಟೂರು ಪಟ್ಟಣ ಪಂಚಾಯಿತಿಯ 7ನೇ ಅವಧಿಯ ಆಡಳಿತದ ಮೊದಲ ಸದಸ್ಯರ ಸಾಮಾನ್ಯ ಸಭೆ 10ರಂದು ನಡೆಯಲಿದೆ. ಮೊದಲ ಈ ಸಭೆಯಲ್ಲಿ ಪಟ್ಟಣ ಪಂಚಾಯಿತಿಯನ್ನು ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸುವುದು, ಆಸ್ತಿ ತೆರಿಗೆಯಲ್ಲಿ ಶೇ. 2ರಷ್ಟು ಮೊತ್ತ ವಸೂಲು ಮಾಡಿ ರಸ್ತೆ ಸಾರಿಗೆ ಸಂಸ್ಥೆಗೆ ಜಮಾ ಮಾಡುವ ಪ್ರಸ್ತಾವನೆಗೆ ಮಂಜೂರಾತಿ ನೀಡುವ ಕುರಿತು, ಪಟ್ಟಣ ವ್ಯಾಪ್ತಿಯಲ್ಲಿ ಬರುವ ವಾಣಿಜ್ಯ ಅಂಗಡಿಗಳ, ಹೋಟೆಲ್ ಮತ್ತು ಇತರ ಅಂಗಡಿಗಳ ಪರವಾನಗಿ ಕಡ್ಡಾಯಗೊಳಿಸುವುದು. ವಾರ, ದಿನವಹಿ ಮತ್ತು ವಾಹನಗಳ ಶುಲ್ಕ ರದ್ದುಗೊಳಿಸಲು ಸಭೆಯ ಮಂಜೂರಾತಿ ಪಡೆಯುವುದು ಸೇರಿದಂತೆ ಇತರ ಪ್ರಮುಖ ವಿಷಯಗಳು ಸಭೆಯಲ್ಲಿ ಚರ್ಚೆಗೆ ಬರಲಿವೆ ಎಂದು ಮುಖ್ಯಾಧಿಕಾರಿ ಹನುಮಂತಮ್ಮ ತಿಳಿಸಿದರು.
ಇಂದು ದಿನಾಚರಣೆ
ಬಳ್ಳಾರಿ: ಭಾರತೀಯ ರೆಡ್‌ಕ್ರಾಸ್ ಸಂಸ್ಥೆ, ವಿಮ್ಸ್, ಹೊಸಪೇಟೆ ರೋಟರಿ ಕ್ಲಬ್, ಇನ್ನರ್‌ವೀಲ್ ರೋಟರಿ, ಹೊಸಪೇಟೆ ತಾಲೂಕು ಕಾನೂನು ಸಲಹಾ ಕೇಂದ್ರ ಹಾಗೂ ಆಯುಷ್ ಇಲಾಖೆ ಸಹಯೋಗದಲ್ಲಿ ಅ. 10ರಂದು ಹೊಸಪೇಟೆ ರೋಟರಿ ಭವನದಲ್ಲಿ ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಆಯೋಜಿಸಿದೆ. ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಲಾಗಿದ್ದು, ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದು ರೆಡ್‌ಕ್ರಾಸ್ ಸಂಸ್ಥೆ ಕಾರ್ಯದರ್ಶಿ ಡಾ. ನಾಗರಾಜ್‌ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇಂದು ವಿಚಾರ ಸಂಕಿರಣ
ಬಳ್ಳಾರಿ: ಬಳ್ಳಾರಿಯ ಕಾರಂತ ರಂಗಲೋಕ ಸಂಸ್ಥೆ ಅ. 10ರಂದು ಸಂಜೆ 5.30ಕ್ಕೆ ಡಾ.ಕೆ. ಶಿವರಾಂ ಕಾರಂತರ ಒಂದು ನೆನಪು ಕುರಿತು ವಿಚಾರ ಸಂಕಿರಣ, ರಂಗಗೀತೆ ಮತ್ತು ಉಪನ್ಯಾಸ ಕಾರ್ಯಕ್ರಮ ನಗರದ ಮುಂಡ್ಲೂರು ರಾಮಪ್ಪ ಸಭಾಂಗಣದಲ್ಲಿ ಏರ್ಪಡಿಸಿದೆ. ಸುಭದ್ರಮ್ಮ ಮನ್ಸೂರ್ ಕಾರ್ಯಕ್ರಮ ಉದ್ಘಾಟಿಸುವರು. ಕಲ್ಲುಕಂಭ ಪಂಪಾಪತಿ ಅಧ್ಯಕ್ಷತೆ ವಹಿಸುವರು. ರಮೇಶ್ ಗೌಡ ಪಾಟೀಲ್, ಸಿದ್ದರಾಮ ಕಲ್ಮಠ ಪಾಲ್ಗೊಳ್ಳಲಿದ್ದಾರೆ. ಕಾರಂತರ ಬದುಕು ಮತ್ತು ಬರಹ, ಕಾರಂತರ ನಾಟಕಗಳ ಅವಲೋಕನ ಕುರಿತು ಉಪನ್ಯಾಸ ರಂಗಗೀತೆ ಗಾಯನ ಕಾರ್ಯಕ್ರಮ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.
ತಾಪಂಗೆ ಶಿಲ್ಪಾ ಅಧ್ಯಕ್ಷೆ
ಹೂವಿನಹಡಗಲಿ: ತಾಲೂಕು ಪಂಚಾಯಿತಿ ಅಧ್ಯಕ್ಷೆಯಾಗಿ ಮೈಲಾರ ತಾಪಂ ಕ್ಷೇತ್ರದ ಶಿಲ್ಪಾ ಸಿಂಗ್ ರಾಠೋಡ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಬುಧವಾರ ತಾಪಂ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಶಿಲ್ಪಾ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವರನ್ನು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಚುನಾವಣಾಧಿಕಾರಿ ಹಾಗೂ ಹೊಸಪೇಟೆ ಎಸಿ ಸುನಿಲ್‌ಕುಮಾರ ಘೋಷಣೆ ಮಾಡಿದರು. 15 ಸದಸ್ಯ ಬಲ ಹೊಂದಿರುವ ತಾಪಂನಲ್ಲಿ 13 ಸದಸ್ಯರು ಮಾತ್ರ ಆಯ್ಕೆ ಪ್ರಕ್ರಿಯೆಯಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ತಹಸೀಲ್ದಾರ್ ಎ.ಬಿ. ವಿಜಯಕುಮಾರ್, ಪ್ರಭಾರಿ ತಾಪಂ ಇತಿ ಡಿ. ಮಂಜಣ್ಣ ಇದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಐಗೋಳ ಚಿದಾನಂದ, ಎಂ. ಪರಮೇಶ್ವರಪ್ಪ, ಜಿಪಂ ಸದಸ್ಯ ಜಿ. ವಸಂತ್, ಅರವಳ್ಳಿ ವೀರಣ್ಣ, ಎಪಿಎಂಸಿ ಅಧ್ಯಕ್ಷ ವಾರದ ಗೌಸ್ ಮೋಹಿದ್ದಿನ್ ಸೇರಿದಂತೆ ಇತರರು ತಾಪಂ ಅಧ್ಯಕ್ಷರಿಗೆ ಅಭಿನಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement