ಮಹನೀಯರಿಂದ ನಾಡು ಗುರುತಿಸಲಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 10
ಕನ್ನಡ ನಾಡನ್ನು ರಾಜ ಪ್ರಭುತ್ವದಿಂದ ಗುರುತಿಸುವ ಬದಲು ನಾಡಿನ ಸಾಂಸ್ಕೃತಿಕ ವೈಭವ ಮತ್ತು ಪರಂಪರೆಯ ಏಳಿಗೆಗಾಗಿ ದುಡಿದ ಮಹನೀಯರಿಂದ ಗುರುತಿಸುವ ಕಾರ್ಯವಾಗಬೇಕಿದೆ ಎಂದು ಚಿಂತಕ ಡಾ. ರಹಮತ್ ತರಿಕೇರಿ ಅಭಿಪ್ರಾಯಪಟ್ಟರು.
ನಗರದ ರಾಘವ ಕಲಾ ಮಂದಿರದಲ್ಲಿ ಮೂರು ದಿನಗಳ ಕಾಲ ನಡೆದ ನಾಡಹಬ್ಬ ಸಮಾರಂಭ- 2013ರ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ಒಂದು ನಾಡಿನ ಏಳಿಗೆಗೆ ಕಟಿಬದ್ಧರಾದ ಸುಸಂಸ್ಕೃತ ಸಂಪನ್ನ ಮನಸ್ಸುಗಳನ್ನು ಒಂದೆಡೆ ತಂದು, ಅವುಗಳ ಬೆಳಕಿನಲ್ಲಿ ನಾವು ಕನ್ನಡ ನಾಡನ್ನು ನೋಡುವ ದೃಷ್ಟಿಕೋನವನ್ನು ಹೊಂದಬೇಕು. ಹೀಗಿದ್ದಾಗ ಮಾತ್ರ ನಾಡಹಬ್ಬದಂತಹ ಸಾಂಸ್ಕೃತಿಕ ಉತ್ಸವಕ್ಕೆ ಅರ್ಥ ಬರುತ್ತದೆ ಎಂದು ತಿಳಿಸಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ ಮಾತನಾಡಿ, ಬಳ್ಳಾರಿಯಲ್ಲಿ ನಡೆಯುವ ಇಂತಹ ಸಾಂಸ್ಕೃತಿಕ ಕನ್ನಡ ನಾಡಹಬ್ಬ ರಾಜ್ಯದ ಯಾವುದೇ ಭಾಗದಲ್ಲಿ ನಡೆಯುತ್ತಿಲ್ಲ. ಗಡಿ ಜಿಲ್ಲೆಯಲ್ಲಿ ಕನ್ನಡತನ ಜಾಗೃತಗೊಳಿಸುವ ನಿಟ್ಟಿನಲ್ಲಿ ಕನ್ನಡ ನಾಡಹಬ್ಬ ವಿಶಿಷ್ಟತೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಬಳ್ಳಾರಿಯಲ್ಲಿ ನಡೆಯುತ್ತಿರುವ ನಾಡಹಬ್ಬ ಉತ್ತಮ ಪ್ರಯೋಗವಾಗಿದೆ ಎಂದರು.
ನಾಡಹಬ್ಬ ಆಚರಣಾ ಸಮಿತಿ ಅಧ್ಯಕ್ಷ ವೈ. ಬಸವರಾಜಪ್ಪ ಅಧ್ಯಕ್ಷತೆ ವಹಿಸಿದ್ದರು. ಅನಂತರ ವಿ. ಸಹನಾ ಮತ್ತು ಎಸ್.ಆರ್. ಸಹನಾ ಅವರಿಂದ ನೃತ್ಯ ಕಾರ್ಯಕ್ರಮ ಹಾಗೂ ಲಕ್ಷ್ಮಿ ಪವನಕುಮಾರ್ ಅವರಿಂದ ಭಾವಗೀತೆ ಗಾಯನ ಜರುಗಿತು. ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಪ್ರಾಸ್ತಾವಿಕ ಮಾತನಾಡಿದರು. ವೈಷ್ಣವಿ ಪ್ರಾರ್ಥಿಸಿದರು. ಎಸ್. ಮಂಜನಾಥ ನಿರೂಪಿಸಿದರು, ಎ.ಎಂ. ಜಯಶ್ರೀ ವಂದಿಸಿದರು. ಕೊನೆಯಲ್ಲಿ ರಂಗಜಂಗಮ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಅಣ್ಣಾಜಿ ಕೃಷ್ಣಾರೆಡ್ಡಿ ನಿರ್ದೇಶನದ ಸಮನ್ವಯದೆಡೆಗೆ ಎಂಬ ನಾಟಕ ಪ್ರದರ್ಶನವಾಯಿತು.