ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬಳ್ಳಾರಿ

ನಡೆ, ನುಡಿಯಲ್ಲಿ ಸಾಮ್ಯತೆ ಇರಲಿ

Vishwanath S
Updated On : 10 Oct 2013, 10:46 am

ಬಳ್ಳಾರಿ: ನಮ್ಮ ನುಡಿ, ನಡೆಯಲ್ಲಿ ಸಾಮ್ಯತೆ ಇದ್ದರೆ ಮನುಷ್ಯನಿಗೆ ಮನ್ನಣೆ ಸಿಗುತ್ತದೆ. ಅಂದಾಗ ಮಾತ್ರ ನಿರೀಕ್ಷಿತ ಗುರಿ, ಹೋರಾಟದ ಫಲ ಪಡೆಯಲು ಸಾಧ್ಯ ಎಂದು ಸಮಾಜ ಪರಿವರ್ತನಾ ಸಮುದಾಯ ಎಸ್.ಆರ್. ಹಿರೇಮಠ್ ಹೇಳಿದರು.
ನಮ್ಮ ಬಳ್ಳಾರಿ ಫೌಂಡೇಷನ್ ವತಿಯಿಂದ ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಏರ್ಪಡಿಸಿದ್ದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾಡುವ ಕೆಲಸ ನಡೆಯುವ ರೀತಿಯಲ್ಲಿ ಸಾಮ್ಯತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಆಸಕ್ತಿ ತೋರಬೇಕು, ಅಂದಾಗ ಮಾತ್ರ ಇತರರು ನಮ್ಮನ್ನು ನಂಬುತ್ತಾರೆ. ಮಾತನಾಡುವ ಪ್ರತಿ ಮಾತಿಗೂ ಬೆಲೆ ಇರುತ್ತದೆ ಎಂದರು.
ಅಕ್ರಮ ಮಾಡುವವರ ಅಧಿಕಾರ ದಾಹಕ್ಕೆ ನಾವೆಲ್ಲರೂ ಕಡಿವಾಣ ಹಾಕಬೇಕು, ದೇಶವನ್ನು ಲೂಟಿ ಮಾಡುವ ವಿಕೃತ ಜನರ ಬಗ್ಗೆ ಎಚ್ಚರದಿಂದಿರಬೇಕು. ಪ್ರಕೃತಿ, ಸಂಸ್ಕೃತಿ ಹಾಗೂ ಸಮಾಜದ ನಡುವೆ ಉತ್ತಮ ಬಾಂಧವ್ಯ ಏರ್ಪಡಿಸಬೇಕಿದೆ. ಸಮಾಜವನ್ನು ಬದಲಾಯಿಸುತ್ತೇನೆ ಎಂದು ಹೋಗುವ ಪೂರ್ವದಲ್ಲಿ ಮೊದಲು ನಾವು ಬದಲಾಗಬೇಕು. ಪ್ರತಿ ಕ್ಷೇತ್ರದಲ್ಲಿಯೂ ಪ್ರಾಮಾಣಿಕರು ಇದ್ದಾರೆ, ನಮ್ಮ ಹೋರಾಟದ ಬಗ್ಗೆ ಪ್ರಾಮಾಣಿಕರಿಗೆ ನಂಬಿಕೆ ಇದ್ದರೆ, ಅವರೆ ದಾಖಲೆಗಳನ್ನು ಒದಗಿಸುತ್ತಾರೆ. ಅದಕ್ಕಾಗಿ ಪ್ರತಿಯೊಬ್ಬರಿಗೂ ಉತ್ತಮ ನಡೆ ಅತ್ಯಗತ್ಯ ಎಂದು ತಿಳಿಸಿದರು.
ನಾವೇ ಭಗತ್‌ಸಿಂಗ್ ಆಗೋಣ: ಜನಸಂಗ್ರಾಮ ಪರಿಷತ್ ಅಧ್ಯಕ್ಷ ರಾಘವೇಂದ್ರ ಕುಷ್ಟಗಿ ಮಾತನಾಡಿ, ಇಂದಿನ ಯುವಕರು ಕಂಪ್ಯೂಟರ್, ಬ್ಲಾಗ್, ಇಂಟರ್‌ನೆಟ್‌ನಲ್ಲಿ ಮುಳುಗಿದ್ದಾರೆ. ಇವರಿಗೆ ಸಾಮಾಜಿಕ ಸಮಸ್ಯೆಗಳು, ಹೋರಾಟಗಳ ಬಗೆಗಿನ ಕಾಳಜಿ ಇಲ್ಲ. ಇಂಥವರನ್ನು ಹುಡುಕಿ, ಸಮಾಜಮುಖಿಗೆ ತರಬೇಕಿದೆ. ಅಂದಾಗ ಮಾತ್ರ ಹೋರಾಟಗಳು ಸ್ವಾಸ್ಥ್ಯ ಸಮಾಜ ನಿರ್ಮಾಣ ಮಾಡಲು ಸಾಧ್ಯ. ತಮ್ಮ ಮನೆಯಲ್ಲಿ ಭಗತ್‌ಸಿಂಗ್ ಹುಟ್ಟುವುದು ಬೇಡ, ಪಕ್ಕದ ಮನೆಯಲ್ಲಿ ಹೋರಾಟಗಾರರು ಹುಟ್ಟಬೇಕೆನ್ನುವ ಮನೋಭಾವನೆ ದೂರವಾಗಬೇಕು ಎಂದು ಹೇಳಿದರು.
ಮೂಲಿಮನಿ ಈರಣ್ಣ, ಐ.ಜಿ. ಪುಲ್ಲಿ ಇದ್ದರು. ಶಿವಕುಮಾರ್ ಮಾಳಗಿ ಪ್ರಾಸ್ತಾವಿಕ ಮಾತನಾಡಿದರು. ಮೇಡಂ ಕ್ಯೂರಿ ಅಕಾಡೆಮಿ ಅಧ್ಯಕ್ಷ ಎಸ್. ಮಂಜುನಾಥ್ ನಿರೂಪಿಸಿದರು. ಸಂವಾದ ಕಾರ್ಯಕ್ರಮದಲ್ಲಿ ಉಪನ್ಯಾಸಕ ಮೋಹನ ರೆಡ್ಡಿ, ರೈತ ಮುಖಂಡ ದರೂರು ಪುರುಷೋತ್ತಮಗೌಡ, ಹೇಮನಗೌಡ ಸೇರಿದಂತೆ ಇತರರು ಪ್ರಶ್ನೆಗಳನ್ನು ಕೇಳುವ ಮೂಲಕ ಸಂವಾದದಲ್ಲಿ ತೊಡಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement