ಕೊಟ್ಟೂರಿಗೆ ಸಿಗುತ್ತಾ ಪುರಸಭೆ ಸ್ಥಾನ?
ಕನ್ನಡ ಪ್ರಭವಾರ್ತೆ, ಕೊಟ್ಟೂರು, ಅ. 9
ಧಾರ್ಮಿಕ ಮತ್ತು ವಾಣಿಜ್ಯ ಕ್ಷೇತ್ರಗಳಿಗೆ ಪ್ರಮುಖ ಪಟ್ಟಣವಾದ ಕೊಟ್ಟೂರು ಕೊನೆಗೂ ಸುಧಾರಣೆ ಹಾದಿಯತ್ತ ಸಾಗಿದ್ದು, ಇಲ್ಲಿನ ಪಟ್ಟಣ ಪಂಚಾಯಿತಿ ಪುರಸಭೆಯಾಗಿ ಮೇಲ್ದರ್ಜೆಗೇರುವ ಹೊಸ್ತಿಲಿನಲ್ಲಿ ಬಂದು ನಿಂತಿದೆ.
ಸದಾ ವಂಚಿತ ಪಟ್ಟಣವಾಗಿ ಗುರುತಿಸಿಕೊಂಡಿದ್ದ ಕೊಟ್ಟೂರಿಗೆ ಪುರಸಭೆ ಸ್ಥಾನಮಾನ ದೊರಕುವ ಲಕ್ಷಣಗಳು ಗೋಚರಿಸುತ್ತಿವೆ. ಅಲ್ಲದೆ ಜಿಲ್ಲೆಯ ಕಮಲಾಪುರ, ಕೂಡ್ಲಿಗಿ ಮತ್ತು ತೆಕ್ಕಲಕೋಟೆ ಪಪಂಗಳು ಪುರಭೆಗಳಾಗಿ ಮೇಲ್ದರ್ಜೆಗೇರುವ ಅರ್ಹತೆ ಪಡೆದುಕೊಂಡಿವೆ. 2011ರ ಜನಗಣತಿಯಂತೆ ಈ 4 ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸುವ ಸಂಬಂಧ ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆಯನ್ನು ಪೌರಾಡಳಿತ ನಿರ್ದೇಶನಾಲಯಕ್ಕೆ ಕಳುಹಿಸಿಕೊಡುವಂತೆ ಸೂಚನೆ ನೀಡಲಾಗಿದೆ.
ಸೆ. 23ರಂದು ಪತ್ರ: ಸರ್ಕಾರದ ಸೂಚನೆಯಂತೆ ಬಳ್ಳಾರಿ ಡಿಸಿಗೆ ಈಗಾಗಲೇ ಈ ನಾಲ್ಕು ಪಪಂ ಮುಖ್ಯಾಧಿಕಾರಿಗಳಿಗೆ ಸೆಪ್ಟೆಂಬರ್ 23ರಂದು ಪತ್ರ ರವಾನಿಸಿ ಪುರಸಭೆಯನ್ನಾಗಿ ಮೇಲ್ದರ್ಜೆಗೇರಿಸುವ ಪೂರ್ವದಲ್ಲಿ ಆಯಾ ಪಪಂ ಅಭಿಪ್ರಾಯಗಳನ್ನು ಪಡೆಯಬೇಕಿರುವುದರಿಂದ ನಿಮ್ಮ ಪಪಂಯನ್ನು ಪುರಸಭೆಯನ್ನಾಗಿ ಉನ್ನತೀಕರಿಸಲು ಪುರಸಭೆಯಾಗಿ ಪರಿವರ್ತನೆಗೊಳ್ಳುವ ಪ್ರದೇಶಗಳ ವಿವರ ಮತ್ತು ಸರಹದ್ದು ವಿವರವುಳ್ಳ ಮಾಹಿತಿ, ನಕ್ಷೆ ರವಾನಿಸುವಂತೆ ಸೂಚಿಸಿದ್ದಾರೆ.
ಮಾನದಂಡವೇನು?: ಕೊಟ್ಟೂರು ಪಟ್ಟಣ 2011ರ ಜನಗಣತಿ ಪ್ರಕಾರ 26,289 ಜನಸಂಖ್ಯೆ ಹೊಂದಿದೆ. ಅದರಂತೆ ಕಮಲಾಪುರ ಪಟ್ಟಣ 25,552, ಕೂಡ್ಲಿಗಿ 26,680 ಮತ್ತು ತೆಕ್ಕಲಕೋಟೆ 26,224 ಜನಸಂಖ್ಯೆ ಹೊಂದಿರುವುದರಿಂದ ಈ ಪಟ್ಟಣ ಪಂಚಾಯಿತಿಗಳು ಪುರಭೆಯಾಗಿ ಮೇಲ್ದರ್ಜೆಗೇರಲು ಅರ್ಹತೆ ಪಡೆದುಕೊಂಡಿವೆ. ಸರ್ಕಾರ 20 ಸಾವಿರಕ್ಕಿಂತ ಕಡಿಮೆ ಇಲ್ಲದ ಮತ್ತು 50 ಸಾವಿರದೊಳಗಿನ ಪಟ್ಟಣಗಳನ್ನು ಪುರಸಭೆಯನ್ನಾಗಿಸುವ ಕಾರ್ಯಕ್ಕೆ ಮುಂದಾಗಿದೆ.
ವಂಚನೆಯಿಂದ ದೂರ: ಕೊಟ್ಟೂರು ಪಟ್ಟಣ 1995ರ ವರೆಗೆ ಪುರಸಭೆಯಾಗಿಯೇ ಕಾರ್ಯನಿರ್ವಹಿಸುತ್ತಿತ್ತು, 2001ರ ಜನಗಣತಿ ಪ್ರಕಾರ ಕೊಟ್ಟೂರು ಆಗಲೇ 22 ಸಾವಿರ ಜನಸಂಖ್ಯೆ ಹೊಂದಿದ್ದರೂ ಅಧಿಕಾರಿ ಶಾಹಿಯ ಕುತಂತ್ರದಿಂದಾಗಿ ಪಟ್ಟಣ ಪಂಚಾಯಿತಿಯಲ್ಲಿ ಹಿಂಬಡ್ತಿ ಪಡೆದುಕೊಂಡು ವಂಚನೆಗೊಳಗಾಗಿತ್ತು. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆ, ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ಕೊಟ್ಟೂರಿಗೆ ಪುರಸಭೆ ಸ್ಥಾನಮಾನ ಮತ್ತೆ ಮರೀಚಿಕೆಯಾದಂತಾಗಿತ್ತು. ಪುರಭೆಯಾಗಲು ಇರುವ ಎಲ್ಲಾ ಮಾನದಂಡಗಳನ್ನು ಎಂದೋ ಒಳಗೊಂಡಿದ್ದರೂ ಆ ಸ್ಥಾನದತ್ತ ಮೇಲೆರದೆ ಕೊಟ್ಟೂರು ಹಿಂದೆ ಬಿಂದಿತ್ತು.
ಪೌರಾಡಳಿತ ಮಾಜಿ ಸಚಿವ ಬಾಲಚಂದ್ರ ಜಾರಿಕಿಹೊಳಿ ರಾಜ್ಯದ 52 ಪಪಂಗಳನ್ನು ಪುರಸಭೆಯನ್ನಾಗಿಸುವ ಪ್ರಸ್ತಾವನೆಯನ್ನು ಸಂಪುಟ ಸಭೆಯ ಅನುಮೋದನೆ ಪಡೆಯುವ ಪ್ರಯತ್ನ ನಡೆಸಿದ್ದರು. ಈ ಪಟ್ಟಿಯಲ್ಲಿ ಕೊಟ್ಟೂರು ವಂಚಿತವಾಗಿತ್ತು. ನಂತರದ ಬೆಳವಣಿಗೆಯಲ್ಲಿ ಪಪಂಗಳನ್ನು ಪುರಸಭೆಗಳನ್ನಾಗಿಸುವ ಪ್ರಸ್ತಾಪ ಅಲ್ಲಿಗೆ ನಿಂತಿತು. ಆ ಪ್ರಸ್ತಾವನೆ ಜಾರಿಗೊಂಡಿದ್ದರೆ ಪಟ್ಟಣ ಮೇಲ್ದರ್ಜೆಗೇರುವ ಅವಕಾಶದಿಂದ ವಂಚಿತವಾಗುತ್ತಿತ್ತು. ಇದೀಗ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಹೊಸ ಪ್ರಸ್ತಾವನೆ ಸೂಚಿಸಿ ಸ್ಥಳೀಯ ಸಂಸ್ಥೆಗಳನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವತ್ತ ಮುಂದಾಗಿದೆ. ಇದರಿಂದಾಗಿ ಕೊಟ್ಟೂರಿನಂತಹ ಹಲವು ಪಟ್ಟಣಗಳು ಮೇಲ್ದರ್ಜೆಯ ಸ್ಥಳೀಯ ಆಡಳಿತದ ಸ್ಥಾನಮಾನ ಹೊಂದುವ ಅವಕಾಶ ಪಡೆದಿವೆ.
ಕೊಟ್ಟೂರು ಪಪಂ ಪುರಸಭೆಯನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರದ ಸೂಚನೆ ಸ್ವಾಗತಾರ್ಹ. ಈ ಕಾರಣಕ್ಕಾಗಿ ಪಪಂನ ಮೊದಲ ಸಭೆ ಅ. 10ರಂದು ನಡೆಯಲಿದ್ದು, ಪುರಸಭೆಯನ್ನಾಗಿಸಲು ಶೀಘ್ರ ಕ್ರಮ ಕೈಗೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಿ ನಿರ್ಣಯ ಕೈಗೊಳ್ಳುತ್ತೇವೆ.
- ಅನುಸೂಯ ಸೆರೆಗಾರ, ಅಧ್ಯಕ್ಷೆ, ಎಸ್. ಗುರುಶಾಂತಪ್ಪ, ಉಪಾಧ್ಯಕ್ಷ, ಪಪಂ, ಕೊಟ್ಟೂರು
-ಜಿ. ಸೋಮಶೇಖರ್