ಉನ್ನತ ಶಿಕ್ಷಣಕ್ಕೆ ಆದ್ಯತೆ ಅಗತ್ಯ: ವೆಂಕಟರಾಮಯ್ಯ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 9
ಜಾಗತೀರಣದ ಬಿಕ್ಕಟ್ಟಿನಲ್ಲಿ ಗುಣಮಟ್ಟದ ಉನ್ನತ ಶಿಕ್ಷಣಕ್ಕೆ ಆದ್ಯತೆ ನೀಡಬೇಕಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪ್ರೊ. ಪಿ. ವೆಂಕಟರಾಮಯ್ಯ ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯದಲ್ಲಿ ನಡೆದ ಉನ್ನತ ಶಿಕ್ಷಣ ಆಶಯ, ವಾಸ್ತವ, ಭವಿಷ್ಯ ಕುರಿತು ಭಾಷೆ, ಸಾಹಿತ್ಯ, ಸಂಸ್ಕೃತಿ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.
ಉನ್ನತ ಶಿಕ್ಷಣದ ವ್ಯಾಪ್ತಿ ವಿಸ್ತಾರವಾಗಿದ್ದು, ಜಾಗತೀಕರಣದಿಂದ ಅನೇಕ ಸಮಸ್ಯೆಗಳು ಉಂಟಾಗುತ್ತಿವೆ. ಜಾಗತೀಕರಣದಿಂದ ಪ್ರತಿಯೊಂದನ್ನು ಸಮಾನ ಅವಕಾಶಗಳಿಂದ, ಸ್ಪರ್ಧೆಯಿಂದ ಗೆಲ್ಲಬೇಕಿದೆ. ನವ ಸಮಾಜದ ಕಡೆಗೆ ಸಾಗಬೇಕಾದರೆ ಉನ್ನತ ಶಿಕ್ಷಣ ಅಗತ್ಯ. ಗುಣಾತ್ಮಕ ಉನ್ನತ ಶಿಕ್ಷಣ ಸರ್ಕಾರವನ್ನು ಬಿಂಬಿಸುತ್ತದೆ. ಜಾಗತೀಕರಣ ಮೈಗೂಡಿಸಿಕೊಂಡು ಉನ್ನತ ಶಿಕ್ಷಣಕ್ಕೆ ವ್ಯವಸ್ಥೆ ರೂಪಿಸಿಕೊಳ್ಳಬೇಕು. ಸ್ವಾತಂತ್ರ್ಯಾನಂತರ ಸಂವಿಧಾನದಲ್ಲಿ ಉನ್ನತ ಶಿಕ್ಷಣದ ಧ್ಯೇಯವನ್ನು ನಿರ್ದಿಷ್ಟಗೊಳಿಸಿ ಆ ಮೂಲಕ ಹಣೆಬರಹ, ಮೂಢನಂಬಿಕೆ, ಅಂಧ ಶ್ರದ್ಧೆ ಅಳಿಸಿ ಹಾಕಿ ವೈಚಾರಿಕತೆ ತರುವ ಆಶಯ ಹೊಂದಲಾಯಿತು. ಆದರೆ ಇತ್ತೀಚಿನ ಸಮೂಹ ಮಾಧ್ಯಮಗಳನ್ನು ನೋಡಿದಾಗ ಉನ್ನತ ಶಿಕ್ಷಣ ಸಮಾಜದ ಮೇಲೆ ಯಾವ ಪ್ರಭಾವವನ್ನೂ ಬೀರುತ್ತಿಲ್ಲ ಎಂದು ಅನುಮಾನ ಉಂಟಾಗುತ್ತಿದೆ. ಉನ್ನತ ಶಿಕ್ಷಣದ ಮೂಲ ಆಶಯ ನೆರವೇರಿಸುವಲ್ಲಿ ವಿಫಲರಾಗುತ್ತಿದ್ದೇವೆ ಎಂದು ವಿಷಾದಿಸಿದರು.
ದೇಸಿಯತೆ ಇರಲಿ: ಹಂಪಿ ಕನ್ನಡ ವಿವಿ ಕುಲಪತಿ ಡಾ. ಹಿ.ಚಿ. ಬೋರಲಿಂಗಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ದೇಶದ ವಿಶ್ವವಿದ್ಯಾಲಯಗಳು ಬೇರೆ ದೇಶದ ವಿವಿಗಳನ್ನು ಅನುಕರಣೆ ಮಾಡುತ್ತಿರುವುದು ಸರಿಯಲ್ಲ. ಅನ್ಯ ದೇಶದ ವಿವಿಗಳೊಂದಿಗೆ ಹೋಲಿಕೆ ಮಾಡಿಕೊಳ್ಳುವುದು ಅನಗತ್ಯ. ದೇಶದ ವಿವಿಗಳು ದೇಸೀತನ ಮೈಗೂಡಿಸಿಕೊಂಡು ತಮ್ಮತನ ಮೆರೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.
ಉನ್ನತ ಶಿಕ್ಷಣವನ್ನು ಪುನರ್ ಮೌಲ್ಯಮಾಪನ ಮತ್ತು ಪರಿಷ್ಕಾರಗೊಳಿಸಿ ಮಾನವೀಯತೆ ನೆಲೆಯಲ್ಲಿ ಎಲ್ಲರಿಗೂ ದಕ್ಕುವಂತೆ ಮಾಡಬೇಕಿದೆ. ವಿಚಾರ ಸಂಕಿರಣದ ನಿರ್ಣಯಗಳನ್ನು ಸರ್ಕಾರಕ್ಕೂ ಕಳಿಸಿಕೊಡಲಾಗುತ್ತದೆ. ಜತೆಗೆ ವಿಚಾರ ಸಂಕಿರಣದಲ್ಲಿ ಮಂಡನೆಯಾಗುವ ವಿಷಯಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು.
ಹಂಪಿ ಕನ್ನಡ ವಿವಿ ಕುಲಸಚಿವ ಡಾ. ವಿಜಯ್ ಪೂಣಚ್ಚ ತಂಬಂಡ ಇದ್ದರು. ಅಧ್ಯಯನಾಂಗದ ನಿರ್ದೇಶಕ ಡಾ. ಅಶೋಕ್‌ಕುಮಾರ ರಂಜೇರ ಸ್ವಾಗತಿಸಿದರು. ಡಾ. ಪಾಂಡುರಂಗಬಾಬು ಪ್ರಾಸ್ತಾವಿಕ ಮಾತನಾಡಿದರು. ಸಿ. ವೆಂಕಟೇಶ ನಿರೂಪಿಸಿದರು. ರಾಮಮೂರ್ತಿ ವಂದಿಸಿದರು.
ಶಿಕ್ಷಣ ಮಾಧ್ಯಮ, ಪಠ್ಯಕ್ರಮ, ಪಠ್ಯವಸ್ತು ಮತ್ತು ಸಂಶೋಧನೆ, ಅಧ್ಯಯನ ಕುರಿತು ಪ್ರೊ. ಓ.ಎಲ್. ನಾಗಭೂಷಣಸ್ವಾಮಿ, ಪ್ರೊ. ವಿ.ಎಸ್. ಶ್ರೀಧರ, ಡಾ. ರಾಜೇಂದ್ರ ಚನ್ನಿ ಪ್ರಬಂಧ ಮಂಡಿಸಿದರು. ಡಾ. ಮಲ್ಲಿಕಾರ್ಜುನ ಮೇಟಿ, ಡಾ.ಕೆ.ವೈ. ನಾರಾಯಣಸ್ವಾಮಿ, ಡಾ. ನಟರಾಜ ಹುಳಿಯಾರ ವಿಷಯ ವಿಸ್ತರಣೆ ನಡೆಸಿದರು.