ಮಳೆಯಾಶ್ರಿತ ರೈತರ ಕೈಹಿಡಿದ ಸಜ್ಜೆ
ಕನ್ನಡಪ್ರಭ ವಾರ್ತೆ, ಹಗರಿಬೊಮ್ಮನಹಳ್ಳಿ, ಅ. 9
ಈ ಸಲದ ಮುಂಗಾರು ವೈಫಲ್ಯದಿಂದ ಕಂಗೆಟ್ಟಿರುವ ಹಗರಿಬೊಮ್ಮನಹಳ್ಳಿ ತಾಲೂಕಿನ ಮಳೆಯಾಶ್ರಿತ ಕೃಷಿಕರ ಪಾಲಿಗೆ ಸಜ್ಜೆ ವರದಾನವಾಗಿದೆ.
ತಾಲೂಕಿನ ಸುಮಾರು 20-25 ಸಾವಿರ ಹೆಕ್ಟೇರ್ ಒಣಭೂಮಿಯಲ್ಲಿ ಸಜ್ಜೆ ದರ್ಬಾರ ನಡೆದಿದೆ. ಈ ಸೀಮೆಯ ಯಾವುದೇ ಊರಿಗೆ ಕಾಲಿಟ್ಟರೂ ಆ ಊರಿನ ರಸ್ತೆಗಳ ಮೇಲೆ ಸಜ್ಜೆ ಒಕ್ಕಣೆ ಭರದಿಂದ ಸಾಗಿರುವ ದೃಶ್ಯ ಕಣ್ಣಿಗೆ ಬೀಳುತ್ತದೆ. ಅದೇ ರೀತಿ, ಕಣ್ಣು ಹಾಯಿಸಿದಲ್ಲೆಲ್ಲ ಸಜ್ಜೆ ಬೆಳೆ ಹಾಗೂ ಬೆಳೆಯನ್ನು ಕಟಾವು ಮಾಡಿ ಹೊಲಗಳಲ್ಲಿ ಗೂಡುಕಟ್ಟಿರುವ ದೃಶ್ಯ ಸಾಮಾನ್ಯವಾಗಿದೆ. ಹೀಗಾಗಿ, ಈ ಬಾರಿ ಪ್ರತಿನಿತ್ಯ ಇಲ್ಲಿನ ಮಾರುಕಟ್ಟೆಗೆ ಅಧಿಕ ಪ್ರಮಾಣದಲ್ಲಿ ಸಜ್ಜೆ ಪೂರೈಕೆಯಾಗುತ್ತಿದೆ. ಹಲವು ದಶಕಗಳಲ್ಲಿಯೇ ಅತಿ ಹೆಚ್ಚು ಎನ್ನಬಹುದಾದ ಸಜ್ಜೆ ಈ ಸಲದ ಮಾರುಕಟ್ಟೆಗೆ ಪೂರೈಕೆಯಾಗಿದೆ ಎಂಬ ಮಾತು ಮಾರುಕಟ್ಟೆಯಲ್ಲಿ ಪ್ರಚಲಿತದಲ್ಲಿದೆ.
ತೃಣಧಾನ್ಯ (ಸಣ್ಣಕಾಳುಗಳ ಬೆಳೆ) ಆಹಾರ ಬೆಳೆಗಳಲ್ಲಿ ರಾಗಿಯ ಅನಂತರ ಸಜ್ಜೆಗೆ ಪ್ರಮುಖ ಸ್ಥಾನವಿದೆ. ಜೋಳದ ರೊಟ್ಟಿ ಬಿಟ್ಟರೆ ಸಜ್ಜೆಯಿಂದ ತಯಾರಿಸುವ ರೊಟ್ಟಿಗೆ ಉತ್ತರ ಕರ್ನಾಟಕ ಫೇಮಸ್. ಈ ಭಾಗದ ಗದಗ, ಬಿಜಾಪುರ, ಬಾಗಲಕೋಟೆ, ಧಾರವಾಡ, ಹಾವೇರಿ ಜಿಲ್ಲೆಗಳ ಮನೆ, ಮನೆಯಲ್ಲೂ ಜೋಳಕ್ಕೆ ಕೊಟ್ಟಷ್ಟು ಪ್ರಾಮುಖ್ಯವನ್ನು ಸಜ್ಜೆಗೂ ನೀಡುತ್ತಾರೆ.
ಖರ್ಚಿಲ್ಲದ ಬೆಳೆ: ರುಚಿಕರವಾದ ರೊಟ್ಟಿ ಊಟಕ್ಕೆ ಹೆಸರಾಗಿರುವ ಸಜ್ಜೆ ಬೆಳೆ ಕಳೆದ ಮೂರ್ನಾಲ್ಕು ವರ್ಷಗಳಿಂದಿಚಿಗೆ ಮಳೆಯಾಶ್ರಿತ ಬಿಸಿಲೂರು ಹಗರಿಬೊಮ್ಮನಹಳ್ಳಿ ತಾಲೂಕಿನ ರೈತರ ಪಾಲಿಗೆ ಪ್ರಮುಖ ಅರ್ಥಿಕ ಬೆಳೆಯಾಗಿ ಪರಿಣಮಿಸಿದೆ.
ಬಿತ್ತನೆಯಾದ ಮೂರೂವರೆ ತಿಂಗಳಿಗೆಲ್ಲ ಉತ್ಪನ್ನ ಕೊಯ್ಲಿಗೆ ಬರುತ್ತದೆ. ಹೆಚ್ಚು ನೀರು ಬೇಡದ, ಕಾಳು ಹಾಲುಭರಿತ ತೆನೆ ಕಟ್ಟುವ ವೇಳೆಯಲ್ಲಿ ಕಾಣಿಸಿಕೊಳ್ಳುವ ಬೂಜುರೋಗ ಹೊರತುಪಡಿಸಿದರೆ ಹೆಚ್ಚು-ಕಡಿಮೆ ಸಜ್ಜೆ ರೋಗ ಬಾಧೆಯಿಂದ ಮುಕ್ತವೇ ಸರಿ. ಮುಖ್ಯವಾಗಿ ನಿರ್ವಹಣಾ ವೆಚ್ಚ ತೀರಾ ಕಡಿಮೆ. ಬಿತ್ತನೆ ಸಮಯದಲ್ಲಿ ಒಂದಿಷ್ಟು ಖರ್ಚು ಮಾಡಿದ್ದು, ಬಿಟ್ಟರೆ ನಿರ್ವಹಣೆಗೆ ವೆಚ್ಚವಿಲ್ಲ. ಹೀಗಾಗಿ, ಇತ್ತೀಚಿನ ದಿನಗಳಲ್ಲಿ ಕೃಷಿ ನಿರ್ವಹಣ ವೆಚ್ಚಕ್ಕೆ ಅಂಜಿಕೊಂಡಿರುವ ಬಯಲು ಸೀಮೆಯ ರೈತರು ಕಡಿಮೆ ವೆಚ್ಚ ಬಯಸುವ ಸಜ್ಜೆಯತ್ತ ತಮ್ಮ ಚಿತ್ತ ನೆಟ್ಟಿದ್ದಾರೆ. ಹೀಗಾಗಿ, ಈಗ ಬಯಲು ಸೀಮೆಯಾದ್ಯಂತ ಸಜ್ಜೆ ಬೆಳೆಯ ಪಾರುಪತ್ಯ ನಡೆದಿದೆ.
ಬೆಲೆ ಇಳಿಕೆ: ಸದ್ಯ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಲ್‌ಗೆ, ರು. 1250-1260 ವರೆಗೆ ಇದೆ. ಕಳೆದ ವಾರ ಕ್ವಿಂಟಲ್‌ಗೆ ರು. 1320-1350ಗಳ ವರೆಗೆ ಧಾರಣೆಯಿತ್ತು. ಆದರೆ, ಈ ವಾರ ಆವಕ ಹೆಚ್ಚಾಗಿದೆ. ಅರ್ಥಿಕ ಸಿದ್ಧಾಂತದ ಪ್ರಕಾರ ವಸ್ತುವಿನ ಪೂರೈಕೆ ಹೆಚ್ಚಾದಂತೆ ಬೆಲೆ ಇಳಿಕೆ ಶುರುವಾಗುತ್ತದೆ. ಆವಕ ಹೆಚ್ಚಾಗಿರುವುದರಿಂದ ಬೆಲೆ ಇಳಿಮುಖವಾಗಿದೆ. ಈ ಸಲ ಪ್ರತಿ ಎಕರೆಗೆ 12ರಿಂದ 15 ಕ್ವಿಂಟಲ್ ನಷ್ಟು ಇಳುವರಿ ಬಂದಿದೆ. ಹೀಗಾಗಿ, ಇಲ್ಲಿನ ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಸಜ್ಜೆ ಕಾಣಸಿಗುತ್ತದೆ.
ಕೊಬ್ಬಿನಾಂಶ ಕಮ್ಮಿ: ಎಬಿಸಿ ವಿಟಮಿನ್‌ವುಳ್ಳ ಸಜ್ಜೆಯಲ್ಲಿ ಕೊಬ್ಬಿನಾಂಶ ಕೇವಲ ಶೇ 4.3 ನಷ್ಟಿದ್ದರೆ ಪ್ರೋಟಿನ್ ಅಂಶ ಶೇ. 12.3 ಇದೆ. ಅದೇ ರೀತಿ, ನಾರಿನಾಂಶ ಶೇ. 8 ಇದೆ. ತಾಲೂಕಿನಲ್ಲಿ ಈ ಸಲ ಜಿಕೆ - 1001, ಎನ್‌ಬಿಎಚ್ - 4599, ಪಿಎಸಿ - 931 ಹಾಗೂ ಎನ್‌ಆರ್ - 51 ತಳಿಯ ಸಜ್ಜೆಯನ್ನು ತಾಲೂಕಿನಾದ್ಯಂತ ಹೆಚ್ಚಿನ ಪ್ರಮಾಣದಲ್ಲಿ ರೈತರು ಬಿತ್ತನೆ ಮಾಡಿದ್ದಾರೆ. ಸಲ ಸಜ್ಜೆಯನ್ನು ಇಲಾಖೆಯ ವಾಡಿಕೆಗಿಂತಲೂ ನಾಲ್ಕುಪಟ್ಟು ಹೆಚ್ಚು ಪ್ರಮಾಣದಲ್ಲಿ ಸಜ್ಜೆ ಬೆಳೆಯಲಾಗಿದೆ ಎನ್ನುತ್ತಾರೆ ತಾಲೂಕಿನ ಸಹಾಯಕ ಕೃಷಿ ಅಧಿಕಾರಿ ಎಂ. ಹನುಮಂತಪ್ಪ.
-ಹುಳ್ಳಿ ಪ್ರಕಾಶ್