ತಾಪಂ ಸಭೆಗೆ ಕಡ್ಡಾಯ ಹಾಜರಾಗಿ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಅ. 10
ವಿವಿಧ ಇಲಾಖೆಗಳ ಅಧಿಕಾರಿಗಳು ತಾಪಂ ಸಾಮಾನ್ಯ ಸಭೆಗೆ ತಪ್ಪದೇ ಹಾಜರಾಗಬೇಕು. ಇಲಾಖೆಯ ಸಮರ್ಪಕ ಮಾಹಿತಿಯೊಂದಿಗೆ ಇಲಾಖೆಯ ಮುಖ್ಯ ಅಧಿಕಾರಿಗಳೆ ಭಾಗವಹಿಸಬೇಕು. ಸಭೆಗೆ ಬಾರದೇ ಗೈರಾದರೆ ಮೇಲಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಾಪಂ ಇಒ ರಮೇಶ್ ತಳವಾರ್ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ತಾಲೂಕು ಪಂಚಾಯಿತಿಯಲ್ಲಿ ಗುರುವಾರ ನಡೆದ 13ನೇ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿ, ಕೆಲ ತಿಂಗಳಿಂದ ತಾಪಂ ಸಾಮಾನ್ಯ ಸಭೆಗಳಿಗೆ ಎಷ್ಟೋ ಇಲಾಖೆ ಮುಖ್ಯ ಅಧಿಕಾರಿಗಳು ಭಾಗವಹಿಸದೆ, ತಮ್ಮ ಕಚೇರಿಯಲ್ಲಿರುವ ಸಹಾಯಕ ಅಧಿಕಾರಿಗಳನ್ನು ಸಭೆಗೆ ಕಳುಹಿಸುತ್ತಿರುವುದರಿಂದ ಸಭೆಯಲ್ಲಿ ಸದಸ್ಯರು ಕೇಳುವ ಪ್ರಶ್ನೆಗಳಿಗೆ ಸರಿಯಾದ ಮಾಹಿತಿ ಇಲ್ಲದೆ ಮೌನವಹಿಸುತ್ತಿರುವುದರಿಂದ ಸಭೆಯಲ್ಲಿ ವಿಷಯಗಳನ್ನು ಸಮರ್ಪಕವಾಗಿ ಚರ್ಚಿಸಲು ಆಗುತ್ತಿಲ್ಲ. ಮುಂದಿನ ಸಭೆಯಲ್ಲಿ ಗೈರಾಗುವಂತಿಲ್ಲ ಎಂದು ಖಡಕ್ಕಾಗಿ ಎಚ್ಚರಿಕೆ ನೀಡಿದರು.
ವರದಿ ನೀಡಬೇಕು: ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ವಸ್ತುಗಳಾದ ಶೇಂಗಾ ಬುಳುಸುಗಟ್ಟಿದ್ದರೆ, ಬೆಲ್ಲದಲ್ಲಿ ನೀರು ಹರಿಯುತ್ತಿರುತ್ತದೆ ಎಂದು ಸದಸ್ಯರು ದೂರಿದರು. ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ನೆಪದಲ್ಲಿ ಕಳಪೆ ಆಹಾರ ನೀಡುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆಯಲ್ಲಿ ಅಂಗನವಾಡಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರ ಗುಣಮಟ್ಟದಾಗಿದೆಯೋ ಅಥವಾ ಕಳಪೆಯಾಗಿದೆಯೋ ಎನ್ನುವುದನ್ನು ಇಲಾಖೆ ಅಧಿಕಾರಿಗಳು ಪರಿಶೀಲಿಸಿ ತಾಪಂಗೆ ವರದಿ ನೀಡಬೇಕು ಎಂದು ತಾಕೀತು ಮಾಡಿದರು.
ನಿಲ್ದಾಣದ ಸ್ವಚ್ಛತೆ ಕಾಪಾಡಿ: ಮರಿಯಮ್ಮನಹಳ್ಳಿ ಬಸ್ ನಿಲ್ದಾಣ ಸ್ವಚ್ಛತೆ ಇಲ್ಲದೆ, ಹಂದಿ, ದನಗಳಿಂದ ತುಂಬಿರುತ್ತದೆ. ಶೌಚಾಲಯ ದುರ್ವಾಸನೆಯಿಂದ ದುರ್ನಾತ ಬೀರುತ್ತಿದೆ. ಬಸ್ ನಿಲ್ದಾಣ ನಿರ್ಮಾಣಕ್ಕೆ ಗ್ರಾಪಂ ಸ್ಥಳ ಪಡೆದು ಸಣ್ಣದಾದ ನಿಲ್ದಾಣ ನಿರ್ಮಿಸಿ, ಉಳಿದ ಸ್ಥಳದಲ್ಲಿ ಬಾಡಿಗೆಗೆ ಶೆಡ್‌ಗಳನ್ನು ನೀಡಿ ಹಣ ಸಂಪಾದನೆಯಲ್ಲಿ ತೊಡಗಿರುವುದು ಸರಿಯಲ್ಲ. ನಿಲ್ದಾಣವನ್ನು ಸ್ವಚ್ಛ ಮತ್ತು ಸುಂದರವಾಗಿ ಇಡಬೇಕು ಎಂದು ಸದಸ್ಯ ಯು. ಸೋಮಪ್ಪ ಸಾರಿಗೆ ಅಧಿಕಾರಿಗಳನ್ನು ತರಾಟಗೆ ತೆಗೆದುಕೊಂಡರು.
ಜಿಪಂ, ಶಿಕ್ಷಣ, ಆರೋಗ್ಯ, ಅರಣ್ಯ, ಕೃಷಿ, ಭೂಸೇನಾ ನಿಗಮ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ವರದಿ ಮಂಡಿಸಿದರು. ತಾಪಂ ಅಧ್ಯಕ್ಷೆ ತಾರಿಹಳ್ಳಿ ಹಾಲಮ್ಮ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಕೆ. ದ್ರಾಕ್ಷಾಯಿಣಿ, ಸ್ಥಾಯಿ ಸಮಿತಿ ಅಧ್ಯಕ್ಷ ಕೋರಿ ಫಕ್ಕೀರಪ್ಪ ಸೇರಿದಂತೆ ತಾಪಂ ಸದಸ್ಯರು ಹಾಗೂ ಅಧಿಕಾರಿಗಳು ಹಾಜರಿದ್ದರು.