ಕಾಲುವೆಯಲ್ಲಿ ಕೊಚ್ಚಿಹೋದ ವಿದ್ಯಾರ್ಥಿಗಳು
ಬಳ್ಳಾರಿ: ಅಲ್ಲೀಪುರ ಸಮೀಪದ ಎಚ್ಎಲ್ ಕಾಲುವೆಯಲ್ಲಿ ಈಜಲು ಹೋದ ಇಬ್ಬರು ಎಂಜಿನಿಯರಿಂಗ್ ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಹೋದ ಘಟನೆ ಬುಧವಾರ ಮಧ್ಯಾಹ್ನ ಜರುಗಿದೆ.
ಅಭಿಷೇಕ್ (18), ಅರವಿಂದ್ (19) ಮೃತ ವಿದ್ಯಾರ್ಥಿಗಳು. ಬಳ್ಳಾರಿಯ ಖಾಸಗಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರಥಮ ಬಿಇ ಓದುತ್ತಿರುವ ಸುಮಾರು 8-10 ವಿದ್ಯಾರ್ಥಿಗಳು ಬುಧವಾರ ಮಧ್ಯಾಹ್ನ ಹೊಸಪೇಟೆ ರಸ್ತೆಯಲ್ಲಿನ ಎಚ್ಎಲ್ ಕಾಲುವೆಗೆ ಈಜಲು ತೆರಳಿದ್ದರು. ಆಗ ಈ ಘಟನೆ ಜರುಗಿದ್ದು, ಬುಧವಾರ ತಡರಾತ್ರಿ ಬೆಳಕಿಗೆ ಬಂದಿದೆ. ಅಭಿಷೇಕ್ ಎನ್ನುವ ವಿದ್ಯಾರ್ಥಿಗೆ ಸರಿಯಾಗಿ ಈಜಲು ಬಾರದಿದ್ದರೂ ಕಾಲುವೆಗೆ ಧುಮುಕಿದ್ದಾನೆ. ತುಂಬಿ ಹರಿಯುತ್ತಿದ್ದ ಕಾಲುವೆಯಲ್ಲಿ ಆತ ಮುಳುಗಿದಾಗ ಆತನನ್ನು ರಕ್ಷಿಸಲು ಅರವಿಂದ್ ನೀರಿಗೆ ಧುಮುಕಿದ್ದಾನೆ. ಈ ಇಬ್ಬರು ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.